ಮಂಗಳವಾರ, ಅಕ್ಟೋಬರ್ 27, 2020
28 °C
ಕೋವಿಡ್‌ನಿಂದ ಕೆಲಸ ಕಳೆದುಕೊಂಡವರಿಗೆ ನೆರವಾದ ಮೈಸೂರು ಮಂಜುನಾಥ್‌

ಕಲಾವಿದರ ಸಂಕಷ್ಟಕ್ಕೆ ಮಿಡಿದ ವಯಲಿನ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೋವಿಡ್‌ ಪರಿಸ್ಥಿತಿ ಯಿಂದಾಗಿ ಯಾವುದೇ ಕಾರ್ಯಕ್ರಮ ನಡೆಸಲು ಸಾಧ್ಯವಾಗದೇ ಆರ್ಥಿಕ ಕಷ್ಟಕ್ಕೆ ಸಿಲುಕಿರುವ ನೂರಾರು ಕಲಾವಿದರಿಗೆ, ಮತ್ತೊಬ್ಬ ಹೆಸರಾಂತ ವಯಲಿನ್‌ ಕಲಾವಿದ ಮೈಸೂರು ಮಂಜುನಾಥ್‌ ಸ್ಪಂದಿಸಿದ್ದಾರೆ.

ಆನ್‌ಲೈನ್‌ನಲ್ಲಿ ವಯಲಿನ್‌ ಕಛೇರಿ ನಡೆಸುವ ಮೂಲಕ ರಾಜ್ಯ ಮಾತ್ರವಲ್ಲದೇ, ದೇಶ, ವಿದೇಶಗಳ ಕಲಾವಿದರಿಗೆ ಆರ್ಥಿಕ ನೆರವು ನೀಡುವುದರೊಂದಿಗೆ ಅವರ ಬಾಳಲ್ಲಿ ಭರವಸೆಯ ಬೆಳಕು ಮೂಡಿಸಿದ್ದಾರೆ. ಜೊತೆಗೆ ನೊಂದ ಮನಸ್ಸುಗಳಿಗೆ ಸಂಗೀತದ ಮೂಲಕವೇ ಸಾಂತ್ವನ ಹೇಳುವ ಕೆಲಸದಲ್ಲಿ ತೊಡಗಿದ್ದಾರೆ.

ಕಲಾವಿದರು ಮಾತ್ರವಲ್ಲ; ಅಡುಗೆ ಕೆಲಸಗಾರರು, ಆಟೊ ಚಾಲಕರು, ಗಾರೆ ಕೆಲಸದವರು, ಸುತ್ತಮುತ್ತಲಿನ ಬಡವರಿಗೆ ಸಣ್ಣಪುಟ್ಟ ಸಹಾಯ ಮಾಡುತ್ತಿದ್ದಾರೆ.

‘ಮಾರ್ಚ್‌ ಆರಂಭದಿಂದಲೇ ಕಲಾವಿದರು ಸಂಕಷ್ಟಕ್ಕೆ ಸಿಲುಕಿ ದರು. ಮೇ ತಿಂಗಳಲ್ಲಿ ಸಮಸ್ಯೆ ಜೋರಾಯಿತು. ಅದರಲ್ಲೂ ಮೂವರು ನಾದಸ್ವರ ಕಲಾವಿದರು ಆತ್ಮಹತ್ಯೆ ಮಾಡಿಕೊಂಡರು. ಇದು ತುಂಬಾ ನೋವುಂಟು ಮಾಡಿತು. ಹೀಗಾಗಿ, ಹಣ ಸಂಗ್ರಹಿಸಿ ನೆರವು ನೀಡಲು ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ರಾಜ್ಯಗಳ ಕಲಾವಿದರ ಜೊತೆ ಸೇರಿ ಸಂಗೀತ ಕಛೇರಿ ಮಾಡಲು ಮುಂದಾದೆವು’ ಎಂದು ಮೈಸೂರು ಮಂಜುನಾಥ್‌ ತಿಳಿಸಿದರು.

‘ಲಕ್ಷಾಂತರ ರೂಪಾಯಿ ನೆರವು ಲಭಿಸಿತು. ಕಷ್ಟಕ್ಕೆ ಸಿಲುಕಿದ ಕಲಾವಿದರ ಬ್ಯಾಂಕ್‌ ಖಾತೆಯನ್ನು ನೀಡಲಾಯಿತು. ಅದಕ್ಕೆ ನೇರವಾಗಿ ಹಣ ಹಾಕಲು ಮನವಿ ಮಾಡಿದೆ’ ಎಂದರು.

‘ಎಂಜಿನಿಯರಿಂಗ್‌ ಕ್ಷೇತ್ರದಲ್ಲಿನ ಉದ್ಯೋಗ ತೊರೆದು ಸಂಗೀತದ ಮೇಲಿನ ಅತೀವ ಪ್ರೀತಿಯಿಂದ ಬಂದು ಈಗ ಸಂಕಷ್ಟಕ್ಕೆ ಸಿಲುಕಿದವರಿ ದ್ದಾರೆ. ಸಂಗೀತ ಪರಂಪರೆಯನ್ನು ಉಳಿಸಿಕೊಂಡು ಬಂದ ಕಂಸಾಳೆ ಕಲಾವಿದರು ತಮ್ಮ ವೃತ್ತಿ ತೊರೆದರೆ ಈ ಕ್ಷೇತ್ರದ ಕಥೆ ಏನು? ಹೀಗಾಗಿ, ಇಂಥವರನ್ನು ಗುರುತಿಸಿ ಸಹಾಯ ಮಾಡಲಾಯಿತು’ ಎಂದು ಹೇಳಿದರು.

ತಮ್ಮ ಮನೆಯ ಸುತ್ತಮುತ್ತಲಿನ ಬಡವರಿಗೂ ಆಹಾರ ಕಿಟ್‌ ನೀಡಿರುವ ಅವರು, ಸುತ್ತೂರು ಮಠ, ಗಣಪತಿ ಸಚ್ಚಿದಾನಂದ ಆಶ್ರಮದೊಂದಿಗೆ ಕೈಜೋಡಿಸಿ ಸಾಧ್ಯವಾದಷ್ಟು ಜನರಿಗೆ ನೆರವು ನೀಡಿದ್ದಾರೆ.

ಕೊಳೆಗೇರಿಗೆ ನೆರವು: ಮುಂಬೈನ ಧಾರಾವಿ ಕೊಳೆಗೇರಿಯಲ್ಲಿ ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಮಕ್ಕಳಿಗೂ ಸಹಾಯಹಸ್ತ ಚಾಚಿದ್ದಾರೆ. ಖ್ಯಾತ ವಿದ್ವಾಂಸರು ಸೇರಿ ಸಂಗೀತ ಕಛೇರಿ ಮೂಲಕ ಆನ್‌ಲೈನ್‌ನಲ್ಲಿ ಹಣ ಸಂಗ್ರಹಿಸಿ ನೀಡಿದರು. ಆ ಮಕ್ಕಳು ಈಗ ‘ಹೋಪ್‌ ಫಾರ್ ಮ್ಯೂಸಿಕ್‌, ಥ್ಯಾಂಕ್ಯೂ ಮಂಜುನಾಥ್‌ ಸರ್‌’ ಎಂದು ಪೋಸ್ಟರ್‌ ಹಿಡಿದು ಧನ್ಯವಾದ ಸಲ್ಲಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.