ಸೋಮವಾರ, ಮಾರ್ಚ್ 8, 2021
20 °C
ಬೇಲೂರು ಬಳಿ ಕಾಫಿ ತೋಟದಲ್ಲಿ ಕೆಲಸಕ್ಕಿದ್ದ ತಮಿಳುನಾಡು ಕಾರ್ಮಿಕರು

ಮೈಸೂರು: ಮಗು ಎತ್ತಿಕೊಂಡು ರಾತ್ರಿ ನಡಿಗೆ

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‌ಲಾಕ್‌ಡೌನ್‌ನಿಂದ ತೊಂದರೆಗೆ ಒಳಗಾದ ಕಾರ್ಮಿಕರು, ಹೇಗಾದರೂ ತಮಿಳುನಾಡು ತಲುಪಬೇಕು ಎಂಬ ಮಹಾದಾಸೆಯೊಂದಿಗೆ ಮಗು ಎತ್ತಿಕೊಂಡು ರಾತ್ರಿ ವೇಳೆ ನೂರಾರು ಕಿ.ಮೀ ನಡೆದು ಮೈಸೂರಿಗೆ ಬಂದಿದ್ದಾರೆ.

ಬೇಲೂರು ಬಳಿಯ ಕಾಫಿ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಆರು ಮಹಿಳೆಯರೂ ಸೇರಿದಂತೆ 13 ಮಂದಿ ಆಟೊದಲ್ಲಿ ಹಾಸನಕ್ಕೆ ಬಂದಿದ್ದಾರೆ. ಅಲ್ಲಿಂದ ವಾಹನ ಸಿಗದ ಕಾರಣ 120 ಕಿ.ಮೀ ನಡೆದು ಬಂದಿದ್ದಾರೆ. ಮೈಸೂರಿಗೆ ಬಂದಾಗ ಅವರನ್ನು ತಡೆದ ಪೊಲೀಸರು ಜಿಲ್ಲಾಧಿಕಾರಿ ಕಚೇರಿ ಬಳಿ ಕರೆತಂದಿದ್ದಾರೆ.

‘ನಾಲ್ಕು ತಿಂಗಳ ಹಿಂದೆ ಕೆಲಸಕ್ಕೆ ಬಂದಿದ್ದೆವು. ಊರಿನಲ್ಲಿ ಅಮ್ಮ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ. ನಮಗೂ ಇಲ್ಲಿ ತುಂಬಾ ಕಷ್ಟವಾಗಿದೆ. ದುಡಿದ ಹಣವೆಲ್ಲಾ ಖರ್ಚಾಗಿದೆ. ಹೇಗಾದರೂ ಮಾಡಿ ತಮಿಳುನಾಡು ತಲುಬೇಕಿದೆ’ ಎಂದು ನಾಮಕ್ಕಲ್‌ ಜಿಲ್ಲೆಯ ಚಿಣ್ಣಸ್ವಾಮಿ ‘ಪ್ರಜಾವಾಣಿ’ಗೆ ಜೊತೆ ಸಮಸ್ಯೆ ಹೇಳಿಕೊಂಡರು.

ಸುಧಾ ದಂಪತಿಗೆ ಒಂದೂವರೆ ವರ್ಷದ ಹೆಣ್ಣು ಮಗುವಿದೆ. ವೃದ್ಧರೂ ಈ ಗುಂಪಿನಲ್ಲಿದ್ದಾರೆ. ಜೊತೆಗೆ ಬಟ್ಟೆ, ಪಾತ್ರೆ ಸೇರಿದಂತೆ ಏಳೆಂಟು ಗಂಟುಮೂಟೆಗಳಿವೆ. ಅನುಮತಿ ನೀಡಿದರೆ ತಮ್ಮೂರಿಗೆ ನಡೆದುಕೊಂಡೇ ಹೋಗಲು ಅವರು ಸಿದ್ಧರಿದ್ದಾರೆ.

‘ನಾವು ಹೇಗೊ ನಡೆಯುತ್ತೇವೆ. ಜೊತೆಯಲ್ಲಿ ಮಗುವಿದ್ದ ಕಾರಣ ತುಂಬಾ ಭಯವಾಯಿತು. ನಿದ್ದೆ ಮಾಡುತ್ತಿದ್ದ ಮಗು, ಎಚ್ಚರವಾದಾಗ ಅಳುತಿತ್ತು. ಕೆಲಸವಿಲ್ಲದ ದಿನಗಳನ್ನು ಕಂಡಿದ್ದೇವೆ. ಆದರೆ, ಇಷ್ಟೊಂದು ಕಷ್ಟ ಯಾವತ್ತೂ ಬಂದಿರಲಿಲ್ಲ’ ಎಂದು ಸುಧಾ ಭಾವುಕರಾದರು.

ವಾಸ್ತವ್ಯ ವ್ಯವಸ್ಥೆ: ‘13 ಕಾರ್ಮಿಕರನ್ನು ಹೊಯ್ಸಳ ಕರ್ನಾಟಕ ಸಂಘದಲ್ಲಿ ಇರಿಸಿದ್ದೇವೆ. ಆರೋಗ್ಯ ತಪಾಸಣೆ ನಡೆಸಲಾಗಿದೆ. ಅವರಿಗೆ ಇಲ್ಲಿಯೇ ವಾಸ್ತವ್ಯ, ಊಟೋಪಚಾರ ವ್ಯವಸ್ಥೆ ಕಲ್ಪಿಸಲಾಗುವುದು. ತಮಿಳುನಾಡಿಗೆ ತೆರಳಲು ಪಾಸ್‌ ವ್ಯವಸ್ಥೆ ಆಗುವವರೆಗೇ ಇಲ್ಲಿಯೇ ಇರಿಸಿಕೊಳ್ಳಲಾಗುವುದು’ ಎಂದು ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತ ತಮ್ಮಣ್ಣ ಹೇಳಿದರು.

ಬೆಳಿಗ್ಗೆ 10 ಗಂಟೆಗೆ ಬಂದು ಜಿಲ್ಲಾಧಿಕಾರಿ ಕಚೇರಿ ಎದುರಿನ ಉದ್ಯಾನದಲ್ಲಿ ಮಗು ಮಲಗಿಸಿಕೊಂಡು ಕುಳಿತಿದ್ದ ಇವರಿಗೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌ ಆಹಾರ ಪೊಟ್ಟಣ, ನೀರು ಜೊತೆಗೆ ₹ 10 ಸಾವಿರ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು