ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಗೆ ಬಂದಿದ್ದಾರೆ ಸರಗಳ್ಳರು

ನಗರಪ್ರದೇಶದಿಂದ ಗ್ರಾಮಾಂತರ ಭಾಗದತ್ತ ಸರಗಳ್ಳರ ಚಿತ್ತ
Last Updated 4 ಜುಲೈ 2018, 17:48 IST
ಅಕ್ಷರ ಗಾತ್ರ

ಮೈಸೂರು: ಹಳ್ಳಿಗಾಡಿನಲ್ಲೂ ಸರಗಳ್ಳರು ತಮ್ಮ ಕೈಚಳಕ ತೋರಿಸಲು ಆರಂಭಿಸಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.

ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ಸರಗಳವು ಇದೀಗ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಾಗಿದೆ. ಭಾನುವಾರದಿಂದ ಸತತ ಮೂರು ದಿನಗಳ ಕಾಲ ಕಳ್ಳತನ ಮಾಡಲಾಗಿದೆ. ಹೆಚ್ಚಾಗಿ ನಂಜನಗೂಡು, ತಿ.ನರಸೀಪುರ ಭಾಗಗಳಲ್ಲಿ ನಡೆದಿದೆ. ಹುಲ್ಲಹಳ್ಳಿಯಲ್ಲಿ ಇದೇ ಮೊದಲ ಬಾರಿಗೆ ನಡೆದಿರುವುದು ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ಎಲ್ಲ ಸರಗಳವು ಹಗಲಿನ ವೇಳೆಯೇ ನಡೆಯುತ್ತಿರುವುದು ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ.

ತಿ.ನರಸೀಪುರ ಹೊರವಲಯದ ಆಲಗೂಡು ಸಮೀಪ ದ್ವಿಚಕ್ರ ವಾಹನದಲ್ಲಿ ಹಿಂದೆ ಕುಳಿತು ಚಲಿಸುತ್ತಿದ್ದ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಚಲಿಸುತ್ತಿರುವ ಬೈಕ್‌ನಲ್ಲೇ ಸರ ಅಪಹರಿಸಿರುವುದು ಆತಂಕವನ್ನು ಇನ್ನಷ್ಟು ಇಮ್ಮಡಿಸಿದೆ. ಸರ ಕಳೆದುಕೊಂಡ ಮಹಿಳೆ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಕೃತ್ಯಗಳನ್ನು ಗಮನಿಸಿದರೆ ವೃತ್ತಿಪರ ಕಳ್ಳರ ತಂಡವೇ ಈ ಕೆಲಸ ಮಾಡುತ್ತಿದೆ ಎಂಬ ಅನುಮಾನ ಪೊಲೀಸರನ್ನು ಕಾಡುತ್ತಿದೆ.

ಮಂಗಳವಾರವಷ್ಟೇ ನಂಜನಗೂಡು ತಾಲ್ಲೂಕಿನ ಕೋಣನೂರು ಬಳಿ ಕುರಿ ಮೇಯಿಸುತ್ತಿದ್ದ ರೇವಮ್ಮ ಎಂಬ ಮಹಿಳೆಯ ಸರವನ್ನು ಕಳ್ಳರು ಅಪಹರಿಸಿದ್ದರು. ವಿಳಾಸ ಕೇಳುವ ನೆಪದಲ್ಲಿ ಈ ಕೃತ್ಯ ನಡೆದಿತ್ತು. ಈ ಭಾಗದಲ್ಲಿ ಕಳೆದ 6 ತಿಂಗಳಲ್ಲಿ ಕುರಿ ಮೇಯಿಸುವ ಮಹಿಳೆಯರನ್ನೇ ಗುರಿಯಾಗಿಸಿ ನಡೆದ 4ನೇ ಪ್ರಕರಣ ಇದಾಗಿದೆ. ಇಷ್ಟಾದರೂ ಸರಗಳ್ಳರನ್ನು ಹಿಡಿಯದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸರಗಳವು ಹೆಚ್ಚಿದ್ದರಿಂದ ಪೊಲೀಸರು ಚುರುಕಾಗಿದ್ದಾರೆ. ಪತ್ತೆಗೆ 4 ವಿಶೇಷ ತಂಡಗಳನ್ನು ರಚಿಸಲಾಗಿದೆ. ಕೂಡಲೇ ಪತ್ತೆ ಹಚ್ಚುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ ಸಿಂಗ್ ತಾಕೀತು ಮಾಡಿದ್ದಾರೆ.‌

ಗ್ರಾಮಾಂತರ ಪ್ರದೇಶಗಳೇ ಏಕೆ?

ಕಳ್ಳರಿಗೆ ನಗರ ಪ್ರದೇಶಗಳಿಗಿಂತ ಗ್ರಾಮಾಂತರ ಪ್ರದೇಶಗಳ ಹೊರವಲಯಗಳೇ ಸರಗಳವಿಗೆ ಹೆಚ್ಚು ಸೂಕ್ತ ಎನಿಸಿವೆ. ಹಳ್ಳಿಯಿಂದ ಹಳ್ಳಿಗೆ ಹೋಗುವ ದಾರಿಯಲ್ಲಿ ಜನಸಂಚಾರ ಕಡಿಮೆ ಇರುತ್ತದೆ. ವಾಹನ ಸಂಚಾರವೂ ಅತಿ ವಿರಳ. ರಸ್ತೆಯಂಚಿನ ಜಮೀನುಗಳಲ್ಲಿ, ರಸ್ತೆ ಬದಿಯಲ್ಲಿ ಹಸು, ಕುರಿಗಳನ್ನು ಮೇಯಿಸುವ ಮಹಿಳೆಯರ ಬಳಿ ಸುಲಭವಾಗಿ ಸರ ಕಿತ್ತುಕೊಂಡು ಪರಾರಿಯಾಗಬಹುದು. ಕಳ್ಳರನ್ನು ಬೆನ್ನತ್ತಲು ಇಲ್ಲಿ ಯಾರೂ ಇರುವುದಿಲ್ಲ. ಆದರೆ, ನಗರ ಪ್ರದೇಶಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ, ಜನಸಂದಣಿ ಇರುವುದು ಕಳ್ಳರಿಗೆ ತೊಡಕಾಗಿ ಪರಿಣಮಿಸಿವೆ. ಹೀಗಾಗಿ, ಗ್ರಾಮೀಣ ಭಾಗದಲ್ಲಿ ಕಳವು ಮಾಡಲು ಆರಂಭಿಸಿದ್ದಾರೆ ಎಂಬುದು ಪೊಲೀಸರ ವಿವರಣೆ.

ವೃತ್ತಿಪರ ಕಳ್ಳರು:

ತಿ.ನರಸೀಪುರ ಹೊರವಲಯದ ಆಲಗೂಡು ಬಳಿ ಚಲಿಸುತ್ತಿರುವ ಬೈಕ್‌ನಿಂದ ಸರಗಳವು ಮಾಡಿರುವುದು ಗಮನಿಸಿದರೆ ವೃತ್ತಿಪರ ಕಳ್ಳರೇ ಭಾಗಿಯಾಗಿರುವ ಶಂಕೆಯನ್ನು ಹೆಚ್ಚಿಸಿದೆ. ಸಾಮಾನ್ಯ ಕಳ್ಳರು ಈ ಧೈರ್ಯ ಮಾಡಲಾರರು ಎಂಬುದು ಪೊಲೀಸರ ಅಭಿಪ್ರಾಯ.

ಸರಗಳವು ಗ್ರಾಮಾಂತರ ಭಾಗಗಳಲ್ಲಿ ಹೆಚ್ಚುತ್ತಿರುವುದನ್ನು ಗಮನಿಸಿ ಕಳ್ಳರ ಪತ್ತೆಗೆ 4 ವಿಶೇಷ ತಂಡಗಳನ್ನು ರಚಿಸಲಾಗಿದೆ. ಆದಷ್ಟು ಶೀಘ್ರ ಸರಗಳ್ಳರನ್ನು ಬಂಧಿಸಲಾಗುವುದು. ಜನರು ಆತಂಕಪಡಬೇಕಿಲ್ಲ.
ಅಮಿತ್‌ಸಿಂಗ್,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT