ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರ್ವ’ ನಾಟಕ: ಸತ್ಯು, ಅಡ್ಡಂಡ ಕಾರ್ಯಪ್ಪ ವಾಗ್ವಾದ

Last Updated 18 ಮಾರ್ಚ್ 2021, 21:17 IST
ಅಕ್ಷರ ಗಾತ್ರ

ಮೈಸೂರು: ಸಾಹಿತಿ ಎಸ್‌.ಎಲ್‌.ಭೈರಪ್ಪ ಅವರ ಕಾದಂಬರಿ ಆಧಾರಿತ ‘ಪರ್ವ’ ನಾಟಕ ಪ್ರದರ್ಶನ ವಿಷಯ ರಂಗಕರ್ಮಿ,ಚಲನಚಿತ್ರ ನಿರ್ದೇಶಕ ಎಂ.ಎಸ್‌.ಸತ್ಯು ಮತ್ತು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರ ನಡುವೆ ಗುರುವಾರ ವಾಗ್ವಾದಕ್ಕೆ ಕಾರಣವಾಯಿತು.

‘ಅಭಿಯಂತರರು’ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ರಂಗ ಉತ್ಸವ ಉದ್ಘಾಟಿಸಿ ಮಾತನಾಡಿದ ಸತ್ಯು, ‘ಮೈಸೂರಿನವರಿಗೆ ಎಂಟು ಗಂಟೆ ಕುಳಿತು ನೋಡಲು ಬಹಳ ಪುರುಸೊತ್ತಿದೆ ಎಂದು ಕೆಲವರು ಸುದೀರ್ಘ ನಾಟಕ ಮಾಡಿದ್ದಾರೆ. ನಾಟಕದ ನಡುವೆ ಊಟವನ್ನೂ ಹಾಕಿಸ್ತಾರೆ’ ಎಂದು ಟೀಕಿಸಿದರು.

‘ನಾಟಕವು ಅಷ್ಟು ದೀರ್ಘವಾಗಿ ಇರಬೇಕಿಲ್ಲ. ನಾವು ಏನನ್ನು ಹೇಳಬೇಕು ಎಂಬುದನ್ನು ಸೂಕ್ಷ್ಮವಾಗಿ, ಒಂದು ಸೀಮಿತ ಚೌಕಟ್ಟಿನಲ್ಲಿ ಹೇಳಬೇಕು. ಆಗ ಅಷ್ಟೊಂದು ದೀರ್ಘವಾಗಿ ಬೆಳೆಯುವುದಿಲ್ಲ. ನಾಟಕ ಮಾಡಿದ್ದನ್ನು ನಾನು ಪ್ರಶ್ನಿಸುವುದಿಲ್ಲ. ಆದರೆ ಸಮಯದ ಮಿತಿ ಇಟ್ಟು ಕೆಲಸ ಮಾಡಿದರೆ ಅದರಿಂದ ಆಗುವಂತಹ ಪರಿಣಾಮ ಹೆಚ್ಚು. ಸಿಕ್ಕಾಪಟ್ಟೆ ಹಣ ಖರ್ಚು ಮಾಡಿ ನಾಟಕ ಆಡುವುದರಿಂದ ಜನರ ಸಮಯ ಹಾಗೂ ಹಣ ವ್ಯರ್ಥವಾಗುತ್ತದೆ’ ಎಂದು ಹೇಳಿದರು.

ಸತ್ಯು ಅವರ ಹೇಳಿಕೆಗೆ ತಮ್ಮ ಭಾಷಣದಲ್ಲಿ ತಿರುಗೇಟು ನೀಡಿದ ಅಡ್ಡಂಡ ಸಿ.ಕಾರ್ಯಪ್ಪ, ‘ಸತ್ಯು ಅವರು ಪರ್ವದ ಬಗ್ಗೆ ಮಾತನಾಡಿದ್ದಕ್ಕೆ ನನಗೆ ಹೆಮ್ಮೆ ಆಗುತ್ತದೆ. ಪರ್ವ ಅವರನ್ನು ಕಾಡಿದೆ. ಅದು ಕಾಡುತ್ತಲೇ ಇರಬೇಕು’ ಎಂದರು.

‘ಪರ್ವ ನಾಟಕವನ್ನು ಬಿಜೆಪಿಯವರು ಮಾಡಿಲ್ಲ. ಎಸ್‌.ಎಲ್‌.ಭೈರಪ್ಪ ಅವರು 48 ವರ್ಷಗಳ ಹಿಂದೆ ಬರೆದ ಬಹುಚರ್ಚಿತ, ಪ್ರಗತಿಪರ ಕಾದಂಬರಿ ಅದು. ಸತ್ಯು ಅವರು ಅದನ್ನು ಓದಿದ್ದಾರೋ ಗೊತ್ತಿಲ್ಲ’ ಎಂದು ಕುಟುಕಿದರು.

‘ಏಳೂವರೆ ಗಂಟೆಯ ನಾಟಕ ಬೇಕೇ, ಬೇಡವೇ ಎಂಬುದನ್ನು ನಾನು ಅಥವಾ ನೀವು ನಿರ್ಧಾರ ಮಾಡುವುದಲ್ಲ. ಜನರು ನಿರ್ಧರಿಸುತ್ತಾರೆ. ಅಷ್ಟು ಹೊತ್ತು ಕುಳಿತು ನಾಟಕ ನೋಡಲು ಅವರಿಗೆ ಹೇಗೆ ಸಾಧ್ಯವಾಯಿತು ಎಂಬುದರ ಬಗ್ಗೆ ಸಂಶೋಧನೆ ನಡೆಸುವಂತೆ ಸತ್ಯು ಅವರನ್ನು ಕೇಳಿಕೊಳ್ಳುತ್ತೇನೆ. ಏಳೂವರೆ ಗಂಟೆಯ ನಾಟಕ ಪ್ರದರ್ಶನ ಇರುವಾಗ ಊಟ ಬೇಕಾಗುತ್ತದೆ’ ಎಂದರು.

‘ಸುದೀರ್ಘ ನಾಟಕವನ್ನು ನಾವು ಹೊಸದಾಗಿ ತುರುಕಿದ್ದಲ್ಲ. ರಾಮಾಯಣ ದರ್ಶನಂ ನಾಟಕವನ್ನು ಐದೂವರೆ ಗಂಟೆ ಮಾಡಿದ್ದಾರೆ. ಈಗ ಈ ಅಸಹನೆ, ಕ್ರೋಧ, ಚಡಪಡಿಕೆ ಏಕೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT