ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಕ್ರತೀರ್ಥ ಬಂಧಿಸಿ, ನಾಗೇಶ್‌ ವಜಾಗೊಳಿಸಿ’:ಕುವೆಂಪು ಹೋರಾಟ ಸಮಿತಿ ಆಗ್ರಹ

Last Updated 29 ಜೂನ್ 2022, 20:01 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ನಾಡು–ನುಡಿ, ಧ್ವಜ, ಕುವೆಂಪು ಅವರನ್ನು ಅವಮಾನಿಸಿದ ರೋಹಿತ್ ಚಕ್ರತೀರ್ಥನನ್ನು ಬಂಧಿಸಬೇಕು’ ಎಂದು ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಆಗ್ರಹಿಸಿದೆ.

ಅಲ್ಲದೆ, ಚಕ್ರತೀರ್ಥ ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕಗಳನ್ನು ರದ್ದುಪಡಿಸಿ, ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಸಮಿತಿ ರೂಪಿಸಿದ್ದ ಪಠ್ಯಗಳನ್ನು ಮುಂದುವರೆಸಬೇಕು ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಆಡಿಟರ್‌ ನಾಗರಾಜ್‌ ಒತ್ತಾಯಿಸಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆಗೆ ಕಾರಣವಾಗಿ ಸರ್ಕಾರದ ಬೊಕ್ಕಸಕ್ಕೆ ಬಹು ಕೋಟಿ ಆರ್ಥಿಕ ನಷ್ಟ ಉಂಟು ಮಾಡಿ, ಚಕ್ರತೀರ್ಥ ಅವರನ್ನು ಪದೇ ಪದೇ ಸಮರ್ಥಿಸುವ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿ ಸ್ವಜಾತಿ ಪ್ರೇಮ ತೋರುತ್ತಿ
ರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದೂ ಹೇಳಿದ್ದಾರೆ.

ಸರ್ಕಾರ ಪ್ರಕಟಿಸಿರುವ ತಿದ್ದೋಲೆ ಪಠ್ಯಕ್ರಮದ ಶೈಕ್ಷಣಿಕ ಪಾವಿತ್ರ್ಯತೆಗೆ ಅನುಗುಣವಾಗಿಲ್ಲ. ಅದು ಸೂಚಿಸಿರುವ ತಿದ್ದುಪಡಿಗಳಲ್ಲಿ ಕೆಲವು ಸಮುದಾಯಗಳನ್ನು ಸಮಾಧಾನಪಡಿಸುವ ಉದ್ದೇಶವಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇದು ಕೇವಲ ಕಣ್ಣೊರೆಸುವ ತಂತ್ರ. ಈ ತಿದ್ದುಪಡಿಗಳನ್ನು ರಾಜ್ಯದ ಎಲ್ಲಾ ಶಾಲೆಗಳಿಗೆ ಕೇವಲ ಒಂದು ಪ್ರತಿ ನೀಡುವಂತೆ ಆದೇಶಿಸಿರುವುದು ಮಹಾ ತಪ್ಪು ಎಂದಿದ್ದಾರೆ.

ರಾಜ್ಯದಲ್ಲಿ 50 ಸಾವಿರಕ್ಕೂ ಹೆಚ್ಚುಶಾಲೆಗಳಿವೆ. ಶಾಲೆಯ ಒಬ್ಬ ಅಧ್ಯಾಪಕನಿಗೆ ತಿದ್ದೋಲೆ ತಲುಪಿದರೆ ಮಕ್ಕಳಿಗೆ ಪ್ರಯೋಜನವಾಗುವುದಿಲ್ಲ.ಶಾಲೆಯ ಎಲ್ಲ ವಿದ್ಯಾರ್ಥಿಗಳ ಅಧ್ಯನಕ್ಕೆ ಈ ತಿದ್ದೋಲೆ ಗೊಂದಲ ಹಾಗೂ
ತೊಂದರೆಯನ್ನು ಉಂಟು ಮಾಡಬಹುದೇ ವಿನಾ ಮೂಲ ಸಮಸ್ಯೆಗೆ ಪರಿಹಾರ ಒದಗಿಸುವುದಿಲ್ಲ. ಮಕ್ಕಳು ತಮ್ಮ ಕೈಯಲ್ಲಿರುವ ಪಠ್ಯಪುಸ್ತಕಗಳನ್ನು ಮಾತ್ರ ಅಧ್ಯಯನ ನಡೆಸುತ್ತಾರೆಯೇ ಹೊರತು ಈ ತಿದ್ದೋಲೆಯ ಯಾವ ಅಂಶಗಳೂ ಅವರಿಗೆ ತಲುಪದೇ ಹೋಗುವ ಸಾಧ್ಯತೆಗಳೇ ಹೆಚ್ಚು. ಆದ್ದರಿಂದ ಅಸಂಬದ್ಧವಾದ ತಿದ್ದೋಲೆ ರೂಪದ ಆದೇಶವನ್ನು ಸರ್ಕಾರ ತಡೆ ಹಿಡಿಯಬೇಕು ಎಂದು ಹೇಳಿದ್ದಾರೆ.

10ನೇ ತರಗತಿಯಲ್ಲಿ ಕೇವಲ ಬ್ರಾಹ್ಮಣ ವರ್ಗಕ್ಕೆ ಸೇರಿದ ಹೆಡಗೇವಾರ್, ಬನ್ನಂಜೆ ಗೋವಿಂದಾಚಾರ್ಯ, ಶತಾವ
ಧಾನಿ ಆರ್‌.ಗಣೇಶ್, ಸುಶ್ರುತ ದೊಡ್ಡೇರಿ ಮುಂತಾದವರ ಬರಹ– ಭಾಷಣಗಳು ಮತ್ತು ವಸ್ತು ವಿಷಯಗಳು ಬ್ರಾಹ್ಮಣ್ಯಕ್ಕೆ ಸಂಬಂಧಪಟ್ಟಿವೆ. ಇವುಗಳನ್ನು ಕೈಬಿಡಬೇಕು. ಇವರು ಕನ್ನಡ ನಾಡು–ನುಡಿಗೆ ಸಂಬಂಧಪಟ್ಟವರಲ್ಲ. ಅವರಲ್ಲಿ ವಿದ್ವತ್ತು, ಸಾಹಿತ್ಯ, ಸಾಮಾಜಿಕ ಪ್ರಜ್ಞೆ ಮತ್ತು ಇತಿಹಾಸದ ಅರಿವಿಲ್ಲ. ಇವರ ಪಾಠಗಳನ್ನು ಓದಿದರೆ ಒಂದು ಪೀಳಿಗೆ ಭವಿಷ್ಯವೇ ನಾಶವಾಗುವುದರಲ್ಲಿ ಸಂದೇಹವಿಲ್ಲ ಎಂದು ಕಿಡಿಕಾರಿದ್ದಾರೆ.

ಕುದ್ಮುಲ್‌ ರಂಗರಾವ್‌ಪಾಠ ಏಕಿಲ್ಲ?

ಮೈಸೂರು: ‘ಮಾನವೀಯತೆಯೇ ಇಲ್ಲದ ಸಮಾಜವನ್ನು ಸುಧಾರಿಸಲು ಕುದ್ಮುಲ್ ರಂಗರಾಯರು ಶ್ರಮಿಸಿದರು. ಪಠ್ಯಪುಸ್ತಕ ಪರಿಷ್ಕರಣೆ ಮಾಡಿರುವವರು ರಂಗರಾವ್‌ ಅವರ ಪಾಠವನ್ನು ಸೇರಿಸಿಲ್ಲವೇಕೆ’ ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್‌ ಪ್ರಶ್ನಿಸಿದರು.

ನಗರದ ವಿಜ್ಞಾನ ಭವನದಲ್ಲಿ ಸಾಮಾಜಿಕ ನ್ಯಾಯ ವೇದಿಕೆ ವತಿಯಿಂದ ಬುಧವಾರ ಏರ್ಪಡಿಸಿದ್ದ ಕುದ್ಮುಲ್‌ ರಂಗರಾವ್‌ ಅವರ 163ನೇ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿ, ‘ದಲಿತರು, ಅಸ್ಪೃಶ್ಯರನ್ನು ಸಮಾಜವು ರೌರವ ನರಕದಲ್ಲಿಟ್ಟಿದೆ. ದಲಿತರು ವರ್ಣಗಳಲ್ಲಿ ಶೂದ್ರರೂ ಅಲ್ಲ. ಪಂಚಮರೆಂದು ಆಚೆಯಿಟ್ಟಿದೆ. ಪಂಚಮರ ಕಲ್ಯಾಣಕ್ಕಾಗಿ ರಂಗರಾವ್‌ ಜೀವನವಿಡಿ ಹೋರಾಡಿದರು’ ಎಂದರು.

ನಾರಾಯಣ ಗುರುಗಳ ಪಾಠ ಮರು ಸೇರ್ಪಡೆಗೆ ಆಗ್ರಹ

ಬೆಂಗಳೂರು: 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ನಾರಾಯಣ ಗುರುಗಳ ಅಧ್ಯಾಯವನ್ನು ಮರು ಸೇರ್ಪಡೆ ಮಾಡಬೇಕು ಎಂದು ನಾರಾಯಣ ಗುರು ವಿಚಾರ ವೇದಿಕೆ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಪ್ರಧಾನ ಕಾರ್ಯದರ್ಶಿರಾಘವೇಂದ್ರ ನಾಯ್ಕ ಸುಂಟ್ರಹಳ್ಳಿ, ‘ಪಠ್ಯಪುಸ್ತಕ ಮರು ಪರಿಷ್ಕರಣೆಯಲ್ಲಿ ಬಸವಣ್ಣ, ಕುವೆಂಪು, ಅಂಬೇಡ್ಕರ್‌ ಅವರ ಪಠ್ಯಗಳಲ್ಲಿ ಆದ ಲೋಪ–ದೋಷಗಳನ್ನುಲಿಂಗಾಯತರು ಮತ್ತು ಒಕ್ಕಲಿಗರು ಖಂಡಿಸಿದರು. ಆ ಸಮುದಾಯದ ಸ್ವಾಮೀಜಿಗಳು ಹೋರಾಟದ ಎಚ್ಚರಿಕೆ ನೀಡಿದ ತಕ್ಷಣ ಸರ್ಕಾರ ರೋಹಿತ್‌ ಚಕ್ರತೀರ್ಥ ಸಮಿತಿಯನ್ನು ವಿಸರ್ಜಿಸಿತು. ಕುವೆಂಪು ಮತ್ತು ಬಸವಣ್ಣನವರ ಪಠ್ಯಗಳನ್ನು ತಿದ್ದುಪಡಿ ಮಾಡುವ ಮೂಲಕ ಮೇಲ್ವರ್ಗಗಳ ಓಲೈಕೆಗೆ ಮುಂದಾಯಿತು’ ಎಂದರು.

‘ನಾರಾಯಣ ಗುರುಗಳ ಜೀವನ ಚರಿತ್ರೆಯ ಪಠ್ಯವನ್ನು ಸಮಾಜ ವಿಜ್ಞಾನದಲ್ಲಿ ಕೈಬಿಟ್ಟು ಕನ್ನಡ ವಿಷಯಕ್ಕೆ ಸೇರಿಸಲಾಗಿದೆ. ಇದು ಸಮುದಾಯದ ಕಣ್ಣಿಗೆ ಮಣ್ಣು ಎರಚುವ ತಂತ್ರ. ತಪ್ಪುಗಳಿಂದಲೇ ತುಂಬಿರುವ
ಹೊಸ ಪಠ್ಯವನ್ನು ಮಕ್ಕಳಿಗೆ ವಿತರಿಸದೇ ಹಳೆಯ ಪಠ್ಯವನ್ನೇ ಮಂದುವರಿಸಬೇಕು’ ಎಂದು ಒತ್ತಾಯಿಸಿದರು.

‘ಬಿಲ್ಲವ, ಈಡಿಗ, ನಾಮಧಾರಿ ಸೇರಿ 26 ಪಂಗಡಗಳ ಅಭಿವೃದ್ಧಿಗೆ ನಾರಾಯಣ ಗುರುಗಳ ಹೆಸರಿನಲ್ಲಿ
ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿ, ಸಮುದಾಯದ ಅಭಿವೃದ್ಧಿಗೆ ₹500 ಕೋಟಿ ಮೀಸಲಿಡಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT