ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗೆಬಗೆ ದೀಪಗಳೂ, ಸಮಸ್ಯೆಗಳೂ

Last Updated 14 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಮೈಸೂರು ಎಂದಾಕ್ಷಣ ಅರಮನೆ ನಗರಿ, ಸಾಂಸ್ಕೃತಿಕ ನಗರಿ ಎಂಬೆಲ್ಲ ವಿಶೇಷಣಗಳು ಕಣ್ಣಮುಂದೆ ಬರುತ್ತವೆ. ಅವೆಲ್ಲದಕ್ಕಿಂತ ಮಿಗಿಲಾಗಿ ಶತಮಾನಗಳಿಂದಲೂ ವಿಜೃಂಭಣೆಯಿಂದ ಆಚರಿಸಲಾಗುತ್ತಿರುವ ನಾಡಹಬ್ಬ ದಸರಾದ ಸಂಭ್ರಮ ನಮ್ಮೆದುರು ಸಾಗಿದಂತೆ ಭಾಸವಾಗುತ್ತದೆ. ದಸರಾ ಸಮಯದಲ್ಲಿ ಬಗೆ ಬಗೆಯ ದೀಪಗಳಿಂದ ಮೈಸೂರು ನಗರ ಝಗಮಗಿಸುತ್ತಿರುತ್ತದೆ. ಎಲ್ಲಿ ನೋಡಿದರಲ್ಲಿ ದೀಪಗಳು, ದೀಪಗಳ ಗುಚ್ಛಗಳು ಮೈಸೂರಿಗೆ ವಿವಿಧ ಬಣ್ಣಗಳ ಮೆರುಗು ನೀಡುತ್ತಿರುತ್ತವೆ. ಬೀದಿ ತುಂಬ ಹಬ್ಬದ ಸಡಗರ. ಬೆಳಕಿನ ಚಿತ್ತಾರ ಇರುತ್ತದೆ.

ಇಂಥ ಸೊಬಗು ದಸರಾ ಸಂದರ್ಭದಲ್ಲಾದರೆ ಉಳಿದ ದಿನಗಳಲ್ಲಿ ಅರಮನೆ ನಗರಿಯನ್ನು ರಾತ್ರಿ ಕಾಣುವುದು ಹೇಗೆ? ಬೀದಿಯನ್ನು ಬೆಳಗುವ ದೀಪಗಳ ಸಂಖ್ಯೆಗಳೆಷ್ಟು, ಯಾವ ಬಗೆಯ ದೀಪಗಳು ಮೈಸೂರಿಗೆ ಮೆರುಗು ನೀಡುತ್ತಿವೆ ಎಂಬುದರ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ.

128.42 ಚದರ ಕಿಲೋ ಮೀಟರ್‌ ವ್ಯಾಪ್ತಿಯನ್ನು ಹೊಂದಿರುವ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 65 ವಾರ್ಡ್‌ಗಳಿವೆ. ನಗರದ ಒಟ್ಟು ರಸ್ತೆ 1,182 ಕಿ.ಮೀ. ಇದೆ. ಈ ರಸ್ತೆಯುದ್ದಕ್ಕೂ ಬಹುತೇಕ ಕಡೆ ಬೀದಿದೀಪಗಳನ್ನು ಪಾಲಿಕೆ ವತಿಯಿಂದ ಅಳವಡಿಸಲಾಗಿದೆ. ಪಾಲಿಕೆಯ ಇತ್ತೀಚಿನ ಮಾಹಿತಿ ಪ್ರಕಾರವೇ ನಗರದಲ್ಲಿ 13,885 ವಿದ್ಯುತ್‌ ಕಂಬಗಳಿವೆ. ಇವುಗಳ ಪೈಕಿ 3,215 ಕಂಬಗಳಲ್ಲಿ ಬೀದಿ ದೀಪಗಳೇ ಇಲ್ಲ. ಇದಕ್ಕೆ ಕಾರಣ ಕೆಟ್ಟು ಹೋಗಿರುವುದು. ಕೆಟ್ಟು ಹೋಗಿರುವ ಕಡೆಗಳಲ್ಲಿ ಹೊಸದಾಗಿ ದೀಪಗಳನ್ನು ಅಳವಡಿಸುತ್ತಿಲ್ಲ. ನಗರದೆಲ್ಲೆಡೆ ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸುವ ಯೋಜನೆ ಕಾರ್ಯಗತಗೊಳಿಸುವ ಸಂಬಂಧ ಸಮೀಕ್ಷಾ ಕಾರ್ಯ ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಸಮಸ್ಯೆಗೆ ತೆರೆ ಎಳೆಯುವ ಪ್ರಯತ್ನ ನಡೆಯುತ್ತಿದೆ ಎನ್ನುವುದು ಪಾಲಿಕೆಯ ಮಾಹಿತಿ.

ರಾತ್ರಿ ವೇಳೆ ಮೈಸೂರು ನಗರ ಸುಂದರವಾಗಿ ಕಾಣಲು, ರಾತ್ರಿ ಸಂಚರಿಸುವವರಿಗೆ ಬೆಳಕು ತೋರಲು ನಗರದಲ್ಲಿ 65,733 ಬೀದಿದೀಪಗಳಿವೆ. ಜತೆಗೆ ಪ್ರಮುಖ ವೃತ್ತಗಳಲ್ಲಿ 193 ಹೈಮಾಸ್ಟ್‌ ದೀಪಗಳೂ, ಸುಮಾರು 2,200 ಆಲಂಕಾರಿಕ ದೀಪಗಳು (ಆರ್ನಮೆಂಟಲ್ ಲೈಟ್ಸ್‌) ಬೆಳಕು ಚಿಮ್ಮಿಸುತ್ತಿವೆ. ಇವೆಲ್ಲವೂ ಸೇರಿ ಮೈಸೂರು ನಗರದಲ್ಲಿ ಒಟ್ಟು 68,126 ದೀಪಗಳು ಬೆಳಕು ಸೂಸುತ್ತಿವೆ.

ಬಗೆ ಬಗೆ ವಿಧಗಳು:
ನಗರದಲ್ಲಿ ಪ್ರಸ್ತುತ ಸಾಂಪ್ರದಾಯಿಕ ದೀಪಗಳ ಜತೆಗೆ ವಿವಿಧ ಬಗೆಯ, ಮಾದರಿಯ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಒಂದೇ ಬಗೆಯ ದೀಪಗಳಿಂದ ಎಲ್ಲ ಕಡೆಯೂ ಸೂಕ್ತವಾದ ರೀತಿಯಲ್ಲಿ ಬೆಳಕು ಚೆಲ್ಲಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ ಸುಮಾರು 9 ಬಗೆಯ ದೀಪಗಳನ್ನು ನಗರದಲ್ಲಿ ಕಾಣಬಹುದು. ಅವುಗಳಲ್ಲಿ ಟ್ಯೂಬ್‌ಲೈಟ್‌ಗಳು, ಸೋಡಿಯಂ ದೀಪಗಳು, ಮರ್ಕ್ಯುರಿ ದೀಪಗಳು (250 ವಾಟ್‌), ಮೆಟಲ್‌ ಹೆಲೈಡ್‌ಗಳು, ಸಿಎಫ್‌ಎಲ್‌ಗಳು, ಎಲ್‌ಇಡಿ ದೀಪಗಳು, ಎಲ್‌ಇಡಿ ಫ್ಲಡ್‌ ಲೈಟ್‌ಗಳು (15 ವಾಟ್‌), ಹೈಮಾಸ್ಟ್‌ ದೀಪ್‌ಗಳು, ಆಲಂಕಾರಿಕ ದೀಪಗಳು ಸೇರಿವೆ.

ಸೋಡಿಯಂ ದೀಪಗಳಲ್ಲೇ 150 ವಾಟ್‌, 250, 400 ವಾಟ್‌ನ ದೀಪಗಳಿವೆ. ಮೆಟಲ್‌ ಹೆಲೈಡ್‌ಗಳಲ್ಲಿ 250, 400 ವಾಟ್‌ನ ದೀಪಗಳನ್ನು ಅಳವಡಿಸಲಾಗಿದೆ. 18ರಿಂದ 24, 32ರಿಂದ 42 ವಾಟ್‌ನ ಸಿಎಫ್‌ಎಲ್‌ಗಳು ಬೀದಿಗಳನ್ನು ಬೆಳಗುತ್ತಿವೆ. 7007 ಸಂಖ್ಯೆಯಲ್ಲಿ ಇರುವ ಎಲ್‌ಇಡಿ ದೀಪಗಳಲ್ಲಿ 18ರಿಂದ 32, 65, 72, 90, 150 ವಾಟ್‌ನ ದೀಪಗಳನ್ನು ಅಳವಡಿಸಲಾಗಿದೆ. ನಗರದಲ್ಲಿರುವ ಇಷ್ಟೂ ಬೀದಿ ದೀಪಗಳ ವಾರ್ಷಿಕ ಬಿಲ್‌ ಸುಮಾರು ₹ 17ರಿಂದ 18 ಕೋಟಿಯನ್ನು ಪಾಲಿಕೆಯು ಸೆಸ್ಕ್‌ಗೆ ಪಾವತಿಸುತ್ತಿದೆ. ಇವುಗಳ ನಿರ್ವಹಣೆಗಾಗಿ ಪಾಲಿಕೆಯು ₹ 4.26 ಕೋಟಿ ವೆಚ್ಚ ಮಾಡುತ್ತಿದೆ.

ಸೌಂದರ್ಯ ಹೆಚ್ಚಿಸಿದ ಆಲಂಕಾರಿಕ ಬೀದಿ ದೀಪಗಳು:

ಮೈಸೂರು ಪಾರಂಪರಿಕ ನಗರ ಎಂದೇ ಹೆಸರು ಪಡೆದಿದೆ. ಅಲ್ಲದೆ, ಸ್ವಚ್ಛನಗರ ಎಂಬ ಅಭಿದಾನವನ್ನೂ ಪಡೆದಿತ್ತು. ಅಲ್ಲದೆ, ದೇಶ, ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವ ಪಟ್ಟಣವೂ ಹೌದು. ಇಂಥ ನಗರ ಸುಂದರವಾಗಿ ಕಾಣಬೇಕು ಎಂಬುದು ಪಾಲಿಕೆಯ ಉದ್ದೇಶ. ಈ ಉದ್ದೇಶದಿಂದ ಆಲಂಕಾರಿಕ ದೀಪಗಳನ್ನು ನಗರದಲ್ಲಿ ಅಳವಡಿಸಿದ್ದು, ಬೀದಿಗಳಿಗೆ ಬೆಳಕನ್ನೂ, ನಗರಕ್ಕೆ ಸುಂದರ ರೂಪವನ್ನೂ ನೀಡುತ್ತಿವೆ ಎನ್ನುತ್ತಾರೆ ಪಾಲಿಕೆಯ ವಿದ್ಯುತ್‌ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಎಂ.ಜಿ.ನಾಗೇಶ್‌.

ಬರಲಿವೆ ಎಲ್‌ಇಡಿ ದೀಪಗಳು:

ವಿದ್ಯುತ್‌ ಉಳಿತಾಯ ಮಾಡುವ ಉದ್ದೇಶದಿಂದ ಈಗ ಇರುವ ಬೀದಿ ದೀಪಗಳನ್ನು ಬದಲಿಸಿ ನಗರದಾದ್ಯಂತ ಎಲ್‌ಇಡಿ ದೀಪಗಳ ಅಳವಡಿಕೆಗೆ ಮಹಾನಗರ ಪಾಲಿಕೆ ತೀರ್ಮಾನಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸಮೀಕ್ಷಾ ಕಾರ್ಯ ನಡೆಯುತ್ತಿದೆ. ಕೆಲವು ವಲಯಗಳಲ್ಲಿ ಸಮೀಕ್ಷೆ ಪೂರ್ಣಗೊಂಡಿದೆ. ಉಳಿದ ಕಡೆ ತಿಂಗಳೊಳಗೆ ಪೂರ್ಣಗೊಳ್ಳಲಿದೆ. ವೈಜ್ಞಾನಿಕ ರೀತಿಯಲ್ಲಿ ಸಮೀಕ್ಷೆ ನಡೆಯುತ್ತಿದ್ದು, ಪ್ರತಿ ಕಂಬಗಳ ಬಳಿ ತೆರಳಿ ಸಮೀಕ್ಷೆ ನಡೆಸಲಾಗುತ್ತದೆ. ಇದುವರೆಗೆ 13,885 ಕಂಬಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿ ದೀಪ ಇರುವ, ಇಲ್ಲದೆ ಇರುವ ಕಂಬಗಳನ್ನೂ ಗುರುತು ಮಾಡಿಕೊಳ್ಳಲಾಗುತ್ತಿದೆ.

ಈಗಾಗಲೇ ಅಳವಡಿಸಿರುವ ಎಲ್‌ಇಡಿ ದೀಪಗಳನ್ನು ಹೊರತುಪಡಿಸಿ ಉಳಿದ ಎಲ್ಲ ದೀಪಗಳನ್ನೂ ತೆರವುಗೊಳಿಸಲಾಗುತ್ತದೆ. ಅಲ್ಲೆಲ್ಲ ಹೊಸ ಎಲ್‌ಇಡಿ ದೀಪಗಳು ಬೆಳಗಲಿವೆ. ಸಾಂಪ್ರದಾಯಿಕ ದೀಪಗಳನ್ನು ಎಲ್ಇಡಿಗೆ ಬದಲಾಯಿಸಲು ಬಜೆಟ್‌ನಲ್ಲೂ ಘೋಷಣೆ ಮಾಡಲಾಗಿದೆ.

ರಸ್ತೆಗಳನ್ನು ವರ್ಗೀಕರಣ ಮಾಡಿ ಅವುಗಳಿಗೆ ಪೂರಕವಾಗಿ ಬೀದಿ ದೀಪಗಳನ್ನು ಅಳವಡಿಸಲಾಗುತ್ತದೆ. ಒಂದು ಕಂಬಕ್ಕೆ ದೀಪ ಅಳವಡಿಸಬೇಕಾದರೆ ‘ಲಕ್ಸ್‌ ಮೀಟರ್‌’ (ದೀಪದ ಪ್ರಖರತೆಯನ್ನು ಅಳೆಯುವ ಮಾಪನ) ಮೂಲಕ ಪರೀಕ್ಷಿಸಲಾಗುತ್ತದೆ.

ಶೇ 50ರಷ್ಟು ವಿದ್ಯುತ್‌ ಉಳಿತಾಯ:
ನಗರದಲ್ಲಿ ನಡೆಯುತ್ತಿರುವ ಸಮೀಕ್ಷೆ ಪೂರ್ಣಗೊಂಡ ಬಳಿಕ ಅದರ ವರದಿಯನ್ನು ಸಲ್ಲಿಸಲಾಗುತ್ತದೆ. ಯೋಜನೆ ಅನುಷ್ಠಾನಗೊಂಡ ಬಳಿಕ ವಿದ್ಯುತ್‌ ಬಳಕೆಯಲ್ಲಿ ಶೇ 50ರಷ್ಟು ಉಳಿತಾಯವಾಗಲಿದೆ. ಯಾವುದೇ ಹೊಸ ಯೋಜನೆಯಿಂದ ಶೇ 45–50ರಷ್ಟು ಉಳಿತಾಯ ಆಗುವುದಾದರೆ ಮಾತ್ರ ಅಂಥವುಗಳನ್ನು ಅನುಷ್ಠಾನ ಮಾಡಲಾಗುತ್ತದೆ ಎಂಬುದು ಗಮನಾರ್ಹ.

ಹಳೆಯ ದೀಪಗಳ ಬದಲಾವಣೆಯು ಪಿಪಿಪಿ ಮಾದರಿಯಲ್ಲಿ ನಡೆಯಲಿದ್ದು, 6 ತಿಂಗಳ ಕಾಲಾವಧಿ ನೀಡಲಾಗುತ್ತದೆ. ಈ ಅವಧಿಯೊಳಗೆ ಎಲ್ಲ ದೀಪಗಳನ್ನು ಎಲ್‌ಇಡಿಗೆ ಪರಿವರ್ತಿಸಬೇಕಾಗುತ್ತದೆ. ಬಳಿಕ ಎಲ್ಲ ಕಡೆಯೂ ಶುಭ್ರ ದೀಪ ಬೆಳಗುತ್ತದೆ. 10 ವರ್ಷ ನಿರ್ವಹಣೆ ಹೊಣೆಯೂ ಅಳವಡಿಸಿದ ಸಂಸ್ಥೆಯ ಪಾಲಿಗೇ ಇರುತ್ತದೆ.

ಜತೆಗೆ ಈಗ ಪಾಲಿಕೆಯು ಸೆಸ್ಕ್‌ಗೆ ಪಾವತಿಸುತ್ತಿರುವ ವಿದ್ಯುತ್‌ ಬಿಲ್‌ ₹ 9 ಕೋಟಿಗೆ ಇಳಿಯುತ್ತದೆ. ನಿರ್ವಹಣೆ ವೆಚ್ಚ ಶೂನ್ಯವಾಗುತ್ತದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 10 ವರ್ಷಕ್ಕೆ ₹ 45 ಕೋಟಿ ಉಳಿತಾಯವಾಗುತ್ತದೆ. ಸಾಂಪ್ರದಾಯಿಕ ದೀಪಗಳಲ್ಲಿ ಚೋಕ್ ಸಮಸ್ಯೆ ಬರುತ್ತಿರುತ್ತದೆ. ಆದರೆ, ಎಲ್‌ಇಡಿಗಳಲ್ಲಿ ಡ್ರೈವರ್‌ ಇರುವುದರಿಂದ ಸಮಸ್ಯೆಯೂ ಉದ್ಭವಿಸದು. 250 ವಾಟ್‌ನ ಸೋಡಿಯಂ ದೀಪದಲ್ಲಿ ಸಿಗುವ ಬೆಳಕು ಕೇವಲ 65 ವಾಟ್‌ನ ಎಲ್‌ಇಡಿ ದೀಪಗಳಿಂದ ಸಿಗುತ್ತದೆ.

ಸ್ವಿಚ್‌ ಪಾಯಿಂಟ್‌ಗಳೇ ಇರುವುದಿಲ್ಲ:
ಒಂದೊಂದು ಪ್ರದೇಶ ಅಥವಾ ಸೀಮಿತ ಬೀದಿಗಳ ದೀಪಗಳನ್ನು ಉರಿಸುವ ಹಾಗೂ ನಂದಿಸುವ ಉದ್ದೇಶಕ್ಕೆ ಆಯಾ ಕಡೆ ಸ್ವಿಚ್‌ ಪಾಯಿಂಟ್‌ಗಳನ್ನು ಅಳಡಿಸಲಾಗಿರುತ್ತದೆ. ಬೀದಿ ದೀಪಗಳ ನಿರ್ವಹಣೆಯನ್ನು ಗುತ್ತಿಗೆ ನೀಡಲಾಗುತ್ತದೆ. ನಗರದ ದೀಪಗಳ ನಿರ್ವಹಣೆಯನ್ನು 26 ಪ್ಯಾಕೇಜ್‌ಗಳಲ್ಲಿ ನೀಡಲಾಗಿದೆ. ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡದೆ ಇರುವುದರಿಂದ ಹಗಲಲ್ಲೂ ಕೆಲವು ಕಡೆ ಬೀದಿ ದೀಪಗಳು ಬೆಳಗುತ್ತಿರುವುದನ್ನು ಕಂಡಿರಬಹುದು.

ಈಗ ಇರುವ ಸ್ವಿಚ್‌ ಪಾಯಿಂಟ್‌ಗಳು ಕೆಟ್ಟು ಹೋಗಿ ಅವುಗಳನ್ನು ದುರಸ್ತಿ ಮಾಡದೆ ಇದ್ದರೂ ಸಮಸ್ಯೆ ಎದುರಾಗಬಹುದು. ಅಥವಾ, ದೀಪ ನಂದಿಸಲು ಮರೆಯುವುದರಿಂದಲೂ ಹಗಲಲ್ಲೂ ದೀಪಗಳು ಉರಿಯಲು ಸಾಧ್ಯವಿದೆ ಎನ್ನುತ್ತಾರೆ ಅಧಿಕಾರಿಗಳು.

ಹೊಸ ವ್ಯವಸ್ಥೆ ಅಳವಡಿಸಿದ ಬಳಿಕ ಸ್ವಿಚ್‌ ಪಾಯಿಂಟ್‌ಗಳೇ ಇರುವುದಿಲ್ಲ. ಸಿಸಿಎಂಎಸ್‌ (ಸೆಂಟ್ರಲ್‌ ಕಂಟ್ರೋಲ್‌ ಅಂಡ್‌ ಮಾನಿಟರಿಂಗ್‌ ಸಿಸ್ಟಮ್‌) ಪಾಲಿಕೆ ಆವರಣದಲ್ಲೇ ಇರುತ್ತದೆ. ಇದರಿಂದ ಇಡೀ ನಗರದ ಎಲ್ಲ ದೀಪಗಳನ್ನು ಏಕಕಾಲದಲ್ಲಿ ಬೆರಳ ತುದಿಯಲ್ಲೇ ಬೆಳಗಿಸಬಹುದು. ಯಾವ ದೀಪ ಉರಿಯುತ್ತಿಲ್ಲ ಎಂಬ ಮಾಹಿತಿಯೂ ಲಭ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT