ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿಗೆ ಕದ್ದುಮುಚ್ಚಿ ನೀರು: ಆರೋಪ

ಕಬಿನಿ ಜಲಾಶಯ: ತಗ್ಗುತ್ತಿದೆ ನೀರಿನ ಪ್ರಮಾಣ
Last Updated 27 ಜೂನ್ 2019, 20:12 IST
ಅಕ್ಷರ ಗಾತ್ರ

ಮೈಸೂರು: ‌ರಾಜ್ಯದಲ್ಲಿ ಮೊದಲು ಭರ್ತಿಯಾಗಬೇಕಿದ್ದ ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ತಗ್ಗುತ್ತಿದೆ. ಈ ಪರಿಸ್ಥಿತಿಯಲ್ಲೂ ಅಧಿಕಾರಿಗಳು ತಮಿಳುನಾಡಿಗೆ ಕದ್ದುಮುಚ್ಚಿ ನೀರು ಬಿಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಎಚ್‌.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಈ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ಒಳಹರಿವಿಗೆ ಪ್ರಮುಖ ಮೂಲವಾಗಿರುವ ಕೇರಳದ ವೈನಾಡು ಭಾಗ ಹಾಗೂ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಸಮರ್ಪಕ ಮಳೆಯಾಗಿಲ್ಲದಿರು
ವುದು ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಕಬಿನಿ ತುಂಬದಿದ್ದರೆ ಮೈಸೂರು ಭಾಗದಲ್ಲಿ ಕುಡಿಯುವ ನೀರಿಗೆ ಹಾಗೂ ಕೃಷಿಗೆ ಸಮಸ್ಯೆ ಉಂಟಾಗಲಿದೆ.

ಜಲಾಶಯದಲ್ಲಿ ಪ್ರಸ್ತುತ 2,257 ಅಡಿ ಮಾತ್ರ ನೀರಿದೆ. ಗರಿಷ್ಠ ಮಟ್ಟ 2,284 ಅಡಿಯಾಗಿದ್ದು, ಪ್ರತಿ ವರ್ಷ ಜೂನ್ ತಿಂಗಳಲ್ಲಿ ಈ ಜಲಾಶಯ ತುಂಬುತ್ತಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 2,281 ಅಡಿ ನೀರು ಇತ್ತು.

‘ತಮಿಳುನಾಡಿಗೆ ಹಾಗೂ ವಿದ್ಯುತ್ ಉತ್ಪಾದನಾ ಘಟಕಕ್ಕೆ ನೀರು ಹರಿಸಿ ಹಗಲು ದರೋಡೆ ಮಾಡುತ್ತಿದ್ದಾರೆ. ಆದರೆ, ಕಾಲುವೆಗಳಿಗೆ, ಕೆರೆ ಕಟ್ಟೆಗಳಿಗೂ ನೀರು ಹರಿಸುತ್ತಿಲ್ಲ. ಹೀಗಾಗಿ, ಬೆಳೆಗೆ ನೀರಿಲ್ಲದಂತಾಗಿದೆ. ಅಧಿಕಾರಿಗಳನ್ನು ಕೇಳಿದರೆ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದು ಹೇಳುತ್ತಾರೆ. ಜನಪ್ರತಿನಿಧಿಗಳು ಕಣ್ಣುಮುಚ್ಚಿಕೊಂಡಿದ್ದಾರೆ’ ಎಂದು ಸ್ಥಳೀಯ ರೈತರು ಆರೋಪಿಸಿದ್ದಾರೆ.ಈ ಆರೋಪವನ್ನು ಅಧಿಕಾರಿಗಳು ಅಲ್ಲಗಳೆದಿದ್ದಾರೆ.

‘ಈಗಾಗಲೇ ಒಂದು ಬೆಳೆಗೆ ನೀರು ಹರಿಸಲಾಗಿದೆ. ಸದ್ಯ ಜಲಾಶಯದಿಂದ ಕೇವಲ 600 ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದೆ. ಆದರೆ, ತಮಿಳುನಾಡಿಗೆ ನೀರು ಹರಿಸುತ್ತಿಲ್ಲ’ ಎಂದು ಕಾವೇರಿ ನೀರಾವರಿ ನಿಗಮದ ಮೂಲಗಳು ತಿಳಿಸಿವೆ.

ಕಬಿನಿ ಜಲಾಶಯದ ನೀರಿನ ಒಳಹರಿವು ಹಾಗೂ ಹೊರಹರಿವಿನ ಮಾಹಿತಿಯನ್ನು ಡಿಜಿಟಲೀಕರಣ ಮಾಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆಂತರಿಕ ಸಮಿತಿಯು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಸಮಿತಿ ಸದಸ್ಯರು ಈಚೆಗೆಕಬಿನಿ ಜಲಾಶಯಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದ್ದರು. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಜಲಾಶಯದ ನೀರಿನ ಗರಿಷ್ಠ ಮಟ್ಟ, ಪ್ರಸ್ತುತ ನೀರಿನ ಸಂಗ್ರಹ ಕುರಿತು ಮಾಹಿತಿ ಸಂಗ್ರಹಿಸಿದ್ದರು. ಆ ಸಮಯದಲ್ಲಿಯೂ ಕೃಷಿಗೆ ನೀರು ಹರಿಸುವಂತೆ ರೈತರು ಆಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT