ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ನಗರದಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

ಜಿಟಿಜಿಟಿ ಮಳೆ, ಚಳಿಯ ವಾತಾವರಣದ ಮಧ್ಯೆ ಹಬ್ಬದ ಆಚರಣೆ
Last Updated 31 ಜುಲೈ 2020, 12:58 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಶುಕ್ರವಾರಜಿಟಿಜಿಟಿ ಮಳೆಯ ನಡುವೆಯೂ ಸಡಗರದಿಂದ ಆಚರಿಸಲಾಯಿತು.

ದಿನದಿಂದ ದಿನಕ್ಕೆ ಏರುತ್ತಿರುವ ಕೊರೊನಾ ಸೋಂಕಿಗೆ ಅಂಜದೇ ಹೆಣ್ಣು ಮಕ್ಕಳು ತಮ್ಮ ತಮ್ಮ ಮನೆಗಳಲ್ಲಿ ಹಬ್ಬವನ್ನು ಆಚರಿಸಿದರು. ಸ್ನೇಹಿತರು, ಬಂಧುಗಳನ್ನು ತಮ್ಮ ಮನೆಗಳಿಗೆ ಆಹ್ವಾನಿಸಿದರು. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹಬ್ಬದ ಸಂಭ್ರಮ ಕಡಿಮೆ ಇತ್ತು. ದೂರದ ಊರಿನಿಂದ ಬರುವಂತಹ ನೆಂಟರು ಗೈರಾಗಿದ್ದರು. ದೂರದ ಮನೆಯ ಸ್ನೇಹಿತರನ್ನೂ ಕರೆಯಲು ಹಲವರು ಹಿಂದೇಟು ಹಾಕಿದರು. ಬಹುತೇಕ ಕಡೆ ಹಬ್ಬದ ಆಹ್ವಾನವು ಆಯಾ ಬೀದಿಗೆ ಹಾಗೂ ಬಡಾವಣೆಗಷ್ಟೇ ಸೀಮಿತವಾಯಿತು.‌ ಮತ್ತೆ ಕೆಲವರು ಮೊದಲಿನಂತಲೇ ಅದ್ದೂರಿಯಾಗಿ ಹಬ್ಬ ಆಚರಿಸಿದರು. ಊರಿನ ನೆಂಟರಿಷ್ಟರಿಗೂ ಆಹ್ವಾನ ನೀಡಿದ್ದರು.

ಹೆಂಗಳೆಯರು ಗುರುವಾರ ರಾತ್ರಿಯೇ ಕಳಸವಿಡುವುದು, ಕಳಸಕ್ಕೆ ಸೀರೆಯುಡಿಸುವುದು ಸೇರಿದಂತೆ ವಿವಿಧ ಬಗೆಯ ಸಿದ್ಧತಾ ಕಾರ್ಯಗಳಲ್ಲಿ ತೊಡಗಿದ್ದರು. ಶುಕ್ರವಾರ ಬೆಳಿಗ್ಗೆಯಿಂದಲೇ ರಂಗವಲ್ಲಿ ಹಾಕುವ ಮೂಲಕ ಹಬ್ಬಕ್ಕೆ ಸ್ವಾಗತ ಕೋರಿದರು. ಮನೆಯ ಬಾಗಿಲಿಗೆ ಮಾವಿನ ತೋರಣ, ಹೂಗಳಿಂದ ಸಿಂಗರಿಸುವುದು ಎಲ್ಲೆಡೆ ನಡೆಯಿತು.

ಕಳಸಕ್ಕೆ ಆಭರಣಗಳನ್ನು ಹಾಕಿ, ಅದರ ಮುಂದೆ ನೋಟು, ನಾಣ್ಯಗಳನ್ನಿರಿಸಿ ಧನ್ಯತಾ ಭಾವ ಮೆರೆದವರು ಹಲವು ಮಂದಿ. ಕಳಸಕ್ಕೆ ಲಕ್ಷ್ಮಿಯ ಮೊಗವಾಡ ಹಾಕಿ ಕೈಮುಗಿದವರು ಅನೇಕರು.

ಕಳಸದ ಮುಂದೆ ವಿವಿಧ ಬಗೆಯ ಹಣ್ಣುಗಳು, ಸಿಹಿತಿಂಡಿಗಳು, ಚಕ್ಕುಲಿ, ಕೋಡಬಲೆ, ನಿಪ್ಪಟ್ಟು ಸೇರಿದಂತೆ ತಮ್ಮ ಮನಕ್ಕೊಪ್ಪುವ ತಿಂಡಿಗಳನ್ನು ನೈವೇದ್ಯಕ್ಕಿರಿಸಿದ್ದು, ಈ ಹಬ್ಬದ ವಿಶೇಷ ಎನಿಸಿತ್ತು. ಬಾಳೆಕಂದುಗಳನ್ನಿರಿಸಿ ಅದಕ್ಕೆ ಪುಟ್ಟ ಎಲ್‌ಇಡಿ ದೀಪಗಳಿಂದ ಅಲಂಕರಿಸಿ ಮನಮೋಹಕಗೊಳಿಸಿದ ದೃಶ್ಯಗಳೂ ಹಲವು ಮನೆಗಳಲ್ಲಿ ಗೋಚರಿಸಿದವು.

ಸಂಜೆಯಾಗುತ್ತಿದ್ದಂತೆ ತಮ್ಮ ತಮ್ಮ ಸ್ನೇಹಿತರನ್ನು, ಬಂಧುಗಳನ್ನು ಕುಂಕುಮ ಅರಿಸಿನಕ್ಕಾಗಿ ಆಹ್ವಾನಿಸಲಾಗಿತ್ತು. ಬಹುತೇಕರು ತಮ್ಮ ತಮ್ಮ ಗೆಳೆಯರು ಹಾಗೂ ಬಂಧು ಬಾಂಧವರ ಮನೆಗೆ ಹೋಗಿ ಬಾಗಿನ ಸ್ವೀಕರಿಸಿದರು.

ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು. ಕೊಲ್ಲಾಪುರದ ಮಹಾಲಕ್ಷ್ಮಿ ದೇವಾಲಯ, ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯಗಳು ಸೇರಿದಂತೆ ಹಲವು ದೇಗುಲಗಳಲ್ಲಿ ಜನಸಂದಣಿ ಹೆಚ್ಚಿತ್ತು.

ಹಬ್ಬದ ನಿಮಿತ್ತ ಬಹುತೇಕ ಮಂದಿ ರಜೆ ತೆಗೆದುಕೊಂಡಿದ್ದರಿಂದ ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ಕಡಿಮೆ ಇತ್ತು. ಕೆಲವು ಖಾಸಗಿ ಸಂಸ್ಥೆಗಳು ರಜೆ ನೀಡಿದ್ದವು. ಮಧ್ಯಾಹ್ನ ಆರಂಭವಾದ ಮಳೆಯು ಹಬ್ಬದ ಸಂಭ್ರಮಕ್ಕೆ ತೊಡಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT