ಮಂಗಳವಾರ, ನವೆಂಬರ್ 19, 2019
25 °C

ವರ್ಷದ ಒಳಗಾಗಿ ವಾಲ್ಮೀಕಿ ಪ್ರತಿಮೆ: ಶಾಸಕ ಜಿ.ಟಿ.ದೇವೇಗೌಡ ಭರವಸೆ

Published:
Updated:
Prajavani

ಮೈಸೂರು: ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಯನ್ನು ನಗರದ ಮಿನಿ ವಿಧಾನಸೌಧದ ಎದುರಿನ ಉದ್ಯಾನದಲ್ಲಿ ಒಂದು ವರ್ಷದ ಒಳಗಾಗಿ ನಿರ್ಮಿಸಲಾಗುವುದು ಎಂದು ಶಾಸಕ ಜಿ.ಟಿ.ದೇವೇಗೌಡ ಭರವಸೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮೈಸೂರು ನಗರ ಮತ್ತು ತಾಲ್ಲೂಕು ನಾಯಕ ಜನಾಂಗದ ಸಂಘಟನೆ ಭಾನುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಾಲ್ಮೀಕಿ ಪ್ರತಿಮೆ ನಿರ್ಮಾಣವಾಗಬೇಕು ಎನ್ನುವುದು ಬಹುದಿನಗಳ ಒತ್ತಾಯ. ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಶೀಘ್ರವೇ ಈ ಕುರಿತು ಎಲ್ಲ ಪ್ರಕ್ರಿಯೆಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.

ವಾಲ್ಮೀಕಿಯು ರಾಮಾಯಣದ ಮೂಲಕ ಉನ್ನತ ಆದರ್ಶಗಳನ್ನು ನೀಡಿದ್ದಾರೆ. ಉತ್ತಮ ಸಾಮಾಜಿಕ ಮೌಲ್ಯಗಳನ್ನು ಸಮಾಜದಲ್ಲಿ ಪ್ರತಿಷ್ಠಾಪಿಸುವ ಕೆಲಸವನ್ನು ಅವರು ಬಹುವರ್ಷಗಳ ಹಿಂದೆಯೇ ಮಾಡಿದ್ದಾರೆ. ಸಮಾಜದಲ್ಲಾಗುವ ಅನ್ಯಾಯಗಳನ್ನು ಪ್ರತಿಭಟಿಸಬೇಕೆಂದು ಹೇಳಿಕೊಟ್ಟ ಮೊದಲಿಗರಲ್ಲಿ ವಾಲ್ಮೀಕಿ ಪ್ರಮುಖರು. ಇವರ ಆದರ್ಶಗಳನ್ನು ಪಾಲಿಸಿದರೆ ಜಯಂತಿಗೆ ನಿಜವಾದ ಅರ್ಥ ಸಿಗಲು ಸಾಧ್ಯ ಎಂದು ಅವರು ಸಲಹೆ ನೀಡಿದರು.

ಶಾಸಕ ಎಲ್‌.ನಾಗೇಂದ್ರ ಅಧ್ಯಕ್ಷತೆವಹಿಸಿ ಮಾತನಾಡಿ, ‘ವಾಲ್ಮೀಕಿ ರಚಿತ ರಾಮಾಯಣವು ನಮ್ಮ ಸಮಾಜವನ್ನು ಕಟ್ಟಲು ಸಹಾಯ ಮಾಡಿದೆ. ಹಾಗಾಗಿ, ರಾಮಾಯಣ ನಮ್ಮೆಲ್ಲರ ಪೂಜೆಗೆ ಪಾತ್ರವಾಗಿದೆ. ರಾಮಾಯಣದಲ್ಲಿನ ವಿಚಾರಗಳು ಸರ್ವಕಾಲಕ್ಕೂ ಅನ್ವಯವಾಗುವಂಥವು’ ಎಂದು ಹೇಳಿದರು.

ಧಾರವಾಡದ ಕರ್ನಾಟಕ ಕಲಾ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಡಿ.ಬಿ.ಕರಡೋಣಿ ಅವರು ವಾಲ್ಮೀಕಿ ಕುರಿತು ಮುಖ್ಯಭಾಷಣ ಮಾಡಿದರು.

ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ 9 ವಿದ್ಯಾರ್ಥಿಗಳಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಉಚಿತವಾಗಿ ಲ್ಯಾಪ್‌ಟಾಪ್‌ಗಳನ್ನು ನೀಡಲಾಯಿತು. ದಸರಾ ಜಂಬೂಸವಾರಿಯಲ್ಲಿ ಮರಗಾಲಿನ ಕುಣಿತ ಮಾಡಿ, ಪ್ರಥಮ ಬಹುಮಾನ ಪಡೆದ ಕಲಾವಿದ ಸಿದ್ದರಾಜು ಅವರನ್ನು ಸನ್ಮಾನಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಪೂರ್ಣಿಮಾ, ಉಪ ಮೇಯರ್ ಶಫಿ ಅಹಮದ್, ನಗರಪಾಲಿಕೆ ಸದಸ್ಯರಾದ ಶಿವಕುಮಾರ್, ಗುರುವಿನಾಯಕ, ಲೋಕೇಶ್ ಪಿಯಾ, ಶೋಭಾ, ಜಿ.ಪಂ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಅರುಣ್ ಕುಮಾರ್, ಮೈಸೂರು ತಾಲ್ಲೂಕು ನಾಯಕ ಸಂಘದ ಅಧ್ಯಕ್ಷ ಕೆಂಪನಾಯಕ, ಮುಖಂಡರಾದ ರಮ್ಮನಹಳ್ಳಿ ನಾಗರಾಜ್, ಮಧುವನ ಚಂದ್ರು, ನಾರಾಯಣ ಕಡಕೊಳ, ನಾರಾಯಣ, ಚೆಲುವರಾಜು, ವೆಂಕಟೇಶ್, ದೇವರಾಜ್ ಭಾಗವಹಿಸಿದ್ದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಕಲಾತಂಡಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು. ದೇವಸ್ಥಾನದ ಮುಂಭಾಗದಿಂದ ಕೆ.ಆರ್.ವೃತ್ತ, ಡಿ.ದೇವರಾಜ ಅರಸು ರಸ್ತೆ, ಮೆಟ್ರೊಪೋಲ್ ವೃತ್ತದ ಮೂಲಕ ಮೆರವಣಿಗೆಯು ಕಲಾಮಂದಿರ ತಲುಪಿತು.

ಪ್ರತಿಕ್ರಿಯಿಸಿ (+)