ಲೋಕಸಭೆ ಕಣದಲ್ಲಿ ಹೊಸ ಬೆಳವಣಿಗೆ: ಪರಸ್ಪರ ಹೊಗಳಿದ ಸಿದ್ದರಾಮಯ್ಯ–ಜಿ.ಟಿ.ದೇವೇಗೌಡ

ಭಾನುವಾರ, ಏಪ್ರಿಲ್ 21, 2019
26 °C

ಲೋಕಸಭೆ ಕಣದಲ್ಲಿ ಹೊಸ ಬೆಳವಣಿಗೆ: ಪರಸ್ಪರ ಹೊಗಳಿದ ಸಿದ್ದರಾಮಯ್ಯ–ಜಿ.ಟಿ.ದೇವೇಗೌಡ

Published:
Updated:

ಮೈಸೂರು: ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಕೊನೆಗೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬೆಳವಣಿಗೆ ಮೈಸೂರು–ಕೊಡಗು ಕ್ಷೇತ್ರದ ಚುನಾವಣೆ ಫಲಿತಾಂಶದ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರಬಹುದು ಎಂಬ ಚರ್ಚೆ ಕಾವೇರಿದೆ.

ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್‌–ಜೆಡಿಎಸ್‌ ಜಂಟಿ ಸಮಾವೇಶದಲ್ಲಿ ಈ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದರು. ವೇದಿಕೆಯಲ್ಲಿ ಇವರಿಬ್ಬರು ಅಕ್ಕಪಕ್ಕ ಕುಳಿತುಕೊಂಡಿರಲಿಲ್ಲ. ಪರಸ್ಪರ ಮಾತನ್ನೂ ಆಡಿರಲಿಲ್ಲ. ಆದರೆ, ಭಾಷಣದ ವೇಳೆ ಪರಸ್ಪರರ ಹೆಸರು ಪ್ರಸ್ತಾಪಿಸಿ ಹೊಗಳಿದ್ದರು.

ಇದನ್ನೂ ಓದಿ: ವೇದಿಕೆ ಹಂಚಿಕೊಂಡ ಸಿದ್ದರಾಮಯ್ಯ– ಜಿಟಿಡಿ

ಚಾಮುಂಡೇಶ್ವರಿ ಕ್ಷೇತ್ರದ ವಿಧಾನಸಭಾ ಚುನಾವಣೆ ವೇಳೆ ಈ ಇಬ್ಬರು ನಾಯಕರು ಮಾತಿನ ಸಮರವನ್ನೇ ನಡೆಸಿದ್ದರು. ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು 10 ತಿಂಗಳಾದರೂ ಇವರ ನಡುವಿನ ವೈರತ್ವ ಕಡಿಮೆಯಾಗಿರಲಿಲ್ಲ. ಅವಕಾಶ ಸಿಕ್ಕಾಗ ಮಾತಿನಲ್ಲೇ ಪರಸ್ಪರ ‘ಟಾಂಗ್‌’ ಕೊಡುತ್ತಿದ್ದರು. ರಾಜ್ಯದಲ್ಲಿ ದೋಸ್ತಿ ಇದ್ದರೂ ಮೈಸೂರಿನಲ್ಲಿ ಮಾತ್ರ ಕಾಂಗ್ರೆಸ್‌–ಜೆಡಿಎಸ್ ‘ಕುಸ್ತಿ’ ನಡೆಯುತ್ತಲೇ ಇತ್ತು. ಲೋಕಸಭೆ ಚುನಾವಣೆ ಘೋಷಣೆಯಾಗಿ ಹಲವು ದಿನಗಳವರೆಗೆ ಜಿ.ಟಿ.ದೇವೇಗೌಡ ಅವರು ಅಂತರ ಕಾಯ್ದುಕೊಂಡಿದ್ದರು.

ಆದರೆ, ಬೆಂಗಳೂರಿನಲ್ಲಿ ಕಳೆದ ವಾರ ನಡೆದ ಮಾತುಕತೆ ಬಳಿಕ ಇಬ್ಬರು ಜತೆಯಾಗಲು ಒಪ್ಪಿಗೆ ಸೂಚಿಸಿದ್ದರು. ಮಂಡ್ಯ, ಹಾಸನ ಮತ್ತು ತುಮಕೂರು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಲು ಜೆಡಿಎಸ್‌ಗೆ ಕಾಂಗ್ರೆಸ್‌ನ ಬೆಂಬಲ ಬೇಕಿದೆ. ಮೈಸೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸು ವುದು ಜೆಡಿಎಸ್‌ಗೆ ಅನಿವಾರ್ಯವಾಗಿದೆ. ಈ ಕಾರಣ ಜಿ.ಟಿ.ದೇವೇಗೌಡ ಅವರು ಪ್ರಚಾರಕ್ಕೆ ಇಳಿದಿದ್ದಾರೆ.

ಮತದಾನಕ್ಕೆ ಐದು ದಿನಗಳಿರುವಾಗ ಇವರಿಬ್ಬರು ವೇದಿಕೆ ಹಂಚಿಕೊಂಡದ್ದು ಮೈಸೂರು ನಗರ ಮತ್ತು ಚಾಮುಂಡೇ ಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಮತಗಳಿಕೆ ಲೆಕ್ಕಾಚಾರದ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ಲೇಷಿಸಲಾಗುತ್ತದೆ. ನಾಯಕರಿಬ್ಬರು ಜತೆಯಾದರೆ ಕಾರ್ಯಕರ್ತರು ಜತೆಯಾಗುವರೇ ಎಂಬ ಮಾತು ಕೂಡಾ ಕೇಳಿ ಬರುತ್ತಿದೆ. ಬಿಜೆಪಿಯೂ ಅದೇ ವಿಶ್ವಾಸದಲ್ಲಿದೆ.

ಇದನ್ನೂ ಓದಿ: ಕಾಂಗ್ರೆಸ್‌–ಜೆಡಿಎಸ್‌ ನಾಯಕರ ಒಗ್ಗಟ್ಟು ಪ್ರದರ್ಶನ

ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಗೆಲುವಿನಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಮತಗಳೂ ನಿರ್ಣಾಯಕ ಎನಿಸಲಿವೆ. ಇತರ ಕ್ಷೇತ್ರಗಳಿಗೆ ಹೋಲಿಸಿದರೆ ಇಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡ 1.21 ಲಕ್ಷ ಮತ ಗಳನ್ನು ಹಾಗೂ ಸಿದ್ದರಾಮಯ್ಯ 85 ಸಾವಿರ ಮತಗಳನ್ನು ಪಡೆದು ಕೊಂಡಿದ್ದರು. ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ ಪರೋಕ್ಷವಾಗಿ ಜಿ.ಟಿ.ದೇವೇಗೌಡ ಅವರನ್ನು ಬೆಂಬಲಿ ಸಿತ್ತು. ಇದರಿಂದಾಗಿ ಅವರಿಗೆ ಬಿದ್ದ ಮತಗಳು ಒಂದು ಲಕ್ಷದ ಗಡಿ ದಾಟಿತ್ತು.

ಶುಕ್ರವಾರ ನಡೆದಿದ್ದ ಜಂಟಿ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ ಜಿ.ಟಿ.ದೇವೇಗೌಡ ಅವರು, ‘ವಿಧಾನಸಭೆ ಚುನಾವಣೆಗೂ ಮುನ್ನ ಚಾಮುಂಡೇಶ್ವರಿ ಕ್ಷೇತ್ರದ ಎಲ್ಲ ಕಾರ್ಯಕ್ರಮಗಳಲ್ಲಿ ನಾವು ಜತೆಯಾಗಿರುತ್ತಿದ್ದೆವು. ಸಿದ್ದರಾಮಯ್ಯ ಬಂದಾಗ ಯಾವುದೇ ಕಾರ್ಯ ಕ್ರಮದಲ್ಲೂ ಗೈರಾಗಿರಲಿಲ್ಲ’ ಎಂದಿದ್ದರು.

ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಮೂಲಕ ರಾಜಕೀಯ ಜೀವನ ಆರಂಭಿಸಿದ್ದ ಎಚ್‌.ಡಿ.ದೇವೇಗೌಡ ಅವರು ಪ್ರಧಾನಿಯಾಗಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜ ಹಾರಿಸಿದ್ದರೆ, ಸಿದ್ದರಾಮಯ್ಯ ಅವರು ಸಿದ್ದರಾಮನಹುಂಡಿಯಿಂದ ಹೋಗಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಹೊಗಳಿದ್ದರು.

ಸಿದ್ದರಾಮಯ್ಯ ಮತ್ತು ಜಿ.ಟಿ.ದೇವೇಗೌಡ ಅವರು ಏ. 14 ರಂದು ಚಾಮುಂಡೇಶ್ವರಿ ಕ್ಷೇತ್ರದ ವಿವಿಧೆಡೆ ಜಂಟಿಯಾಗಿ ಪ್ರಚಾರ ನಡೆಸಲಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಕಡಕೊಳ, ಜಯಪುರ, ಇಲವಾಲ ಮತ್ತು ಸಿದ್ದಲಿಂಗಪುರದಲ್ಲಿ ಪ್ರಚಾರ ಸಭೆ ನಡೆಸಲು ಉದ್ದೇಶಿಸಲಾಗಿದೆ. ಕಳೆದ ವರ್ಷ ಎದುರಾಳಿಗಳಾಗಿ ಮತಯಾಚನೆ ಮಾಡಿದ್ದ ಈ ನಾಯಕರು ಇದೀಗ ಜಂಟಿಯಾಗಿ ಪ್ರಚಾರ ನಡೆಸಲಿರುವುದು ಉಭಯ ಪಕ್ಷಗಳ ಕಾರ್ಯಕರ್ತರಲ್ಲಿ ಕುತೂಹಲ ಮೂಡಿಸಿದೆ.

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !