ಭಾನುವಾರ, ನವೆಂಬರ್ 17, 2019
21 °C
ವಿಶ್ವಕರ್ಮ ಜಯಂತಿ

ದೊಡ್ಡತನ ಹೊಂದಿರುವ ವಿಶ್ವಕರ್ಮರಲ್ಲಿ ಬಡತನ: ಸಚಿವ ವಿ.ಸೋಮಣ್ಣ

Published:
Updated:
Prajavani

ಮೈಸೂರು: ‘ದೊಡ್ಡತನವಿರುವ ವಿಶ್ವಕರ್ಮ ಸಮುದಾಯದವರಲ್ಲಿ ಬಡತನವಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

ನಗರದ ಕಲಾಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಶ್ವಕರ್ಮ ಜಯಂತ್ಯುತ್ಸವ ಸಮಿತಿ ವತಿಯಿಂದ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಮಾತನಾಡಿದ ಸಚಿವರು, ‘ವಿಶ್ವಕರ್ಮ ಸಮಾಜ ಕುಲಕಸುಬು ಅವಲಂಬಿಸಿದೆ. ಈ ಕಸುಬನ್ನೇ ಬೇರೆಯವರು ಹೈಜಾಕ್ ಮಾಡಿರುವುದರಿಂದ ಮೂಲ ಕಸುಬುದಾರರಿಗೆ ಬೆಲೆ ಇಲ್ಲದ ಸಂದರ್ಭ ಸೃಷ್ಟಿಯಾಗಿದೆ’ ಎಂದರು.

‘ಬ್ರಹ್ಮನನ್ನು ಮೈಗೂಡಿಸಿಕೊಂಡ ವಿಶ್ವಕರ್ಮ ಸಮಾಜದವರು ಬುದ್ಧಿವಂತರು. ದೊಡ್ಡತನ ಇದೆ. ಯಾವುದೇ ಕೆಲಸವನ್ನು ನಿರ್ವಹಿಸಬಲ್ಲ ಸಾಮರ್ಥ್ಯವಿದೆ. ಇದರ ಅರಿವಿಲ್ಲದೇ ಸಮಾಜದವರು ತೊಳಲಾಟದಲ್ಲಿ ಸಿಲುಕಿದ್ದಾರೆ. ಒಗ್ಗಟ್ಟಿನ ಕೊರತೆಯಿಂದ ಅಭಿವೃದ್ಧಿಯಿಂದ ಹಿಂದುಳಿದಿದ್ದಾರೆ’ ಎಂದು ಹೇಳಿದರು.

ವಿಶ್ವಕರ್ಮ ಸಮುದಾಯ ಭವನ, ವಿಶ್ವಕರ್ಮ ನಿಗಮ ಮಂಡಳಿಗೆ ಹೆಚ್ಚಿನ ಅನುದಾನ, ಸಣ್ಣ ಪ್ರಮಾಣದ ಉದ್ದಿಮೆ ಸ್ಥಾಪನೆಗೆ ಹಣಕಾಸಿನ ನೆರವು ನೀಡುವಂತೆ ಮುಖಂಡರು ಮನವಿ ಸಲ್ಲಿಸಿದ್ದಾರೆ. ವಿಶ್ವಕರ್ಮ ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕ ನಡೆಯಬೇಕಿದೆ. ವಿಶ್ವಕರ್ಮ ಜನಾಂಗದ ಅಭಿವೃದ್ಧಿಗೆ ಸರ್ಕಾರ ಯಾವತ್ತೂ ಬದ್ಧವಾಗಿದೆ ಎಂದು ಸಚಿವರು ಭರವಸೆ ನೀಡಿದರು.

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ‘ಬೃಹತ್ ಕಂಪನಿಗಳಿಂದ ವಿಶ್ವಕರ್ಮ ಸಮುದಾಯದವರು ನಿರುದ್ಯೋಗಿಗಳಾಗಿದ್ದಾರೆ. ಶಿಕ್ಷಣ ಪಡೆಯದಿದ್ದರೆ ಬದುಕಲಾಗದ ಸ್ಥಿತಿ ಇದೆ. ಆದ್ದರಿಂದ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಒತ್ತು ಕೊಡಬೇಕು’ ಎಂದು ತಿಳಿಸಿದರು.

‘ವಿಶ್ವಕರ್ಮ ಸಮುದಾಯದವರು ಮೇಯರ್ ಆಗುವುದನ್ನು ತಪ್ಪಿಸಲಾಯಿತು. ಹುಣಸೂರಿನಲ್ಲಿ ವಿಶ್ವಕರ್ಮ ಸಮುದಾಯದವರಿಗೆ ಪುರಸಭೆ ಟಿಕೆಟ್ ಸಿಗದಂತೆ ಮಾಡಿದ ದುಷ್ಟರು-ನೀಚರು ನಮ್ಮ ಸಮಾಜದಲ್ಲಿದ್ದಾರೆ. ಹಾಗಾಗಿ ಸಮಾಜ ಅಂದಾಗ ರಾಜಕಾರಣ ಬಿಟ್ಟು ಎಲ್ಲರೂ ಒಂದಾಗಬೇಕು. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

 

ಪ್ರತಿಕ್ರಿಯಿಸಿ (+)