ಮಂಗಳವಾರ, ಸೆಪ್ಟೆಂಬರ್ 17, 2019
21 °C
ಯುವ ತಲೆಮಾರನ್ನು ವಿವಿಧ ಚಮತ್ಕಾರಗಳಿಂದ ಸೆಳೆಯುವ ಸೋದರರು

ವೀರಗಾಸೆ ಕಲೆಯ ಸೋದರ ಸಾಧಕರು

Published:
Updated:
Prajavani

ಹಂಪಾಪುರ: ಅಳಿಯುತ್ತಿರುವ ಜನಪದ ಕಲೆಯನ್ನು ಉಳಿಸಲೇಬೇಕು ಎಂದು ಛಲತೊಟ್ಟ ಸೋದರರಿಬ್ಬರು ಪರಂಪರೆಯಿಂದ ಬಂದ ಕಲೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಪ್ರಯತ್ನವನ್ನು ಸದ್ದಿಲ್ಲದೇ ಮಾಡುತ್ತಿದ್ದಾರೆ.

ಎಚ್.ಡಿ.ಕೋಟೆ ತಾಲ್ಲೂಕಿನ ತೆರಣಿಮುಂಟಿ ಗ್ರಾಮದ ಗಣೇಶ ಮತ್ತು ಕೆಂಪದೇವಮ್ಮ ದಂಪತಿ ಪುತ್ರರಾದ ಬಸವರಾಜು (32) ಮತ್ತು ಯಶವಂತ್ (45) ಅವರು ತಮ್ಮ ವಂಶಜರಿಂದ ಬಂದ ವೀರಗಾಸೆ ಪರಂಪರೆಯನ್ನು ಜತನದಿಂದ ಮುಂದುವರಿಸಿಕೊಂಡು ಬಂದಿದ್ದಾರೆ. ಜತೆಗೆ, ಈ ಕಲೆಯನ್ನು ಮುಂದಿನ ಪೀಳಿಗೆಗೆ ನೀಡಲು ತಮ್ಮ ಸೋದರಿಯ ಪುತ್ರ ಮಹದೇವು ಅವರಿಗೆ ಕಲಿಸುತ್ತಿದ್ದಾರೆ.

ಪೌರೋಹಿತ್ಯದ ಜತೆಜತೆಗೆ ವೀರಗಾಸೆ ಕಲೆಯನ್ನು ಈ ಸೋದರರು ಕರಗತ ಮಾಡಿಕೊಂಡಿದ್ದಾರೆ. ಸುತ್ತಮುತ್ತಲ ಗ್ರಾಮಗಳಲ್ಲಿ ಎಲ್ಲೇ ಶುಭ ಸಮಾರಂಭಗಳು ನಡೆದರೂ ಇವರ ಕಲೆಯು ಇದ್ದೇ ಇರುತ್ತದೆ. ಅಷ್ಟರಮಟ್ಟಿಗೆ ಇವರು ಸ್ಥಳೀಯವಾಗಿ ಪ್ರಸಿದ್ಧರಾಗಿದ್ದಾರೆ.

ಕೇವಲ ತಮ್ಮ ಹೋಬಳಿ ಮಾತ್ರವಲ್ಲ ತಾಲ್ಲೂಕಿನಲ್ಲೂ ಇವರು ತಮ್ಮದೇ ಛಾಪು ಮೂಡಿಸಿದ್ದಾರೆ. ತಾಲ್ಲೂಕುಮಟ್ಟದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಹೆಗ್ಗಳಿಕೆ ಇವರದು. ಬೆಂಗಳೂರು, ಕುಣಿಗಲ್, ದಾವಣಗೆರೆ ಸೇರಿದಂತೆ ರಾಜ್ಯದ ಹಲವೆಡೆ ಇವರು ತಮ್ಮ ಕಲೆಯನ್ನು ಪ್ರದರ್ಶಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ತಾಲ್ಲೂಕು ಆಡಳಿತ ಇವರನ್ನು ಸನ್ಮಾನಿಸಿದೆ. ಇತರ ಸಂಘ, ಸಂಸ್ಥೆಗಳೂ ಇವರಿಗೆ ಗೌರವ ಪುರಸ್ಕಾರಗಳನ್ನು ನೀಡಿ ಸನ್ಮಾನಿಸಿವೆ.

ಬಹುದೊಡ್ಡ ಸವಾಲು:‘ಹಿಂದಿಗಿಂತ ಈಗ ವೀರಗಾಸೆ ಕಲೆಗೆ ಹೆಚ್ಚು ಉತ್ತೇಜನ ಸಿಗುತ್ತಿದೆ ಎಂಬ ಮಾತು ನಿಜ’ ಎಂದು ಹೇಳುವ ಬಸವರಾಜು, ಇದರ ಜತೆಜತೆಗೆ ಯುವ ಸಮುದಾಯ ಕಲೆಯಿಂದ ವಿಮುಖವಾಗುತ್ತಿರುವ ಕುರಿತು ಆತಂಕ ವ್ಯಕ್ತಪಡಿಸುತ್ತಾರೆ.

‘ಡಿ.ಜೆ.ಸಾಂಗ್‌’ ಎಂಬ ಪೆಡಂಭೂತದ ಹಿಂದೆ ಯುವಕರ ದಂಡು ಪ್ರತಿ ಜಾತ್ರೆಯಲ್ಲೂ ಹೋಗುತ್ತದೆ. ಪಾಶ್ಚಾತ್ಯ ಸಂಗೀತ, ಸಿನಿಮಾ ಹಾಡುಗಳಿಗೆ ಹೆಜ್ಜೆ ಇಟ್ಟು ಸಂಭ್ರಮಿಸುತ್ತಾರೆ. ಆಗ ಜನಪದ ಕಲಾವಿದರ ಸುತ್ತ ಹಿರಿಯರಷ್ಟೇ ಇರುತ್ತಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

‘ಯುವಕರನ್ನು ತಮ್ಮ ಕಲೆಯತ್ತ ಸೆಳೆಯುವುದು ಇಂದಿನ ಬಹುದೊಡ್ಡ ಸವಾಲಿನ ಕೆಲಸ’ ಎಂದು ಅವರು ಹೇಳುತ್ತಾರೆ. ಅಕ್ಕಿ ತುಂಬಿದ ಚೆಂಬಿನೊಳಗೆ ಖಡ್ಗವನ್ನಿಟ್ಟು ಎತ್ತುವ, ವಿವಿಧ ಭಂಗಗಳಲ್ಲಿ ತಿರುಗಿಸುವ ಪವಾಡಗಳು, ಕರ್ಪೂರವನ್ನು ನಾಲಿಗೆ ಮೇಲಿಟ್ಟು ಹೊತ್ತಿಸಿಕೊಳ್ಳುವ ಚಮತ್ಕಾರಗಳು, ಖಡ್ಗದಿಂದ ತೆಂಗಿನಕಾಯಿಯನ್ನು ಸಮನಾಗಿ ಎರಡು ಭಾಗವಾಗಿ ಹೊಡೆಯುವ ಕಲೆಗಾರಿಕೆಯ ಮೂಲಕವೇ ಇಂದು ಯುವಕರನ್ನು ಸೆಳೆಯಬೇಕಿದೆ ಎಂದು ಅವರು ತಿಳಿಸುತ್ತಾರೆ.

Post Comments (+)