ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಮಾನವ ಎಕ್ಸ್‌ಪ್ರೆಸ್‌ಗೆ ಎರಡು ವರ್ಷದ ಸಂಭ್ರಮ

Last Updated 22 ಮೇ 2019, 14:42 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಮತ್ತು ಹುಬ್ಬಳ್ಳಿ ನಡುವೆ ಸಂಚರಿಸುತ್ತಿರುವ ವಿಶ್ವಮಾನವ ಎಕ್ಸ್‌ಪ್ರೆಸ್‌ಗೆ ಮೇ 23ಕ್ಕೆ ಎರಡನೇ ವರ್ಷ ಪೂರೈಸಿದ ಸಂಭ್ರಮ.

2017ರ ಮೇ 23ರಂದು ಈ ರೈಲಿಗೆ ಚಾಲನೆ ನೀಡಲಾಗಿತ್ತು. ಮೈಸೂರಿನಿಂದ ಹುಬ್ಬಳ್ಳಿ ನಡುವಿನ ಸಂಚಾರ ಮಾತ್ರವೇ ಅಲ್ಲದೇ, ಮೈಸೂರಿನಿಂದ ಬೆಂಗಳೂರಿಗೆ ಸಂಚರಿಸುವ ಪ್ರಯಾಣಿಕರಿಗೆ ಈ ರೈಲಿನ ಪರಿಚಯದಿಂದಾಗಿ ಸಾಕಷ್ಟು ಪ್ರಯೋಜನವಾಗಿತ್ತು.

ಈ ರೈಲಿಗೂ ಮುಂಚೆ, ಬೆಳಿಗ್ಗಿನ ಸಮಯದಲ್ಲಿ ಬೆಂಗಳೂರು ಮಾರ್ಗವಾಗಿ ಸಂಚರಿಸುತ್ತಿದ್ದದ್ದು ಚಾಮುಂಡಿ ಎಕ್ಸ್‌ಪ್ರೆಸ್‌ ಮಾತ್ರ. ಬೆಳಿಗ್ಗೆ 6.45ಕ್ಕೆ ಈ ರೈಲು ಮೈಸೂರಿನಿಂದ ಬೆಂಗಳೂರಿಗೆ ಸಂಚರಿಸುತ್ತದೆ. ಈ ಸಮಯದಲ್ಲಿ ಇದೊಂದೇ ರೈಲು ಇದ್ದಿದ್ದರಿಂದ ಚಾಮುಂಡಿ ಎಕ್ಸ್‌ಪ್ರೆಸ್ ರೈಲಿಗೆ ಪ್ರಯಾಣಿಕರಿಂದ ಅತೀವ ಒತ್ತಡವಿತ್ತು. ಹಾಗಾಗಿ, ಮೈಸೂರು ಭಾಗದ ಪ್ರಯಾಣಿಕರಿಂದ ಬೆಳಿಗ್ಗಿನ ಅವಧಿಯಲ್ಲಿ ಮತ್ತೊಂದು ರೈಲು ಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು.

ಸಂಸದ ಪ್ರತಾಪಸಿಂಹ ಅವರ ಪ್ರಯತ್ನದಿಂದಾಗಿ 2017ರ ಮೇ 23ರಂದು ವಿಶ್ವಮಾನವ ಎಕ್ಸ್‌ಪ್ರೆಸ್ ರೈಲು ಕಾರ್ಯಾರಂಭ ಮಾಡಿತು. ಈ ರೈಲು ಬೆಳಿಗ್ಗೆ 5.50ಕ್ಕೆ ಮೈಸೂರಿನಿಂದ ಹೊರಡುತ್ತದೆ. ಅಲ್ಲದೇ, ಈ ರೈಲಿನ ಪರಿಚಯವಾದ ಬಳಿಕ ಮೈಸೂರು – ಚೆನ್ನೈ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್ ರೈಲನ್ನು ಪರಿಚಯಿಸಿ ಬೆಳಿಗ್ಗೆ 4.45ಕ್ಕೆ ಪ್ರತಿನಿತ್ಯ ಸಂಚರಿಸುವಂತೆ ಕ್ರಮ ಕೈಗೊಳ್ಳಲಾಯಿತು. ಇದರಿಂದಾಗಿ, ಚಾಮುಂಡಿ ಎಕ್ಸ್‌ಪ್ರೆಸ್ ರೈಲಿನ ಮೇಲಿನ ಒತ್ತಡ ಕಡಿಮೆಯಾಯಿತು. ಚಾಮುಂಡಿ ಎಕ್ಸ್‌ಪ್ರೆಸ್‌ ರೈಲಿನ ಬಳಿಕ ಬೆಳಿಗ್ಗೆ 8.25ಕ್ಕೆ ಮಾಲ್ಗುಡಿ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್, ಬೆಳಿಗ್ಗೆ 11.30ಕ್ಕೆ ಟಿಪ್ಪು ಎಕ್ಸ್‌ಪ್ರೆಸ್‌ ಬೆಂಗಳೂರು ಕಡೆಗೆ ಸಂಚರಿಸುತ್ತಿವೆ.

ಅಶೋಕಪುರಂಗೂ ವಿಸ್ತರಣೆ: ಮೈಸೂರು ರೈಲು ನಿಲ್ದಾಣದಿಂದ ಕೇವಲ 5 ಕಿಲೋಮೀಟರ್‌ ದೂರದಲ್ಲಿರುವ ಅಶೋಕಪುರಂ ರೈಲು ನಿಲ್ದಾಣದಿಂದ ವಿಶ್ವಮಾನವ ಎಕ್ಸ್‌ಪ್ರೆಸ್‌ ಈಗ ಪ್ರತಿನಿತ್ಯ ಬೆಳಿಗ್ಗೆ 5.15ಕ್ಕೆ ಹೊರಡುತ್ತದೆ. 2019ರ ಜ. 16ರಂದು ಈ ನಿಲ್ದಾಣದಿಂದ ರೈಲು ಹೊರಡಲು ಶುರುಮಾಡಿತು.

‘ರೈಲ್ವೆ ಯೂಸರ್ಸ್‌’ ಸಂಭ್ರಮ

ಮೈಸೂರಿನ ‘ರೈಲ್ವೆ ಯೂಸರ್ಸ್‌’ ಟ್ವಿಟರ್‌ ಖಾತೆಯ ಹಿಂಬಾಲಕರು ದ್ವಿತೀಯ ವಾರ್ಷಿಕೋತ್ಸವವನ್ನು ಸಂಭ್ರಮಿಸಿದ್ದಾರೆ.

ಈ ಖಾತೆಗೆ 700ಕ್ಕೂ ಹೆಚ್ಚು ಪ್ರಯಾಣಿಕರು ಹಿಂಬಾಲಕರು ಇದ್ದಾರೆ. ಈ ಖಾತೆಯ ಮೂಲಕ ಸತತ ಟ್ವೀಟ್‌ಗಳನ್ನು ಮಾಡಿ, ನೈರುತ್ಯ ರೈಲ್ವೆಯ ಗಮನ ಸೆಳೆದು ಹೆಚ್ಚುವರಿ ರೈಲಿನ ಅಗತ್ಯದ ಬಗ್ಗೆ ಬೆಳಕು ಚೆಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT