ಶುಕ್ರವಾರ, ಸೆಪ್ಟೆಂಬರ್ 20, 2019
27 °C
ಬದನೆ, ಈರುಳ್ಳಿ ದುಬಾರಿ, ಏರಿಕೆ ಗತಿಯಲ್ಲಿರುವ ಹಸಿಮೆಣಸಿನಕಾಯಿ, ಎಲೆಕೋಸು, ಬೀನ್ಸ್ ಬೆಲೆಗಳು

ಓಣಂ ಪ್ರಭಾವ; ತರಕಾರಿಗಳ ಬೆಲೆ ಹೆಚ್ಚಳ

Published:
Updated:
Prajavani

ಮೈಸೂರು: ಕೇರಳದಲ್ಲಿ ಓಣಂ ಹಬ್ಬ ಸಮೀಪಿಸುತ್ತಿದ್ದಂತೆ ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ತರಕಾರಿಗಳಿಗೆ ಬೇಡಿಕೆ ಹೆಚ್ಚತೊಡಗಿದೆ. ಕೇರಳದಿಂದ ಇಲ್ಲಿಗೆ ಬರುವ ವ್ಯಾಪಾರಸ್ಥರು ತರಕಾರಿಗಳನ್ನು ಹೆಚ್ಚಾಗಿ ಖರೀದಿಸಿ ಸಾಗಿಸುತ್ತಿದ್ದಾರೆ. ಇದರಿಂದ ದಿನಕ್ಕೊಂದು ಬೆಲೆ ನಿಗದಿಯಾಗತೊಡಗಿದೆ.

ಈ ಬಾರಿ ಬದನೆ ಹಾಗೂ ಈರುಳ್ಳಿ ಬೆಲೆಗಳು ದುಬಾರಿಯಾಗಿವೆ. ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಬದನೆ ಸಗಟು ಬೆಲೆಯು ಕೆ.ಜಿಗೆ ₹ 17ರಿಂದ ₹ 26ಕ್ಕೆ ಏರಿದೆ. ಇದು ಬೆಳೆಗಾರರಲ್ಲಿ ಸಂತಸ ತರಿಸಿದೆ. ಇದರ ಆವಕ ದಿನವೊಂದಕ್ಕೆ 30 ಕ್ವಿಂಟಲ್‌ನಿಂದ 55 ಕ್ವಿಂಟಲ್‌ಗೆ ಹೆಚ್ಚಿದೆ. ಆದರೆ, ಬೇಡಿಕೆಯು ಇನ್ನೂ ಹೆಚ್ಚಿರುವುದರಿಂದ ಬೆಲೆ ಏರುತ್ತಲೇ ಇದೆ.

ಈರುಳ್ಳಿಯ ಆವಕವೂ ಹೆಚ್ಚಾಗುತ್ತಿದೆ. ದಿನವೊಂದಕ್ಕೆ 2,400 ಕ್ವಿಂಟಲ್‌ನಷ್ಟು ಈರುಳ್ಳಿ ಮಾರುಕಟ್ಟೆಗೆ ಬರುತ್ತಿತ್ತು. ಈಗ ಇದರ ಪ್ರಮಾಣ 3 ಸಾವಿರ ಕ್ವಿಂಟಲ್‌ ದಾಟಿದೆ. ಹೀಗಾಗಿ, ದರ ಕೆ.ಜಿಗೆ ₹ 30ರಲ್ಲೆ ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇದರ ದರ ₹ 40ಕ್ಕೂ ಹೆಚ್ಚಿದೆ. ಹಾಪ್‌ಕಾಮ್ಸ್‌ನಲ್ಲಿಯೂ ₹ 40 ಇದೆ. ಹಸಿಮೆಣಸಿನಕಾಯಿ, ಎಲೆಕೋಸು, ಬೀನ್ಸ್ ಬೆಲೆಗಳು ಏರಿಕೆ ಗತಿಯಲ್ಲೇ ಇವೆ.

ಟೊಮೆಟೊಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿಲ್ಲ. ಇದರಿಂದ ಇದರ ಬೆಲೆ ಇಳಿಕೆ ಗತಿಯಲ್ಲಿದೆ. ಕೆ.ಜಿಗೆ ₹ 7ರಲ್ಲಿದ್ದ ಇದರ ಸಗಟು ಧಾರಣೆ ₹ 5ಕ್ಕೆ ಕಡಿಮೆಯಾಗಿದೆ.

ಒಂದು ಕೋಳಿ ಮೊಟ್ಟೆಗೆ ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಕಳೆದ ವಾರ ₹ 3.55 ಇತ್ತು. ಈಗ ಇದು ₹ 3.52ಕ್ಕೆ ತುಸು ಕಡಿಮೆಯಾಗಿದೆ. ನಿರೀಕ್ಷಿತ ದರ ಮೊಟ್ಟೆ ಉತ್ಪಾದಕರಿಗೆ ಶ್ರಾವಣ ಕಳೆದರೂ ಕೈ ಸೇರಿಲ್ಲ. ‌

ಧಾನ್ಯಗಳ ಬೆಲೆಗಳಲ್ಲಿ ಹೆಚ್ಚಿನ ತೊಗರಿಬೇಳೆ ₹ 92, ಹೆಸರುಬೇಳೆ ₹ 81, ಹೆಸರುಕಾಳು ₹ 76, ಉದ್ದಿನಬೇಳೆ ₹ 80ರಲ್ಲೇ ಸಗಟು ಧಾರಣೆ ಮುಂದುವರಿದಿದೆ.

 

 

 

Post Comments (+)