ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಾಶಯದಿಂದ ನದಿಗೆ ನೀರು: ಸೇತುವೆ ಮುಳುಗಡೆ

ಅಪಾಯವನ್ನೂ ಲೆಕ್ಕಿಸದೆ ಸೇತುವೆ ದಾಟಿದ ರೈತರು, ಸಾರ್ವಜನಿಕರು; ಮೇ 18ರಂದೇ ಭರ್ತಿಯಾಗಿದ್ದ ಜಲಾಶಯ
Last Updated 29 ಆಗಸ್ಟ್ 2022, 5:56 IST
ಅಕ್ಷರ ಗಾತ್ರ

ಹಂಪಾಪುರ: ಸತತ ಮಳೆಯಿಂದ ಎಚ್.ಡಿ. ಕೋಟೆ ತಾಲ್ಲೂಕಿನ ಹೆಬ್ಬಳ್ಳ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಜಲಾಶಯದಿಂದ ನದಿಗೆ ಹೆಚ್ಚಿನ ನೀರನ್ನು ಹರಿಸಲಾಗುತ್ತಿದೆ. ಇದರಿಂದ ಎಚ್.ಡಿ.ಕೋಟೆಗೆ ಸಂಪರ್ಕ ಕಲ್ಪಿಸುವ ಸೇತುವೆ ಭಾನುವಾರ ಮುಳುಗಡೆಯಾಗಿತ್ತು.

ಬೆಳಗನಹಳ್ಳಿ ಮತ್ತು ಹೊಸತೊರ ವಳ್ಳಿ ಗ್ರಾಮಸ್ಥರು ಎಚ್.ಡಿ.ಕೋಟೆಗೆ ತೆರಳಲು ಹರಸಾಹಸಪಟ್ಟರು. ಈವರ್ಷ 2ನೇ ಬಾರಿ ಹೆಬ್ಬಳ್ಳ ಸೇತುವೆ ಮುಳುಗಡೆಯಾಗಿದೆ.

‌‘ಪ್ರಯಾಣಿಕರಿಗೆ ಈ ಮಾರ್ಗದಲ್ಲಿ ಸಂಚರಿಸಲು ತೊಂದರೆ ಉಂಟಾ ಗುತ್ತಿದ್ದು, ಆದಷ್ಟು ಬೇಗ ಎತ್ತರವಾದ ಸೇತುವೆ ನಿರ್ಮಿಸಬೇಕು’ ಎಂದು ಬೆಳಗನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಅಪಾಯ ಲೆಕ್ಕಿಸದೇ ಪ್ರಯಾಣ: ಸೇತುವೆ ಮೇಲೆ 4ರಿಂದ 5 ಅಡಿ ನೀರು ಹರಿಯುತ್ತಿದ್ದರೂ ರೈತರು ಮತ್ತು ವಾಹನ ಸವಾರರು ಇದನ್ನು ಲೆಕ್ಕಿಸದೇ ಸೇತುವೆ ಮೇಲೆ ತೆರಳುತ್ತಿದ್ದರು. ದ್ವಿಚಕ್ರ ಸವಾರರು ಸೇತುವೆಯ ಬದಿಯಿಂದ ಮತ್ತೊಂದು ಬದಿಗೆ ಮತ್ತು ಆ ಬದಿಯಿಂದ ಈ ಬದಿಗೆ ಓಡಾಡುತ್ತಾ ಚೆಲ್ಲಾಟವಾಡುತ್ತಿದ್ದರು.

ಜಾನುವಾರು ಸಂತೆಗೆ ಸೇತುವೆ ಹಾದು ಹೋದ ರೈತರು: ಪ್ರತಿ ಭಾನುವಾರ ದನಗಳ ಸಂತೆಯನ್ನು ಎಚ್.ಡಿ. ಕೋಟೆ ತಾಲ್ಲೂಕಿನ ಹ್ಯಾಂಡ್ ಪೋಸ್ಟ್‌ನಲ್ಲಿ ನಡೆಸಲಾಗುತ್ತದೆ. ಅದರಂತೆ ಭಾನುವಾರ ಬೆಳಿಗ್ಗೆಯೇ ಸೇತುವೆ ಮೇಲೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿದ್ದರೂ ಅದನ್ನು ಲೆಕ್ಕಿಸದೆ ಬೆಳಗನಹಳ್ಳಿ ಮತ್ತು ಹೊಸತೊರವಳ್ಳಿ ರೈತರು ಜಾನುವಾರುಗಳ ಜೊತೆ ತುಂಬಿ ಹರಿಯುತ್ತಿರುವ ಸೇತುವೆಯನ್ನು ದಾಟಿ ಸಂತೆಗೆ ತೆರಳಿದರು. ಸಂಜೆಯಾಗುತ್ತಿದ್ದಂತೆ ಸೇತುವೆ ಮೇಲಿನ ಹರಿವು ಕಡಿಮೆಯಾಗಿದ್ದು, ಸಹಜ ಸ್ಥಿತಿಗೆ ಮರಳಿದೆ.

ಹೆಬ್ಬಳ್ಳ ಜಲಾಶಯವು ಮೇ 18ರಂದೇ ಭರ್ತಿಯಾಗಿತ್ತು. ಅಂದು ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿದ್ದರಿಂದ ಉಳಿದಿದ್ದ 6 ಅಡಿ ನೀರು ತುಂಬಿತ್ತು. ಅದೇ ದಿನ ಸೇತುವೆ ಮೇಲೆ ನೀರು ಬಂದು 2 ದಿನಗಳವರೆಗೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಅಂದಿನಿಂದ ಇಂದಿನವರೆಗೂ ಜಲಾಶಯದಿಂದ ನೀರು ಹರಿಯುತ್ತಲೇ ಇದ್ದರೂ ನೀರಿನ ಪ್ರಮಾಣ ಕಡಿಮೆ ಇತ್ತು. ಇದರಿಂದ ಸೇತುವೆ ಮೇಲೆ ಬಂದಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT