ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನಕ್ಕೆ ಹಿರಿಯರೇ ಮುಂದು

ಒಂದು ತಲೆಮಾರು ಕಳೆದರೆ ಮುಂದೇನು?– ಚರ್ಚೆಗೆ ಗ್ರಾಸ ಒದಗಿಸಿದ ಪ್ರಶ್ನೆ
Last Updated 18 ಏಪ್ರಿಲ್ 2019, 20:27 IST
ಅಕ್ಷರ ಗಾತ್ರ

ಮೈಸೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಹಿರಿಯರು, ಮಧ್ಯ ವಯಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಲ್ಲಿ ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಗುರುವಾರ ಕಂಡು ಬಂದವು. ಈ ಸಾಲಿನಲ್ಲಿ ಯುವಕ ಮತ್ತು ಯುವತಿಯರನ್ನು ಹುಡುಕಬೇಕಾದ ಪರಿಸ್ಥಿತಿ ಇತ್ತು.

ಬೆಳಿಗ್ಗೆ 9 ಗಂಟೆಗೆ ಅಗ್ರಹಾರದ ತಮ್ಮ ನಿವಾಸದಿಂದ ಹೊರಬಂದ 91 ವರ್ಷದ ಗೌರಮ್ಮ ತ್ಯಾಗರಾಜ ರಸ್ತೆಯ ಅಕ್ಕನಬಳಗದ ಸಖಿ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಬಳಿಕ ಪ್ರತಿಕ್ರಿಯಿಸಿ, ‘ಇದು ಎಷ್ಟನೇ ಚುನಾವಣೆ ಅನ್ನೋದು ನೆನಪಿಲ್ಲ. ಆದರೆ, ಪ್ರತಿ ಚುನಾವಣೆಯಲ್ಲೂ ಮತದಾನ ಮಾಡುತ್ತಿರುವೆ. ದೇಶಕ್ಕಾಗಿ ನಾವು ಏನೂ ಕೊಡುವುದಿಲ್ಲ. ಕನಿಷ್ಠ ಮತವನ್ನಾದರೂ ಕೊಡುವುದಿಲ್ಲ ಎಂದರೆ ಹೇಗೆ’ ಎಂದು ಪ್ರಶ್ನಿಸಿ ಮುಂದಡಿ ಇಟ್ಟರು.

ಕುವೆಂಪುನಗರದ ಕುವೆಂಪು ಪ್ರೌಢಶಾಲೆಯ ಮತಗಟ್ಟೆಗೆ ಹಿರಿಯ ನಾಗರಿಕ ದಂಪತಿ ಮತ ಚಲಾಯಿಸಲು ಬೆಳಿಗ್ಗೆ 9.30ಕ್ಕೆ ಬಂದರು. 85 ವರ್ಷದ ರಂಗನಾಥ್ ಅವರು ನಡೆಯಲು ಕಷ್ಟಪಡುತ್ತಿದ್ದರು. ‘ವಾಕರ್‌’ ಸಹಾಯದಿಂದ ಒಂದೊಂದೇ ಹೆಜ್ಜೆ ಇಡುತ್ತಾ ಬಂದು, ‘ಮತದಾನಕ್ಕಿಂತ ದೊಡ್ಡ ಕಾರ್ಯ ಉಂಟೆ’ ಎಂದಷ್ಟೇ ಹೇಳಿ ಮತದಾನ ಮಾಡಲು ಹೊರಟರು. ಇವರ ಜತೆ 80 ವರ್ಷದ ರಮಾಮಣಿ ಅವರೂ ಮತದಾನ ಮಾಡಲು ಬಂದಿದ್ದರು.

ತೀವ್ರವಾಗಿ ಕಾಡುತ್ತಿದ್ದ ಅನಾರೋಗ್ಯದ ನಡುವೆಯೂ 67 ವರ್ಷದ ಚಿಕ್ಕೇರಸ್ ಅವರು ಒಂದು ಕೈಯಲ್ಲಿ ಊರುಗೋಲು ಮತ್ತೊಂದು ಕೈಯಲ್ಲಿ ಮಹಿಳೆಯೊಬ್ಬರ ಕೈ ಹಿಡಿದು ಮೆಲ್ಲಗೆ ಹೆಜ್ಜೆ ಇಡುತ್ತಾ ಶಾರದಾದೇವಿನಗರದ ಇಂದಿರಾ ವಿದ್ಯಾಸಂಸ್ಥೆಯ ಮತಗಟ್ಟೆಗೆ ಬಂದರು. 100 ಮೀಟರ್ ಕ್ರಮಿಸುವುದಕ್ಕೆ 15 ನಿಮಿಷ ತೆಗೆದುಕೊಂಡರು. ಇಷ್ಟು ಅನಾರೋಗ್ಯದಲ್ಲೂ ಮತದಾನ ಮಾಡಲು ಬರಬೇಕಿತ್ತೇ ಎಂದು ಕೇಳಿದ ಪ್ರಶ್ನೆಗೆ ಏದುಸಿರು ಬಿಡುತ್ತಾ ಕೈ ಸನ್ನೆಯಲ್ಲೇ ‘ಮಾತನಾಡಲು ಆಗದು’ ಎನ್ನುತ್ತಾ ಮತಗಟ್ಟೆ ಪ್ರವೇಶಿಸಿದರು.

ನಗರದ ಬಹುತೇಕ ಮತಗಟ್ಟೆಗಳಲ್ಲಿ ಬೆಳಿಗ್ಗೆ ಸಾಲಿನಲ್ಲಿ ನಿಂತಿದ್ದವರು ಹಿರಿಯರೇ ಆಗಿದ್ದರು. ಬಂದವರೆಲ್ಲ ಹಿರಿಯರೇ ಆಗಿದ್ದಾರೆ ಎಂದು ಬಹುತೇಕ ಮತಗಟ್ಟೆ ಸಿಬ್ಬಂದಿ ತಿಳಿಸಿದರು. ಇಲ್ಲೆಲ್ಲ ಯುವ ತಲೆಮಾರಿನ ಗೈರು ಹಾಜರಿ ಎದ್ದು ಕಾಣುತ್ತಿತ್ತು.

ಗಾಲಿ ಕುರ್ಚಿಯ ಸಹಾಯ:ಕೆಲವು ಮತಗಟ್ಟೆಗಳಲ್ಲಿ ಹಿರಿಯ ನಾಗರಿಕರಿಗೆ ಗಾಲಿ ಕುರ್ಚಿಯ ಆಸರೆ ನೀಡಲಾಗಿತ್ತು. ಭೋಗಾದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಮುಂದೆ 75 ವರ್ಷದ ರಮಾನಂದ ಅವರು ಆಟೊದಿಂದ ಇಳಿದರು. ಮಹಿಳೆಯೊಬ್ಬರು ಒಂದು ಕೈ ಹಿಡಿದುಕೊಂಡು ಹೆಜ್ಜೆ ಹಾಕಿಸುತ್ತಿದ್ದರು. ಶಾಲೆಯ ಗೇಟಿನಲ್ಲೇ ಅವರು ಹಿಡಿದುಕೊಳ್ಳಲಾರದೇ ಸಾರ್ವಜನಿಕರ ಸಹಾಯ ಕೋರಿದರು. ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ಹಿಡಿದುಕೊಂಡು ಹೆಜ್ಜೆ ಹಾಕಿಸಲು ನೆರವಾದರು. ಅಷ್ಟೊತ್ತಿಗೆ ಪೊಲೀಸ್ ಸಿಬ್ಬಂದಿ ಕುರ್ಚಿ ನೀಡಿ ಕುಳ್ಳಿರಿಸಿದರು. ಗಾಲಿ ಕುರ್ಚಿ ತೆಗೆದುಕೊಂಡು ಬಂದು ಮತದಾನ ಮಾಡಲು ನೆರವಾದರು.

‘ನಾನು 1962ರಿಂದಲೂ ಮತದಾನ ಮಾಡುತ್ತಲೇ ಬಂದಿರುವೆ. ಅನಾರೋಗ್ಯ ಇದೆ, ನಡೆಯಲಾಗದು ಎಂದು ಮತದಾನದಿಂದ ದೂರ ಉಳಿಯುವುದು ಸರಿಯಲ್ಲ. ಎಲ್ಲರೂ ಮತದಾನ ಮಾಡಲೇಬೇಕು’ ಎಂದು ರಮಾನಂದ ಮನವಿ ಮಾಡಿದರು.

ಒಟ್ಟಿಗೆ ಮತದಾನ ಮಾಡಿದ ಮೂರು ತಲೆಮಾರು!
ಮೈಸೂರಿನ ಶಾರದಾದೇವಿನಗರದ ಇಂದಿರಾ ವಿದ್ಯಾಸಂಸ್ಥೆಯಲ್ಲಿ ಮೂರು ತಲೆಮಾರಿನವರು ಒಟ್ಟಿಗೆ ಮತದಾನ ಮಾಡಿ ಸಂಭ್ರಮಿಸಿದರು.

ಅಜ್ಜಿ ಕೆ.ಎಸ್.ರತ್ನಮ್ಮ, ಪುತ್ರ ಟಿ.ಎಸ್.ವಾಸುಕಿ, ಮೊಮ್ಮಗ ಪ್ರಣವ್ ಒಟ್ಟಿಗೆ ಮತದಾನ ಮಾಡಿದರು. ‘ಇಲ್ಲಿಯವರೆಗೆ ನಮ್ಮ ಕುಟುಂಬದಲ್ಲಿ ಎರಡು ತಲೆಮಾರಿನ ಮಂದಿ ಮಾತ್ರ ಮತದಾನ ಮಾಡುತ್ತಿದ್ದರು. ಇದೀಗ ನಮ್ಮ ಪುತ್ರ ಪ್ರಣವ್ ಮೊದಲ ಬಾರಿಗೆ ಮತದಾನ ಮಾಡುವ ಹಕ್ಕು ಗಳಿಸಿದ್ದಾನೆ. ಈ ಚುನಾವಣೆಯಿಂದ ಪ್ರಜಾಪ್ರಭುತ್ವದಲ್ಲಿ ಮೂರು ತಲೆಮಾರು ಭಾಗಿಯಾದಂತಾಯಿತು’ ಎಂದು ವಾಸುಕಿ ಹೆಮ್ಮೆಯಿಂದ ಹೇಳಿಕೊಂಡರು.

ಹತ್ತಿಪ್ಪತ್ತು ವರ್ಷ ಕಳೆದರೆ ಗತಿ ಏನು?
ಮತಗಟ್ಟೆಗಳತ್ತ ಸುಳಿಯದ ಯುವತಲೆಮಾರಿನ ಕುರಿತು ಪ್ರತಿಕ್ರಿಯಿಸಿದ ಮತಗಟ್ಟೆ ಅಧಿಕಾರಿ ಶಿವಣ್ಣ, ‘ಈ ಒಂದು ತಲೆಮಾರು ಗತಿಸಿದರೆ ಪ್ರಜಾಪ್ರಭುತ್ವದ ಗತಿ ಏನು. ಯುವ ತಲೆಮಾರು ಮತದಾನದಿಂದ ಏಕೆ ದೂರ ಉಳಿಯುತ್ತಿದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಇವರ ಸುಳಿವೇ ಇಲ್ಲ. ಹೀಗಾದರೆ, ಮುಂಬರುವ ಚುನಾವಣೆಗಳ ಗತಿ ಏನು’ ಎಂದು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT