ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನಕಲ್‌ನಲ್ಲಿ ತಾರಕಕ್ಕೇರಿದ ನೀರಿನ ಸಮಸ್ಯೆ

ವಾರಕ್ಕೊಮ್ಮೆ ಸ್ನಾನ, ಹಲವೆಡೆ ನೀರಿಗಾಗಿ ಹಾಹಾಕಾರ
Last Updated 25 ಏಪ್ರಿಲ್ 2019, 20:29 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲಾ ಕೇಂದ್ರಕ್ಕೆ ಕೇವಲ 8 ಕಿ.ಮೀ ದೂರದಲ್ಲಿರುವ ಹಿನಕಲ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ. ವಾರಕ್ಕೊಮ್ಮೆ ಸ್ನಾನ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇರುವ 28 ಕೊಳವೆಬಾವಿಗಳ ಪೈಕಿ 5 ಮಾತ್ರ ಸುಸ್ಥಿತಿಯಲ್ಲಿವೆ. ಇನ್ನುಳಿದವೆಲ್ಲ ಬರಿದಾಗಿದೆ. ಹೊಸದಾಗಿ ಕೊರೆಸಿದ 7 ಕೊಳವೆಬಾವಿಗಳ ಪೈಕಿ ಕೇವಲ 3ರಲ್ಲಿ ಮಾತ್ರ ಅಲ್ಪಸ್ವಲ್ಪ ನೀರು ಬಂದಿದೆ. ಉಳಿದವೆಲ್ಲ ವಿಫಲವಾಗಿವೆ.

ಎರಡು ದಿನಕ್ಕೆ ಒಂದು ಗಂಟೆಯಷ್ಟು ಕಾಲ ಕೆಲವೆಡೆ ನೀರು ಬರುತ್ತಿದೆ. ಆದರೆ, ಇದು ಏನೇನೂ ಸಾಕಾಗುತ್ತಿಲ್ಲ. 45 ಸಾವಿರ ಜನಸಂಖ್ಯೆ ಇರುವ ಇಲ್ಲಿ ಇದು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಎತ್ತರದ ಪ್ರದೇಶಗಳಲ್ಲಿರುವ ಮನೆಗಳಿಗೆ ಈ ನೀರು ಸಹ ಸರಬರಾಜಾಗುತ್ತಿಲ್ಲ.

ಜನರ ಕಷ್ಟಗಳಿಗೆ ತನ್ನ ವ್ಯಾಪ್ತಿಯಲ್ಲೇ ಸ್ಪಂದಿಸಿರುವ ಹಿನಕಲ್ ಗ್ರಾಮ ಪಂಚಾಯಿತಿ 4 ಟ್ಯಾಂಕರ್‌ಗಳ ಮೂಲಕ ನೀರನ್ನು ಸರಬರಾಜು ಮಾಡುತ್ತಿದೆ. ದಿನವೊಂದಕ್ಕೆ ಒಂದು ಟ್ಯಾಂಕರ್‌ನಿಂದ 6ರಿಂದ 8 ಲೋಡ್‌ನಷ್ಟು ನೀರನ್ನು ನೀಡಲಾಗುತ್ತಿದೆ. ಇಷ್ಟಾದರೂ ಸಮಸ್ಯೆ ಸ್ವಲ್ಪವೂ ನಿವಾರಣೆ ಆಗಿಲ್ಲ.

ಒಂದೊಂದು ಮನೆಯ ಮುಂದೆ ನಿತ್ಯ ಕನಿಷ್ಠ ಎಂದರೂ 2ರಿಂದ 3 ನೀರಿನ ಪ್ಲಾಸ್ಟಿಕ್‌ ತೊಟ್ಟಿಗಳು ಇವೆ. ಟ್ಯಾಂಕರ್‌ ಬರುತ್ತಿದ್ದಂತೆ ಮನೆಯಲ್ಲಿರುವ ಪಾತ್ರೆಗಳಿಗೆಲ್ಲ ನೀರನ್ನು ತುಂಬಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.

ನೀರನ್ನು ಮಧ್ಯರಾತ್ರಿ ಅಥವಾ ನಸುಕಿನ ವೇಳೆ ಬಿಡುವುದರಿಂದ ಮಹಿಳೆಯರು ನಿದ್ದೆ ಇಲ್ಲದೇ ಹೈರಣಾಗುವಂತೆ ಆಗಿದೆ. ನೀರಿನ ಸಮಸ್ಯೆಯಿಂದ ನಾಗರಿಕರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಜನಪ್ರತಿನಿಧಿಗಳು ನಿತ್ಯ ಹಗಲು ಇರುಳೆನ್ನದೇ ನೀರುಗಂಟಿಗಳ ಜತೆ ಸುತ್ತಾಡುತ್ತಿದ್ದಾರೆ. ಎಲ್ಲೆಲ್ಲಿ ನೀರು ಬಂದಿಲ್ಲ ಎಂಬ ದೂರು ಕರೆ ಬರುತ್ತದೋ ಆ ಭಾಗಕ್ಕೆ ನೀರನ್ನು ಬಿಡಿಸುವ ಕಾಯಕದಲ್ಲಿ ಮಗ್ನರಾಗಿದ್ದಾರೆ. ಬಹಳಷ್ಟು ಕಡೆ ಸಾರ್ವಜನಿಕರು ‘ಓಟು ಹಾಕಿರುವುದು ಏತಕ್ಕೆ, ನೀರು ಕೊಡದೇ ಇದ್ದರೆ ಹೇಗೆ’ ಎಂದು ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.‌

ಮಲತಾಯಿ ಧೋರಣೆ ನಿಲ್ಲಿಸಲು ಆಗ್ರಹ

‘ನಮ್ಮನ್ನೂ ನಗರದ ಇತರ ಬಡಾವಣೆಗಳ ಜನರಂತೆ ಕಾಣಿರಿ’ ಎಂದು ಇಲ್ಲಿನ ನಿವಾಸಿಗಳು ಒತ್ತಾಯಿಸುತ್ತಾರೆ.

ಕೂಗಳತೆ ದೂರದಲ್ಲಿರುವ ಅಕ್ಕಪಕ್ಕದ ಬಡಾವಣೆಗಳಿಗೆ ನದಿಮೂಲದಿಂದ ನೀರು ಸರಬರಾಜಾಗುತ್ತಿದೆ. ಆ ವ್ಯವಸ್ಥೆ ಸಂಪೂರ್ಣವಾಗಿ ಇಲ್ಲಿ ಜಾರಿಯಾಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಸದ್ಯ, 1.5 ಲಕ್ಷ ಲೀಟರ್‌ನಷ್ಟು ನೀರು ಪಂಚಾಯಿತಿಗೆ ಬರಬೇಕಿತ್ತು. ಆದರೆ, ಬರುತ್ತಿರುವುದು ಕೇವಲ 70 ಸಾವಿರ ಲೀಟರ್ ಮಾತ್ರ. ನಿಗದಿತ ಪ್ರಮಾಣದಷ್ಟು ನೀರು ಬಂದರೆ ಸಮಸ್ಯೆ ಸ್ವಲ್ಪವಾದರೂ ನಿವಾರಣೆಯಾಗುತ್ತದೆ ಎಂಬುದು ಜನಪ್ರತಿನಿಧಿಗಳ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT