ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ, ಪಳನಿಸ್ವಾಮಿ ವಿರುದ್ಧ ಕಟು ಟೀಕೆ

ಮಠಾಧೀಶರ ವಿರುದ್ಧ ಧಿಕ್ಕಾರ ಕೂಗಿದ ವಾಟಾಳ್‌ ನಾಗರಾಜ್‌
Last Updated 21 ಫೆಬ್ರುವರಿ 2021, 15:19 IST
ಅಕ್ಷರ ಗಾತ್ರ

ಮೈಸೂರು: ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಮಠಾಧೀಶರು ಸೇರಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಟಾಳ್‌ ನಾಗರಾಜ್‌ ಭಾನುವಾರ ನಗರದಲ್ಲಿ ಹರಿಹಾಯ್ದರು.

ಮಠಾಧೀಶರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸುತ್ತಲೇ ನಗರದ ಹಾರ್ಡಿಂಜ್‌ ವೃತ್ತದಲ್ಲಿ ಪ್ರತಿಭಟಿಸಿದ ವಾಟಾಳ್‌, ‘ಮಠಾಧೀಶರು ಬಸವಣ್ಣನ ತತ್ವ ಒಪ್ಪವುದಾದರೇ ಹೋರಾಟ ಮಾಡಬಾರದು. ಜಾತಿ ಮೀಸಲಾತಿಯ ಹೋರಾಟದಿಂದ ನಿಮ್ಮ ಶಕ್ತಿಗೆ ಕುಂದಾಗುತ್ತೆ. ಜಾತಿ ಹೋರಾಟ ಬಿಟ್ಟು ಭಾಷಾ ಚಳವಳಿಗೆ ಬನ್ನಿ’ ಎಂದರು.

‘ಮಠಾಧೀಶರು ಬೀದಿಗಿಳಿದು ಪ್ರತಿಭಟಿಸಲು ಮಾಯಾವಿ ಯಡಿಯೂರಪ್ಪನೇ ಕಾರಣ. ಜಾತಿಯ ವಿಷ ಬೀಜ ಬಿತ್ತಿದವರು ಬಿಎಸ್‌ವೈ. ಒಂದು ನಿಮಿಷವೂ ಅಧಿಕಾರದಲ್ಲಿ ಮುಂದುವರೆಯಬಾರದು. ಪ್ರಾಮಾಣಿಕರಾಗಿದ್ದರೇ ಕೂಡಲೇ ರಾಜೀನಾಮೆ ನೀಡಬೇಕು. ಒಂದೆಡೆ ನೀವು ರಾಜ್ಯವನ್ನು ಹಾಳು ಮಾಡುತ್ತಿದ್ದರೆ, ನಿಮ್ಮ ಮಗ ಮತ್ತೊಂದೆಡೆ ಹಾಳು ಮಾಡುತ್ತಿದ್ದಾನೆ. ಇನ್ನಾದರೂಜಾತಿ ರಾಜಕಾರಣ ಬಿಟ್ಟು, ಭಾಷಾ ರಾಜಕಾರಣ ಮಾಡಿ’ ಎಂದು ಅವರು ಕಿಡಿಕಾರಿದರು.

ದುಡ್ಡಿಲ್ಲ ಅಂತ ಕೇಳ್ತಿಲ್ಲ:

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಕುರಿತಂತೆ ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯಿಸಿದ ವಾಟಾಳ್, ‘ಸಿದ್ದರಾಮಯ್ಯ ಒಬ್ಬ ಪ್ರಬುದ್ಧ ರಾಜಕಾರಣಿ. ಈ ಹಂತಕ್ಕೆ ಇಳಿಯಬಾರದು. ವಾಟಾಳ್ ಹತ್ತಿರ ದುಡ್ಡಿಲ್ಲ ಅಂತ ನನ್ನ ಬಳಿ ಯಾರೊಬ್ಬರೂ ದೇಣಿಗೆ ಕೇಳಿಲ್ಲ‌’ ಎಂದು ಲೇವಡಿ ಮಾಡಿದರು.

‘ಸಿದ್ದರಾಮಯ್ಯ ಸೇರಿದಂತೆ ಯಾರೇ ಆಗಲಿ, ಜೆಡಿಎಸ್‌–ಬಿಜೆಪಿ ಆಗಲಿ, ಜಾತಿ ಹೆಸರಲ್ಲಿ ರಾಜಕಾರಣ ಬೇಡ. ಭಾಷಾ ರಾಜಕಾರಣಕ್ಕೆ ಬನ್ನಿ’ ಎಂದು ಅವರು ಒತ್ತಾಯಿಸಿದರು.

‘ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಹುಚ್ಚು ಹಿಡಿದಿದೆ. ಅವರಪ್ಪ ಬಾಳಾ ಠಾಕ್ರೆಗೂ ಹುಚ್ಚು ಹಿಡಿದೇ ಸತ್ತು ಹೋದ. ಅರ್ಧ ಬಾಂಬೆ ನಮಗೆ ಸೇರಬೇಕು. ಸೊಲ್ಲಾಪುರ ನಮಗೆ ಸೇರಬೇಕು. ಹೀಗಾಗಿ ಬೆಳಗಾವಿ ಗಡಿ, ಕಾರವಾರ ಆಗಲಿ, ಸೊಲ್ಲಾಪುರ, ಬೀದರ್ ಆಗಲಿ ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ‌ ಇಲ್ಲ’ ಎಂದುಗಡಿಯಲ್ಲಿ ಭಾಷಿಕರ ಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ವಾಟಾಳ್‌ ನಾಗರಾಜ್‌ ಗುಡುಗಿದರು.

ಪಳನಿಸ್ವಾಮಿ 420: ಬಿಎಸ್‌ವೈ ನಾಲಾಯಕ್

‘ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ 420. ಜಯಲಲಿತಾಗೆ ಕೈಕೊಟ್ಟ. ಇದೀಗ ಎಲ್ಲರಿಗೂ ಕೈ ಕೊಡ್ತಿದ್ದಾನೆ. ಯಡಿಯೂರಪ್ಪ, ನಿಮ್ಮ ಗುಪ್ತಚರ ಇಲಾಖೆ ಏನ್ ಮಾಡ್ತಿದೆ. ನಿಮಗೆ ಮಾಹಿತಿಯೇ ಇಲ್ವಾ. ಹಂಗಾದ್ರೇ ನೀವು ನಾಲಾಯಕ್ ಮುಖ್ಯಮಂತ್ರಿ’ ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

ತಮಿಳುನಾಡಿನಲ್ಲಿ ನಡೆದಿರುವ ಕಾವೇರಿ ನೀರಾವರಿ ಯೋಜನೆ ಕಾಮಗಾರಿ ವಿಚಾರವಾಗಿ ಮಾತನಾಡಿದ ಅವರು, ‘ಕೇಂದ್ರದ ಆರ್ಥಿಕ ನೆರವಿನಿಂದ ₹ 6941 ಕೋಟಿ ವೆಚ್ಚದಲ್ಲಿ ಹುಂಡಾರು, ವೈಗೈ ನದಿಗಳನ್ನು ಕಾವೇರಿಗೆ ಜೋಡಿಸಲು ಪಳನಿಸ್ವಾಮಿ ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ. 118 ಕಿ.ಮೀ. ಉದ್ದದ ಕಾಲುವೆ ಮೂಲಕ ಗುಂಡಾರು ನದಿಗೆ ಜೋಡಣೆ ಮಾಡುತ್ತಿದ್ದಾರೆ. ಆದರೆ, ನಮ್ಮಲ್ಲಿ ಮೇಕೆದಾಟು ಯೋಜನೆ ಮಾಡಿದ್ರೆ ವಿರೋಧಿಸುತ್ತಾರೆ. ಆದರೆ, ಈ ಬಗ್ಗೆ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ನಾಯಕರು ಏಕೆ ಧ್ವನಿ ಎತ್ತುತ್ತಿಲ್ಲ. ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಈ ಯೋಜನೆಗೆ ಅಸ್ತು ಎಂದಿದ್ದಾರೆ’ ಎಂದು ವಾಟಾಳ್‌ ಕಿಡಿಕಾರಿದರು.

‘ತಮಿಳುನಾಡಿನ ನೀರಾವರಿ ಯೋಜನೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು. ಹೊಸೂರು ಕನ್ನಡಿಗರದ್ದು. ಅಲ್ಲಿ ಯೋಜನೆ ವಿರೋಧಿಸಿ ಹೋರಾಟ ಮಾಡುವೆ. ಇಂದಿನಿಂದ ತಮಿಳುನಾಡು, ಪಳನಿಸ್ವಾಮಿ, ಮೋದಿ ವಿರುದ್ಧ ಹೋರಾಟ ಆರಂಭಿಸುವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT