ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈನವಿರೇಳಿಸಿದ ವಜ್ರಮುಷ್ಟಿ ಕಾಳಗ

ಅರಮನೆ ಅಂಗಳದಲ್ಲಿ ಒಂದೂವರೆ ನಿಮಿಷದ ರೋಚಕ ಹೋರಾಟ
Last Updated 23 ಅಕ್ಟೋಬರ್ 2018, 11:11 IST
ಅಕ್ಷರ ಗಾತ್ರ

ಮೈಸೂರು: ಅಖಾಡಕ್ಕೆ ಕಾಲಿಟ್ಟ ನಾಲ್ವರು ಜಟ್ಟಿಗಳು ಒಮ್ಮೆಲೇ ಅಬ್ಬರಿಸಿದರು. ಕೆಂಪು ಕಣ್ಣುಗಳಿಂದ ರಕ್ತ ಕಾರುವಂತಿತ್ತು ಅವರ ಆ ನೋಟ. ಕೈಮುಗಿದು ನಿಂತು ಆಜ್ಞೆಗಾಗಿ ಕಾಯುತ್ತಿದ್ದರು.

ರಾಜವಂಶಸ್ಥರಿಂದ ಅಪ್ಪಣೆ ಲಭಿಸುತ್ತಿದ್ದಂತೆ ಒಬ್ಬರ ಮೇಲೊಬ್ಬರು ಮುಗಿಬಿದ್ದರು. ಬಲಗೈ ಮುಷ್ಟಿಯಲ್ಲಿ ಕಟ್ಟಿಕೊಂಡಿದ್ದ ದಂತದ ನಖದಿಂದ ಎದುರಾಳಿಯ ನೆತ್ತಿ ಮೇಲೆ ಅಪ್ಪಳಿಸಲು ಪ್ರಯತ್ನಿಸಿದರು. ಕೇವಲ ಒಂದೂವರೆ ನಿಮಿಷದಲ್ಲಿ ಜಟ್ಟಿಯ ನೆತ್ತಿಯಿಂದ ರಕ್ತಚಿಮ್ಮಿಯೇ ಬಿಟ್ಟಿತು.

ವಿಜಯದಶಮಿ ಅಂಗವಾಗಿ ಮೈಸೂರು ಅರಮನೆಯ ಕರಿಕಲ್ಲುತೊಟ್ಟಿಯಲ್ಲಿ ಸೋಮವಾರ ನಡೆದ ಐತಿಹಾಸಿಕ ವಜ್ರಮುಷ್ಟಿ ಕಾಳಗ ನೋಡುಗರ ಮೈನವಿರೇಳಿಸಿತು.

ಬೆಂಗಳೂರಿನ ರಾಘವೇಂದ್ರ ಜಟ್ಟಿ– ಚಾಮರಾಜನಗರದ ಪುರುಷೋತ್ತಮ ಜಟ್ಟಿ ಹಾಗೂ ಮೈಸೂರಿನ ಮಂಜುನಾಥ ಜಟ್ಟಿ–ಚನ್ನಪಟ್ಟಣದ ವಿದ್ಯಾಧರ ಜಟ್ಟಿ ಅವರನ್ನು ಏಕಕಾಲದಲ್ಲಿ ಪೈಪೋಟಿಗೆ ಬಿಡಲಾಯಿತು. ಒಂದೇ ಅಖಾಡದಲ್ಲಿ ಎರಡೂ ಕೈಗಳನ್ನು ಬೀಸುತ್ತಾ ಆವೇಶಭರಿತರಾಗಿ ಕಾಳಗ ನಡೆಸಿದರು.

ಪುರುಷೋತ್ತಮ ಜೆಟ್ಟಿ ನೆತ್ತಿಗೆ ನಖದಿಂದ ಕುಕ್ಕಿ ರಕ್ತ ಚಿಮ್ಮಿಸುವಲ್ಲಿ ರಾಘವೇಂದ್ರ ಜಟ್ಟಿ ಯಶಸ್ವಿಯಾದರು. ಅಖಾಡದ ಸುತ್ತ ಸೇರಿದ್ದ ಜನಸ್ತೋಮದಿಂದ ಆಗ ಹರ್ಷೋದ್ಗಾರ ಹೊರಹೊಮ್ಮಿತು. ಅಲ್ಲಿಗೆ ಕಾಳಗ ಕೊನೆಗೊಂಡಿತು. ಮೈಸೂರಿನ ಟೈಗರ್‌ ಬಾಲಾಜಿ ಹಾಗೂ ಶ್ರೀನಿವಾಸ್‌ ಜಟ್ಟಿ ದಶವಂದಿಗಳಾಗಿ (ರೆಫರಿ) ಕಾರ್ಯನಿರ್ವಹಿಸಿದರು.

ವಜ್ರಮುಷ್ಟಿ ಕಾಳಗಕ್ಕೆ ವೃತ್ತಾಕಾರದಲ್ಲಿ ಅಖಾಡ ನಿರ್ಮಾಣ ಮಾಡಲಾಗಿತ್ತು. ಅದಕ್ಕೆ ಚೆಂಡು ಹೂವು, ಸೇವಂತಿಗೆ ಹೂವು ಹಾಕಿ ಶೃಂಗರಿಸಲಾಗಿತ್ತು. ಅರಮನೆ ಆವರಣದಲ್ಲಿರುವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬೆಳಿಗ್ಗೆಯಿಂದ ಉಪವಾಸವಿದ್ದ ಜಟ್ಟಿಗಳನ್ನು ಉಸ್ತಾದ್‌ಗಳು ಕುಸ್ತಿಗೆ ಅಣಿಗೊಳಿಸಿದ್ದರು.

’ನನಗಿದು ಮೊದಲ ಕುಸ್ತಿ. ಅದಕ್ಕಾಗಿ ಒಂದು ತಿಂಗಳಿಂದ ತಾಲೀಮು ನಡೆಸಿದ್ದೆ. ನಮ್ಮದು ಜಟ್ಟಿಮನೆತನ. ಕುಸ್ತಿ ಎಂಬುದು ನಮ್ಮ ಉಸಿರಾಗಿದೆ. ಈ ಸಂಪ್ರದಾಯವನ್ನು ಮುಂದುವರಿಸಬೇಕು‘ ಎಂದ ರಾಘವೇಂದ್ರ ಜಟ್ಟಿ ಪ್ರತಿಕ್ರಿಯಿಸಿದರು.

ಕಾಳಗ ಕಣ್ತುಂಬಿಕೊಳ್ಳಲು ಅವರ ಇಡೀ ಕುಟುಂಬವೇ ಬಂದಿತ್ತು. ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿರ್ಬಂಧಿಸಲಾಗಿತ್ತು. ಹೀಗಾಗಿ, ಪ್ರೇಕ್ಷಕರ ಸಂಖ್ಯೆ ಕಡಿಮೆ ಇತ್ತು.

ಪೈಪೋಟಿ ಮುಗಿಯುತ್ತಿದ್ದಂತೆ ಅರಮನೆಯ ಕಲ್ಯಾಣ ಮಂಟಪದಲ್ಲಿ ಪೂಜೆ ಸಲ್ಲಿಸಿ ಹೊರಬಂದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಬನ್ನಿಮರದತ್ತ ಮೆರವಣಿಗೆ ಹೊರಟರು.

ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ತಾಯಿ ಪುಟ್ಟರತ್ನಮ್ಮಣ್ಣಿ ಹಾಗೂ ನಾದಿನಿ ವಿಶಾಲಾಕ್ಷಿ ನಿಧನದಿಂದ ಸ್ಥಗಿತಗೊಂಡಿದ್ದ ವಿಜಯದಶಮಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಅರಮನೆಯಲ್ಲಿ ಸೋಮವಾರ ನಡೆಸಲಾಯಿತು. ಯದುವೀರ ಅವರು ಬೆಳ್ಳಿ ರಥದ ಬದಲು ಕಾರಿನಲ್ಲಿ ತೆರಳಿ ವಿಜಯಯಾತ್ರೆ ಮೆರವಣಿಗೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT