ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡು: ವಾಲ್ಮೀಕಿ ಜಯಂತಿ ವೇಳೆ ಕಲ್ಲು ತೂರಾಟ, 40 ಮಂದಿ ಪೊಲೀಸ್‌ ವಶಕ್ಕೆ

Last Updated 13 ಅಕ್ಟೋಬರ್ 2019, 13:20 IST
ಅಕ್ಷರ ಗಾತ್ರ

ನಂಜನಗೂಡು: ಪಟ್ಟಣದಲ್ಲಿ ಭಾನುವಾರ ನಡೆದ ವಾಲ್ಮೀಕಿ ಜಯಂತಿಯ ವೇಳೆ ಕಲ್ಲುತೂರಾಟ ನಡೆದಿದ್ದು, 40 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಿದ್ದಾರೆ.

ತಾಲ್ಲೂಕು ಆಡಳಿತ ಮತ್ತು ನಾಯಕ ಸಮಾಜದ ವತಿಯಿಂದ ಇಲ್ಲಿನ ಜ್ಯೂನಿಯರ್ ಕಾಲೇಜು ಮೈದಾನದಿಂದ ಹೊರಟ ಮೆರವಣಿಗೆಯಲ್ಲಿ 12ಕ್ಕೂ ಹೆಚ್ಚು ಡಿ.ಜೆ. ಸಂಗೀತದ ವಾಹನಗಳಿದ್ದವು. ಒಂದೊಂದರಲ್ಲೂ ಒಂದೊಂದು ಹಾಡು ಹೊರಹೊಮ್ಮುತ್ತಿತ್ತು. ಇದರಿಂದ ವಿಪರೀತ ಶಬ್ದ ಉಂಟಾಗಿ ಸಾರ್ವಜನಿಕರಿಗೆ ಕಿರಿಕಿರಿಯಾಯಿತು. ಹೀಗಾಗಿ, ಪೊಲೀಸರು ಕೇವಲ 2 ಡಿ.ಜೆ ಸಂಗೀತದ ವಾಹನಗಳಿಗಷ್ಟೇ ಮೆರವಣಿಗೆಯಲ್ಲಿ ತೆರಳಲು ಬಿಟ್ಟು, ಉಳಿದ ವಾಹನಗಳನ್ನು ತಡೆದರು.‌ ಇದು ಯುವಕರ ಕೋಪಕ್ಕೆ ಕಾರಣವಾಯಿತು.

ಹೆಜ್ಜಿಗೆ ಲಿಂಗಣ್ಣ ವೃತ್ತದ ಬಳಿ ಯುವಕರು ಬಸ್‌ಗಳು, ವಾಹನಗಳ ಮೇಲೆ ನಡೆಸಿದ ಕಲ್ಲು ತೂರಾಟದಿಂದ ಹಲವು ವಾಹನಗಳ ಗಾಜುಗಳು ಪುಡಿಪುಡಿಯಾದವು. ಡಿವೈಎಸ್‌ಪಿ ಮಲ್ಲಿಕ್, ಸರ್ಕಲ್‌ ಇನ್‌ಸ್ಪೆಕ್ಟರ್ ಶೇಖರ್ ಹಾಗೂ ಗ್ರಾಮಾಂತರ ವಿಭಾಗದ ಇನ್‌ಸ್ಪೆಕ್ಟರ್ ಪುನೀತ್‌ ಅವರನ್ನು ಯುವಕರ ಗುಂಪು ಹಿಡಿದು ಎಳೆದಾಡಿದರು.

ಈ ವೇಳೆ ಮಲ್ಲಿಕ್ ಅವರ ಬಳಿ ಇದ್ದ ₹ 25 ಸಾವಿರ ಹಣವಿದ್ದ ಪರ್ಸ್ ಹಾಗೂ ಇತರೆ ದಾಖಲೆಗಳು ಕಳೆದು ಹೋಯಿತು. ಪುನೀತ್‌ ಅವರ ಬಟ್ಟೆ ಹರಿಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿ 40 ಮಂದಿಯನ್ನು ವಶಕ್ಕೆ ತೆಗೆದುಕೊಂಡರು.

ನಂತರ, ಶ್ರೀಕಂಠೇಶ್ವರ ಕಲಾಭವನದಲ್ಲಿ ನಡೆದ ವೇದಿಕೆ ಕಾರ್ಯಕ್ರಮವನ್ನು ಬಹಿಷ್ಕರಿಸಬೇಕು ಎಂದು ಆಗ್ರಹಿಸಿ ಕೆಲವು ಯುವಕರು ಕಲಾಭವನದತ್ತಲೂ ಕಲ್ಲು ತೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT