ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಗಳತೆ ದೂರದಲ್ಲಿ ನದಿ; ನೀರಿಗಾಗಿ ಪರದಾಟ

ದೀಪದ ಬುಡದಲ್ಲಿ ಕತ್ತಲಿನಂತಹ ಸ್ಥಿತಿಯಲ್ಲಿ ಪರಿಣಾಮಿಪುರದ ಗ್ರಾಮಸ್ಥರು
ಅಕ್ಷರ ಗಾತ್ರ

ತಲಕಾಡು: ‘ದೀಪದ ಬುಡದಲ್ಲಿ ಕತ್ತಲು’ ಎಂಬಂತಹ ಪರಿಸ್ಥಿತಿ ಇಲ್ಲಿನ ಪರಿಣಾಮಿಪುರದ ಗ್ರಾಮಸ್ಥರದ್ದಾಗಿದೆ. ಎರಡೇ ಕಿ.ಮೀ ದೂರದಲ್ಲಿ ಕಾವೇರಿ ನದಿ ಹರಿಯುತ್ತಿದ್ದರೂ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.

ಹೊಳೆಸಾಲು ಪಂಚಾಯ್ತಿ ವ್ಯಾಪ್ತಿಯ ಈ ಗ್ರಾಮದಲ್ಲಿ ಒಟ್ಟು 3 ಕೊಳವೆಬಾವಿಗಳಿವೆ. ಇವುಗಳಲ್ಲಿನ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ರು ದಿನಗಳಿಗೊಮ್ಮೆ ಅರ್ಧ ತಾಸು ಮಾತ್ರ ನೀರು ಬರುತ್ತಿದೆ.‌

ಬರುವ ನೀರು ಸಾಕಾಗದೇ ಗ್ರಾಮಸ್ಥರು ತೋಟಗಳಲ್ಲಿರುವ ಕೊಳವೆಬಾವಿಗಳನ್ನೇ ಆಶ್ರಯಿಸಬೇಕಾಗಿದೆ. 1 ಕಿ.ಮೀ ದೂರದಿಂದ ಮಹಿಳೆಯರು ನೀರನ್ನು ಹೊರಬೇಕಿದೆ. ಹಬ್ಬಗಳ ಸಂದರ್ಭದಲ್ಲಿ ಇವರ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗಿದೆ.

‘ಎರಡು ತಿಂಗಳಿನಿಂದ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಗ್ರಾಮ ಪಂಚಾಯ್ತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು’ ಎಂದು ಗ್ರಾಮದ ಚಿನ್ನಮ್ಮ, ಗೌರಮ್ಮ, ಮಾದೇವಮ್ಮ, ಬಸವಣ್ಣ, ಮಹದೇವಸ್ವಾಮಿ, ನಂಜುಂಡಸ್ವಾಮಿ ಹಾಗೂ ಮೊದಲಾದವರು ಎಚ್ಚರಿಕೆ ನೀಡಿದ್ದಾರೆ.

‘ನೀರಿನ ಸಮಸ್ಯೆಯನ್ನು ಪಂಚಾಯ್ತಿ ಗಮನಕ್ಕೆ ತರಲಾಗಿದೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ. ತುರ್ತಾಗಿ ಒಂದು ಕೊಳವೆಬಾವಿಯನ್ನು ಕೊರೆಯಿಸಲೇಬೇಕಾದ ಸ್ಥಿತಿ ಇದೆ. ಇನ್ನಾದರೂ ಸಮಸ್ಯೆ ಬಗೆಹರಿಸಲು ತಾಲ್ಲೂಕು ಆಡಳಿತ ಮುಂದಾಗಬೇಕು’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ದೊಡ್ಡಮಾದಯ್ಯ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ತಿ.ನರಸೀಪುರ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಡಾ.ನಂಜೇಶ್, ‘ಹೊಳೆಸಾಲು ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವ ಇಲ್ಲ. ಪರಿಣಾಮಿಪುರದಲ್ಲಿ ಉದ್ಭವಿಸಿರುವ ನೀರಿನ ಸಮಸ್ಯೆ ಕುರಿತು ಪರಿಶೀಲಿಸಲಾಗುವುದು. ಇದುವರೆಗೂ ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT