ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರೆದ ದರ ಹೆಚ್ಚಳ

ತರಕಾರಿ ಖರೀದಿಗೆ ಹಿಂದೇಟು ಹಾಕುವಂತಹ ಸ್ಥಿತಿ
Last Updated 4 ಜೂನ್ 2019, 8:14 IST
ಅಕ್ಷರ ಗಾತ್ರ

ಮೈಸೂರು: ಕ್ಯಾರೆಟ್, ಬೀನ್ಸ್, ಟೊಮೆಟೊ ದರಗಳು ಜೂನ್‌ ತಿಂಗಳಿನಲ್ಲಿಯೂ ಏರಿಕೆಯಾಗಿವೆ. ಇದು ಗ್ರಾಹಕರು ಖರೀದಿಸಲು ಹಿಂದೇಟು ಹಾಕುವಂತೆ ಮಾಡಿದೆ.

ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಕಳೆದ ವಾರ ಟೊಮೆಟೊ ಕೆ.ಜಿಗೆ ₹ 31 ಇತ್ತು. ಈಗ ಇದು ₹ 38 ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದರ ಧಾರಣೆ ಕೇವಲ ₹ 7 ಇತ್ತು.

ಬೀನ್ಸ್‌ ಸಗಟು ದರ ಕೆ.ಜಿಗೆ ₹ 60ರಲ್ಲೇ ಮುಂದುವರಿದಿದೆ. ಕಳೆದ ವರ್ಷ ₹ 30 ಇತ್ತು. ಕ್ಯಾರೆಟ್‌ ಕಳೆದ ವಾರ ಕೆ.ಜಿಗೆ ₹ 40 ಇತ್ತು. ಈಗ ಇದು ₹ 50 ಆಗಿದೆ. ಕಳೆದ ವರ್ಷ ಇದರ ಧಾರಣೆ ₹ 25 ಇತ್ತು.

‘ಕಳೆದ ವರ್ಷ ಮುಂಗಾರುಪೂರ್ವ ಮಳೆ ಉತ್ತಮವಾಗಿ ಸುರಿದಿತ್ತು. ಮಾರ್ಚ್ ತಿಂಗಳಿನಿಂದಲೇ ಆರಂಭವಾದ ಮಳೆಯಿಂದ ತರಕಾರಿ ಬೆಳೆಗಳಲ್ಲಿ ಉತ್ತಮ ಇಳುವರಿ ಬಂದಿತ್ತು. ಆದರೆ, ಈಗ ಮಳೆ ಆರಂಭವಾಗಿರುವುದೇ ಮೇ ತಿಂಗಳಿನಲ್ಲಿ. ಹೀಗಾಗಿ, ಇನ್ನೊಂದು ತಿಂಗಳಿನಲ್ಲಿ ತರಕಾರಿಗಳ ಇಳುವರಿ ಹೆಚ್ಚಾಗುವ ಸಂಭವ ಇದೆ’ ಎಂದು ದೂರ ಗ್ರಾಮದ ರೈತ ಸಿದ್ಧಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಹಸಿಮೆಣಸಿನಕಾಯಿ, ದಪ್ಪಮೆಣಸಿನಕಾಯಿ, ಎಲೆಕೋಸು ಸೇರಿದಂತೆ ಬಹುತೇಕ ಎಲ್ಲ ತರಕಾರಿಗಳ ಬೆಲೆಗಳು ನಿಯಂತ್ರಣಕ್ಕೆ ಬಂದಿಲ್ಲ.‌

ಕೋಳಿಮೊಟ್ಟೆ ದರ ಮತ್ತಷ್ಟು ಕುಸಿತ: ಕೋಳಿಮೊಟ್ಟೆ ಧಾರಣೆಯ ಇಳಿಕೆಗತಿ ಈ ವಾರವೂ ಮುಂದುವರೆದಿದೆ. ಬೇಡಿಕೆಗಿಂತ ಪೂರೈಕೆಯಲ್ಲಿ ಹೆಚ್ಚಳವಾಗಿರುವುದರಿಂದ ದರವು ಚೇತರಿಕೆ ಪಡೆಯುತ್ತಿಲ್ಲ. ಇದು ಮೊಟ್ಟೆ ಉತ್ಪಾದಕರಲ್ಲಿ ತೀವ್ರ ನಿರಾಸೆ ಮೂಡಿಸಿದೆ.

ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಕೋಳಿ ಮೊಟ್ಟೆ ಉತ್ಪಾದನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಬೆಲೆ ಏರಿಕೆಯಾಗದಂತೆ ತಡೆದಿದೆ ಎಂದು ಮೊಟ್ಟೆ ಉತ್ಪಾದಕ ಅಬ್ದುಲ್ಲಾ ತಿಳಿಸಿದರು.‌

ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಕಳೆದ ವಾರ ₹ 3.87 ಇದ್ದದ್ದು, ಈಗ ₹ 3.65 ಆಗಿದೆ.

ಕರ್ನಾಟಕ ರಾಜ್ಯ ಪೌಲ್ಟ್ರಿ ಫಾರ್ಮಸ್ ಅಂಡ್ ಬ್ರೀಡರ್ಸ್ ಅಸೋಸಿಯೇಷನ್‌ನ ಬ್ರಾಯ್ಲರ್ ಕೋಳಿ ಮಾಂಸದ ದರ ಕೆ.ಜಿಗೆ ₹ 90 ಇದ್ದದ್ದು ಈಗ ₹ 104ಕ್ಕೆ ಹೆಚ್ಚಾಗಿದೆ. ಪೇರೆಂಟ್‌ ಕೋಳಿ ಮಾಂಸದ ದರವು ಕೆ.ಜಿಗೆ ₹ 60ರಲ್ಲೇ ಮುಂದುವರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT