ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತರಿಕೆ ಕಂಡ ತರಕಾರಿ ಧಾರಣೆ

ಚಿಲ್ಲರೆ ಬೆಲೆಗಳಲ್ಲಿ ಉಂಟಾದ ಏರಿಕೆಯ ಲಾಭ ರೈತರಿಗಿಲ್ಲ
Last Updated 24 ಮಾರ್ಚ್ 2020, 12:25 IST
ಅಕ್ಷರ ಗಾತ್ರ

ಮೈಸೂರು: ಯಾವುದೇ ತರಕಾರಿಯ ಧಾರಣೆಯನ್ನು ಖಚಿತವಾಗಿ ಇಷ್ಟು ಎಂದು ಹೇಳಲಾಗದಂತಹ ಪರಿಸ್ಥಿತಿ ಈ ವಾರ ಇದೆ. ಯಾವುದೇ ಮಾರುಕಟ್ಟೆಗೆ ಹೋದರೂ ಮೊದಲಿಗಿಂತ ಹೆಚ್ಚಿನ ಬೆಲೆ ತೆರಲೇಬೇಕು. ಆದರೆ, ಇವರು ನೀಡುವ ಹೆಚ್ಚಿನ ಬೆಲೆ ರೈತರಿಗೆ ದಕ್ಕುತ್ತಿಲ್ಲ.

ಭಾನುವಾರ ಒಂದು ದಿನದ ‘ಜನತಾ ಕರ್ಫ್ಯೂ’ ಹಾಗೂ ಸೋಮವಾರದಿಂದ ಸರ್ಕಾರ ಘೋಷಿಸಿದ ‘ಲಾಕ್‌ಡೌನ್‌’ ಘೋಷಣೆಯ ಲಾಭ ಪಡೆದ ವರ್ತಕ ಸಮೂಹ ಹಾಗೂ ಮಧ್ಯವರ್ತಿಗಳು ತರಕಾರಿಗಳ ಧಾರಣೆಯನ್ನು ಹೆಚ್ಚಿಸಿದರು.

ಭಾನುವಾರ ಒಂದು ದಿನ ಉಂಟಾದ ಪೂರೈಕೆಯ ಕೊರತೆಯನ್ನೇ ಅಸ್ತ್ರವನ್ನಾಗಿಸಿಕೊಂಡ ಇವರು ವಿವಿಧ ಮಾರುಕಟ್ಟೆಗಳಲ್ಲಿ ವಿಭಿನ್ನ ದರಗಳಲ್ಲಿ ಮಾರಾಟ ಮಾಡಿದರು. ಇದಕ್ಕೆ ವಿರುದ್ಧವಾಗಿ ಶನಿವಾರ ರಾತ್ರಿ ಕಡಿಮೆ ಬೆಲೆಗೆ ಮಾರಾಟ ಮಾಡಿದ ವರ್ತಕರೂ ಸೋಮವಾರದ ಬೆಲೆ ಏರಿಕೆ ಕಂಡು ಮರುಗಿದ ಪ್ರಸಂಗಗಳೂ ಇತ್ತು.

ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಬಹುತೇಕ ತರಕಾರಿಗಳ ಧಾರಣೆ ಚೇತರಿಕೆ ಪಡೆದಿವೆ. ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಟೊಮೆಟೊ ಕೆ.ಜಿಗೆ ₹ 6ರಿಂದ ₹ 10ಕ್ಕೆ ಜಿಗಿದು ರೈತರಿಗೆ ಹರ್ಷ ತರಿಸಿದೆ. ಬೀನ್ಸ್ ಸಹ ₹ 20ರಿಂದ ₹ 25ಕ್ಕೆ, ಹಸಿಮೆಣಸಿನಕಾಯಿ ₹ 10ರಿಂದ ₹ 15ಕ್ಕೆ ಏರಿಕೆಯಾಗಿದೆ. ಇದರಿಂದ ಬೆಳೆಗಾರರು ತುಸು ಸಮಾಧಾನಪಡುವಂತಾಗಿದೆ.‌

ಇತ್ತ ಹಾಪ್‌ಕಾಮ್ಸ್‌ನಲ್ಲೂ ಬೆಲೆಗಳೂ ಏರಿಕೆಯಾಗಿವೆ. ಟೊಮೆಟೊ ಕೆ.ಜಿಗೆ ₹ 28, ಬೀನ್ಸ್ ₹ 70, ಬದನೆ ₹ 24, ಬೆಂಡೆ ₹ 30 ಹೀಗೆ ಬಹುತೇಕ ಎಲ್ಲ ತರಕಾರಿಗಳ ಮಾರಾಟ ಧಾರಣೆ ತುಟ್ಟಿಯಾಗಿವೆ.

ಉಳಿದ ಚಿಲ್ಲರೆ ಮಾರುಕಟ್ಟೆಗಳಲ್ಲಿ ದರಗಳಲ್ಲಿ ಭಾರಿ ಅಂತರ ಕಂಡು ಬಂದಿದೆ. ಒಂದು ಅಂಗಡಿಯಿಂದ ಮತ್ತೊಂದು ಅಂಗಡಿಗೆ ದರಗಳಲ್ಲಿ ವ್ಯತ್ಯಾಸ ಇದೆ. ಕೊರೊನಾ ವೈರಸ್‌ನಿಂದ ಅಭಾವ ಸೃಷ್ಟಿಯಾಗಬಹುದು ಎಂಬ ಊಹಾಪೋಹಾದ ಲಾಭವನ್ನು ವ್ಯಾಪಾರಸ್ಥರು ಪಡೆಯುತ್ತಿದ್ದಾರೆ ಎಂದು ಮಂಡಿಮೊಹಲ್ಲಾದ ನಿವಾಸಿ ವಾಸುದೇವ ದೂರಿದರು.

‘ಯುಗಾದಿಗೂ ಮುನ್ನ ದರ ಏರಿಕೆ ಸರ್ವೇಸಾಮಾನ್ಯ. ಈಗ ಒಂದು ದಿನದ ಕರ್ಫ್ಯೂನಿಂದ ಪೂರೈಕೆ ಸ್ಥಗಿತಗೊಂಡಿತ್ತು. ಒಮ್ಮೆಗೆ ಸೋಮವಾರ ಹೆಚ್ಚಿನ ಬೇಡಿಕೆ ಸೃಷ್ಟಿಯಾಯಿತು. ಜತೆಗೆ, ಮಾರ್ಚ್ 31ರವರೆಗೂ ಲಾಕ್‌ಡೌನ್‌ ಎಂಬ ಸುದ್ದಿ ಇದಕ್ಕೆ ಪೂರಕವಾಯಿತು. ಹೀಗಾಗಿ, ದರಗಳಲ್ಲಿ ಏರಿಕೆ ಕಂಡು ಬಂದಿದೆ’ ಎಂದು ವ್ಯಾಪಾರಿ ರಾಮು ತಿಳಿಸಿದರು.

ಪಟ್ಟಿ,

ತರಕಾರಿಗಳು ಕಳೆದ ವಾರದ ಧಾರಣೆ ಈಗಿನ ಧಾರಣೆ (ಎಪಿಎಂಸಿ ಮಾರುಕಟ್ಟೆಯಲ್ಲಿ ಸಗಟು ಬೆಲೆ)

ಟೊಮೆಟೊ ; 06; 10

ಬೀನ್ಸ್ ; 20; 25

ಕ್ಯಾರೆಟ್; 23; -

ಎಲೆಕೋಸು; 04; 05

ದಪ್ಪಮೆಣಸಿನಕಾಯಿ; 13; 13

ಬದನೆ ; 07; 07

ಹಸಿಮೆಣಸಿನಕಾಯಿ; 10; 15

ಈರುಳ್ಳಿ; 20; -

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT