ಗುರುವಾರ , ಅಕ್ಟೋಬರ್ 29, 2020
21 °C
ಮತ್ತೊಮ್ಮೆ ಆಭಾಸವಾಗದಂತೆ ಮುನ್ನೆಚ್ಚರಿಕೆ; ಪಕ್ಷ ಸಂಘಟನೆಯ ಜಪ

ವರುಣಾ ಬಿಜೆಪಿ ಕಾರ್ಯಕಾರಿಣಿಯಲ್ಲಿ ಕಾಣಿಸಿಕೊಂಡ ವಿಜಯೇಂದ್ರ: ಕ್ಷೇತ್ರದಲ್ಲಿ ಸಂಚಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಮೈಸೂರು ಭೇಟಿ ಜಿಲ್ಲಾ ರಾಜಕಾರಣದಲ್ಲಿ ಮಿಂಚಿನ ಸಂಚಲನ ಮೂಡಿಸಿದೆ.

ವರುಣಾ ಮಂಡಲದ ಆಹ್ವಾನದ ಮೇರೆಗೆ, ಸೋಮವಾರ ನಡೆದ ಮೊದಲ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲಿಕ್ಕಾಗಿ ಬಂದಿದ್ದ ವಿಜಯೇಂದ್ರ, ಇದೇ ವೇಳೆ ಪಕ್ಷದ ಹಿರಿಯ ಮುಖಂಡರನ್ನು ಭೇಟಿಯಾಗಿ ಆಶೀರ್ವಾದ ಪಡೆಯುವ ಜೊತೆಗೆ ಚರ್ಚಿಸಿದ್ದು, ಎರಡನೇ ಹಂತದ ನಾಯಕರೊಟ್ಟಿಗೆ ವಿವಿಧೆಡೆ ತೆರಳಿದ್ದು, ಕಮಲ ಪಾಳೆಯದೊಳಗೆ ಹೊಸ ಸಂಚಲನವೊಂದನ್ನು ಸೃಷ್ಟಿಸಿದೆ.

‘ವರುಣಾ ಮಂಡಲದ ಪದಾಧಿಕಾರಿಗಳನ್ನು ಕಾರ್ಯಕಾರಿಣಿಯಲ್ಲಿ ಪರಿಚಯಿಸಿಕೊಂಡ ವಿಜಯೇಂದ್ರ, ಕ್ಷೇತ್ರದಲ್ಲಿ ಪಕ್ಷ ಬಲವರ್ಧನೆಗೊಳಿಸುವ ಜೊತೆಗೆ ಗ್ರಾಮ ಪಂಚಾಯಿತಿ ಚುನಾವಣೆ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಲಿಕ್ಕಾಗಿ ಈಗಿನಿಂದಲೇ ಕಾರ್ಯಪ್ರವೃತ್ತರಾಗಿ ಎಂದು ಸೂಚಿಸಿದರು. ಇದು ಏನನ್ನು ಬಿಂಬಿಸಲಿದೆ ಎಂಬುದನ್ನು ನೀವೇ ಅರ್ಥೈಸಿಕೊಳ್ಳಿ’ ಎಂದು ಕಾರ್ಯಕಾರಿಣಿಯಲ್ಲಿ ಹಾಜರಿದ್ದ ಬಿಜೆಪಿಯ ಪದಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮದು ಪ್ರತಿಷ್ಠಿತ ಕ್ಷೇತ್ರ. ಈ ಹಿಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಅವರೇ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು. ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂಬುದು ಎಲ್ಲೆಡೆ ಸುದ್ದಿಯಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಟಿಕೆಟ್‌ ಘೋಷಣೆಯಾಗಲಿಲ್ಲ. ಇಂತಹ ಆಭಾಸ ಮತ್ತೆಂದೂ ಆಗಬಾರದು. ವಿಧಾನಸಭಾ ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಬಾಕಿಯಿದೆ. ಈಗಲೇ ಸ್ಪರ್ಧೆ ಬಗ್ಗೆ ಮಾತನಾಡುವುದು ಶೋಭೆಯಾಗಲ್ಲ’ ಎಂದು ಪಕ್ಷದ ಹಿರಿಯರೊಬ್ಬರು ಮಾರ್ಮಿಕವಾಗಿ ಹೇಳಿದರು.

‘ಉಪಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ವಿಜಯೇಂದ್ರ ಭಾಗವಹಿಸಿದ ಮೊದಲ ಸಭೆಯಿದು. ವರುಣಾ ವಿಧಾನಸಭಾ ಕ್ಷೇತ್ರದ ಬಗ್ಗೆ ಒಲವು ಕಳೆದುಕೊಂಡಿಲ್ಲ ಎಂಬುದನ್ನು ಇದೇ ಪುಷ್ಟೀಕರಿಸಲಿದೆ’ ಎಂದು ವಿಜಯೇಂದ್ರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ, ಹಿಂದುಳಿದ ಸಮುದಾಯದ ಮುಖಂಡರೊಬ್ಬರು ತಿಳಿಸಿದರು.

‘ಸೋಮವಾರ ನಡೆದಿದ್ದು ಕಾರ್ಯಕಾರಿಣಿ. ಪದಾಧಿಕಾರಿಗಳ ಪರಿಚಯವಾಯ್ತು. ಸಂಘಟನೆ ಬಗ್ಗೆ ಮಾತ್ರ ಮಾತನಾಡಿದರು. ಗುಂಪುಗಾರಿಕೆ ಸುಳಿಯಬಾರದು ಎಂದರು. ಕಾರ್ಯಕರ್ತರ ಸಭೆಯಾಗಿದ್ದರೆ ವಿಧಾನಸಭೆಗೆ ಸ್ಪರ್ಧೆಯ ಕೂಗು ಕೇಳಿ ಬರುತ್ತಿತ್ತು’ ಎಂದು ವರುಣಾ ಮಂಡಲ ಅಧ್ಯಕ್ಷ ಕೆ.ಬಿ.ವಿಜಯಕುಮಾರ್‌ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು