ಗುರುವಾರ , ನವೆಂಬರ್ 14, 2019
19 °C
ಬೆಂಗಳೂರು–ಮೈಸೂರಿನಲ್ಲಿ ಉಗ್ರರ ಸ್ಲೀಪರ್ ಸೆಲ್‌

ಬಾಂಗ್ಲಾ ನುಸುಳುಕೋರರ ಮೇಲೆ ನಿಗಾ: ಗೃಹಸಚಿವ ಬಸವರಾಜ ಬೊಮ್ಮಾಯಿ

Published:
Updated:

ಮೈಸೂರು: ‘ಬಾಂಗ್ಲಾ ಅಕ್ರಮ ನುಸುಳುಕೋರರು ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಖಚಿತ ಮಾಹಿತಿಯನ್ನು ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ನೀಡಿದ್ದು, ರಾಜ್ಯದ ಕರಾವಳಿಯಲ್ಲಿ ತಮ್ಮ ಚಟುವಟಿಕೆ ಹೆಚ್ಚಿಸಿಕೊಂಡಿದ್ದಾರೆ’ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಶುಕ್ರವಾರ ಇಲ್ಲಿ ತಿಳಿಸಿದರು.

‘ಬೆಂಗಳೂರು, ಮೈಸೂರಿನ ಕೆಲವೆಡೆ ಅಡಗುದಾಣಗಳನ್ನು (ಸ್ಲೀಪರ್ ಸೆಲ್‌) ನಿರ್ಮಿಸಿಕೊಂಡಿದ್ದಾರೆ ಎಂಬ ಮಾಹಿತಿಯೂ ದೊರಕಿದ್ದು, ಸ್ಥಳೀಯ ಪೊಲೀಸರು ನಿಗಾ ವಹಿಸಿದ್ದಾರೆ’ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಮುಂದಿನ ಎರಡೂವರೆ ವರ್ಷದೊಳಗೆ ಹಂತಹಂತವಾಗಿ 16,000 ಪೊಲೀಸ್ ಕಾನ್‌ಸ್ಟೆಬಲ್‌, 1000 ಪಿಎಸ್‌ಐಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಪ್ರಸಕ್ತ ವರ್ಷವೇ 6,000 ಪೊಲೀಸ್ ಕಾನ್‌ಸ್ಟೆಬಲ್ ನೇಮಕಕ್ಕೆ ಚಾಲನೆ ನೀಡಲಾಗುವುದು’ ಎಂದು ತಿಳಿಸಿದರು.

‘ಸೈಬರ್ ಕ್ರೈಂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೀಗ ಜಿಲ್ಲೆಗೊಂದು ಸೈಬರ್ ಕ್ರೈಂ ಪೊಲೀಸ್ ಠಾಣೆಗಳಿವೆ. ಅವಶ್ಯವಿದ್ದೆಡೆ ಇವುಗಳ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಇದರ ಜತೆಯಲ್ಲೇ ಜಿಲ್ಲೆಗೊಂದು ಎಫ್‌ಎಸ್‌ಎಲ್‌ ಲ್ಯಾಬ್‌ ಆರಂಭಿಸುವ ಪ್ರಕ್ರಿಯೆಯೂ ಚಾಲ್ತಿಯಲ್ಲಿದೆ’ ಎಂದು ಬೊಮ್ಮಾಯಿ ಹೇಳಿದರು.

‘ಔರಾದ್ಕರ್ ವರದಿಗೆ ಸಂಬಂಧಿಸಿದ ಕಡತ ಹಣಕಾಸು ಇಲಾಖೆಯಲ್ಲಿದೆ. ಜೈಲರ್ ಸೇರಿದಂತೆ ಇನ್ನಿತರ ಹುದ್ದೆಗಳನ್ನು ಈ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ಕೆಲಸ ನಡೆದಿದೆ. ಮುಖ್ಯಮಂತ್ರಿಯ ಸಮ್ಮತಿ ಸಿಕ್ಕ ತಕ್ಷಣವೇ ವರದಿ ಜಾರಿಗೊಳಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಮಹಾರಾಷ್ಟ್ರಕ್ಕೆ ನೀರು ಕೊಡುವ ವಿಷಯ ಚುನಾವಣೆಗೆ ಸಂಬಂಧಿಸಿದ್ದಲ್ಲ. ಹಲವು ವರ್ಷಗಳಿಂದಲೂ ಮಾತುಕತೆ ನಡೆದಿದೆ. ಕೊಟ್ಟು–ಪಡೆಯುವ ಪ್ರಕ್ರಿಯೆಯಷ್ಟೇ. ಅಲ್ಲಿ ಮುಖ್ಯಮಂತ್ರಿ ಹೋಗಿದ್ದಾಗ ಕೇಳಿದ್ದಕ್ಕಷ್ಟೇ ಪ್ರತಿಕ್ರಿಯಿಸಿದ್ದಾರೆ’ ಎಂದು ಬೊಮ್ಮಾಯಿ ಹೇಳಿದರು.

ಪ್ರತಿಕ್ರಿಯಿಸಿ (+)