ಶನಿವಾರ, ಜೂನ್ 25, 2022
21 °C
ಮುನ್ನೆಚ್ಚರಿಕೆ ವಹಿಸಲು ಆಗ್ರಹ

ಬೇಸಿಗೆಗೂ ಮುನ್ನವೇ ಹಲವೆಡೆ ಜನರ ಪರದಾಟ; ಮೈಸೂರಿನಲ್ಲಿ ಮುಗಿಯದ ನೀರಿನ ಬವಣೆ

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ದೀಪದ ಬುಡದಲ್ಲಿ ಕತ್ತಲು ಎಂಬಂತೆ ಕಾವೇರಿ ಮತ್ತು ಕಪಿಲಾ ಜಲಾಶಯಗಳು ಕೂಗಳತೆ ದೂರದಲ್ಲಿದ್ದರೂ ಸಾಂಸ್ಕೃತಿಕ ನಗರಿಗೆ ನೀರಿನ ಬವಣೆ ತಪ್ಪಿಲ್ಲ. ಇದಕ್ಕಾಗಿಯೇ ಹಲವು ಯೋಜನೆಗಳನ್ನು ಜಾರಿಗೊಳಿಸಿದರೂ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.

ಬೇಸಿಗೆ ಇನ್ನೂ ಕಾಲಿಡುವುದಕ್ಕೂ ಮುನ್ನವೇ ನಗರದ ಹಲವು ಭಾಗಗಳಲ್ಲಿ ನೀರಿನ ಬವಣೆ ಆರಂಭವಾಗಿದೆ. ಬೇಸಿಗೆಗೆ ನೀರಿನ ಸಮಸ್ಯೆ ಉಲ್ಬಣವಾಗದಂತೆ ತಡೆಯಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಅಧಿಕಾರಿಗಳು, ಪಾಲಿಕೆ ಸದಸ್ಯರು ನೀರಿನ ಸಮಸ್ಯೆ ಇಲ್ಲ ಎಂದೇ ಹೇಳುತ್ತಾರೆ. ಆದರೆ, ಸಮಗ್ರವಾಗಿ ನೋಡಿದರೆ ನೀರಿನ ಸಮಸ್ಯೆ ಕಾಡುತ್ತಿರುವುದು ಗೊತ್ತಾಗುತ್ತದೆ. ಬಹಳಷ್ಟು ಭಾಗಗಳಲ್ಲಿ ಸಮಸ್ಯೆಗೆ ಜನರು ಹೊಂದಿಕೊಂಡಿರುವುದು ಕಂಡು ಬರುತ್ತಿದೆ.

ಮೈಸೂರಿನ ಹೊರವಲಯ ಹೊರತುಪಡಿಸಿ ನಗರದ ಒಟ್ಟು ನೀರಿನ ಬೇಡಿಕೆ ನಿತ್ಯ 240 ಎಂಎಲ್‌ಡಿ. ಆದರೆ, ಈಗ ನೀಡುತ್ತಿರುವುದು 200 ಎಂಎಲ್‌ಡಿ ಮಾತ್ರ ಎಂದು ವಾಣಿವಿಲಾಸ ನೀರು ಸರಬರಾಜು ಕೇಂದ್ರದ ಅಧಿಕಾರಿಗಳು ಹೇಳುತ್ತಾರೆ.

ಹಿನಕಲ್‌ಗೂ ನೀರಿನ ಸಮಸ್ಯೆಗೂ ಎಂದೂ ಮುಗಿಯದ ನಂಟು. ಏನೇ ಯೋಜನೆಗಳನ್ನು ಜಾರಿಗೊಳಿಸಿದರೂ ಇಲ್ಲಿಗೆ ಸಾಕಾಗುವಷ್ಟು ನೀರು ಪೂರೈಕೆಯಾಗುತ್ತಿಲ್ಲ. ಈಗ ನನ್ನೇಶ್ವರ ದೇವಸ್ಥಾನದ ಆಸುಪಾಸು, ಹುಂಡಿಬೀದಿ, ಲಿಂಗಾಯತರ ಬೀದಿ, ತಮ್ಮಡಗೇರಿ, ಹೊಸಬೀದಿ, ನನ್ನೇಶ್ವರ ಬಡಾವಣೆ, ಮಹಾಲಕ್ಷ್ಮೀ ಬಡಾವಣೆಗಳಲ್ಲಿ ನೀರು ಮೂರು ದಿನಗಳಿಗೆ ಒಮ್ಮೆ ಬರುತ್ತಿದೆ ಎಂದು ನಿವಾಸಿಗಳು ದೂರುತ್ತಾರೆ.

ಜನತಾನಗರದ ಹಲವು ಭಾಗಗಳಿಗೆ ದಿನಬಿಟ್ಟು ನೀರು ಬರುತ್ತಿದೆ. ಕಲ್ಯಾಣಗಿರಿ, ಭಾರತ್‌ನಗರ, ಆರ್‌.ಟಿ.ನಗರ, ಬೆಳವಾಡಿ, ಎಸ್‌.ಎಸ್‌.ನಗರ, ವಿನಾಯಕ ಎನ್‌ಕ್ಲೇವ್‌, ಶಕ್ತಿನಗರದ ಕೆಲವು ಭಾಗಗಳಲ್ಲಿಯೂ ನೀರಿನ ಪೂರೈಕೆ ಅಸಮರ್ಪಕವಾಗಿದೆ.

ಗೌರಿಶಂಕರ ನಗರದ ಎತ್ತರದ ಪ್ರದೇಶಗಳಿಗೂ ನೀರು ಸರಿಯಾಗಿ ತಲುಪುತ್ತಿಲ್ಲ. ಯರಗನಹಳ್ಳಿ ಸೇರಿದಂತೆ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆ ಇದೆ.

ಚಾತಕ ಪಕ್ಷಿಗಳಂತೆ ಕಾಯಬೇಕಿದೆ: ದಿನದ 24 ಗಂಟೆ ನೀರು ಕೊಡುತ್ತೇವೆ ಎಂದು ಜಸ್ಕೋ ಕಂಪನಿ ಬಂದು ನೀರಿನ ಸರಬರಾಜಿನ ಹೊಣೆ ಹೊತ್ತು ಹೊರಟು ಹೋಯಿತು. ನೀರಿಗಾಗಿ ಚಾತಕ ಪಕ್ಷಿಗಳಂತೆ ಕಾಯಬೇಕಾದ ಸ್ಥಿತಿ ಇನ್ನೂ ಜನರಿಂದ ದೂರವಾಗಿಲ್ಲ. ಹಲವು ಭಾಗಗಳಲ್ಲಿ ನೀರು ಪೂರೈಕೆಗೆ ಸೂಕ್ತ ಸಮಯವನ್ನೂ ನಿಗದಿಪಡಿಸಿಲ್ಲ. ಯಾವಾಗ ಬೇಕಾದರೂ ನೀರು ಬಂದು ಬಿಡುತ್ತದೆ. ಇಲ್ಲದೆ ಹೋದರೆ ಎರಡು ದಿನಗಳು ಕಳೆದರೂ ನೀರು ಬರುವುದಿಲ್ಲ. ಇದರಿಂದ ನಿವಾಸಿಗಳು ಚಾತಕ ಪಕ್ಷಿಗಳಂತೆ ನೀರಿಗಾಗಿ ಕಾಯಬೇಕಿದೆ.

ಆರ್‌.ಟಿ.ನಗರಕ್ಕೆ ಟ್ಯಾಂಕರ್‌ ನೀರು: ಆರ್‌.ಟಿ.ನಗರ ಬಡಾವಣೆಗೆ ಸದ್ಯ ಒಂದು ತಿಂಗಳಿಂದ ಉಚಿತವಾಗಿ ಟ್ಯಾಂಕರ್‌ನಲ್ಲಿ ನೀರು ಪೂರೈಸಲಾಗುತ್ತಿದೆ. ಒಂದು ಮನೆಗೆ ಒಂದು ವಾರಕ್ಕೆ ಒಂದು ಟ್ಯಾಂಕರ್‌ನಂತೆ ನೀರು ಪೂರೈಕೆಯಾಗುತ್ತಿರುವುದು ನಿವಾಸಿಗಳಲ್ಲಿ ತುಸು ನೆಮ್ಮದಿ ತರಿಸಿದೆ. ಇದಕ್ಕೂ ಮುನ್ನ ನಿವಾಸಿಗಳೇ ಹಣ ಪಾವತಿಸಿ ನೀರನ್ನು ಟ್ಯಾಂಕರ್‌ಗಳಲ್ಲಿ ಪಡೆಯಬೇಕಿತ್ತು. ಇಲ್ಲಿ ಹಾಕಲಾಗಿರುವ ಪೈಪ್‌ಲೈನ್‌ನಲ್ಲಿ ನೀರು
ಯಾವಾಗ ಹರಿಯುತ್ತದೋ ಎಂಬ ನಿರೀಕ್ಷೆಯಲ್ಲಿ ನಿವಾಸಿಗಳು ಕಾಯುತ್ತಿದ್ದಾರೆ.

ಹಲವೆಡೆ ನಿವಾಸಿಗಳೇ ಸೇರಿ ಕೊಳವೆಬಾವಿ ಕೊರೆಸಿದರು!

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆಗೊಂಡು ಪಾಲಿಕೆಯ ಸುಪರ್ದಿಗೆ ಬಾರದ ಅನೇಕ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗದ ಕಾರಣ ಬೆಳವಾಡಿ ಆಸುಪಾಸಿನ ಅನೇಕ ಬಡಾವಣೆಗಳ ಜನರು ತಾವೇ ಸೇರಿ ಹಣ ಹಾಕಿ ಕೊಳವೆಬಾವಿ ಕೊರೆಸಿಕೊಂಡು ನೀರು ಪಡೆದುಕೊಳ್ಳುತ್ತಿದ್ದಾರೆ. ಕನಿಷ್ಠ 10 ಮಂದಿ ಸೇರಿ ಒಂದು ಕೊಳವೆಬಾವಿ ಕೊರೆಸಿರುವುದು ಈ ಭಾಗದಲ್ಲಿ ಕಂಡು ಬರುತ್ತದೆ.

ಕೊಳವೆಬಾವಿಯಲ್ಲಿ ಫ್ಲೋರೈಡ್‌ ನೀರು!

ನಗರದಲ್ಲಿ ನಿತ್ಯ 38 ಎಂಎಲ್‌ಡಿಯಷ್ಟು ನೀರು ಕೊಳವೆಬಾವಿಗಳಿಂದ ಪೂರೈಕೆಯಾಗುತ್ತಿದೆ. ಇದರಲ್ಲಿ ಫ್ಲೋರೈಡ್‌ಯುಕ್ತ ಹಾಗೂ ಟಿಡಿಎಸ್‌ಯುಕ್ತ ನೀರು ಹೊರಬರುತ್ತಿದೆ ಎಂದು ನಿವಾಸಿಗಳು ದೂರುತ್ತಾರೆ.

ಮುಖ್ಯವಾಗಿ, ಪೊಲೀಸ್ ಲೇಔಟ್‌ ಹಾಗೂ ವಿಜಯನಗರದ 4ನೇ ಹಂತದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಆರೋಗ್ಯದ ಸಮಸ್ಯೆ ಒಂದು ಕಡೆಯಾದರೆ, ನಿವಾಸಿಗಳು ತಮ್ಮ ಮನೆಗೆ ಹಾಕಿಸಿಕೊಂಡಿರುವ ಸೋಲಾರ್‌ ಉಪಕರಣಗಳನ್ನು ಇದರಿಂದ ಪದೇ ಪದೇ ದುರಸ್ತಿ ಮಾಡಬೇಕಿದೆ. ಇದಕ್ಕೆ ಹಣ ಪೋಲಾಗುತ್ತಿದೆ ಎಂದು ಹೇಳುತ್ತಾರೆ.

ಈ ಕುರಿತು ಪ್ರತಿಕ್ರಿಯಿಸಿದ ವಿಜಯನಗರದ 4ನೇ ಹಂತದ ಗೃಹಿಣಿ ಅಶ್ವಿನಿ, ‘ಮನೆಯ ಸೋಲಾರ್‌ ಉಪಕರಣದಲ್ಲಿ ಫ್ಲೋರೈಡ್‌ ಕಟ್ಟಿಕೊಂಡು ಮೂರುವರೆ ಸಾವಿರ ವ್ಯಯಿಸಿ ದುರಸ್ತಿ ಮಾಡಲಾಗಿದೆ. ಇಲ್ಲಿಗೆ ಸಂಪೂರ್ಣವಾಗಿ ನದಿ ನೀರು ಯಾವ ಕಾಲಕ್ಕೆ ಬರುತ್ತದೋ ಗೊತ್ತಿಲ್ಲ’ ಎಂದು ತಿಳಿಸಿದರು.

ಆಮೆಗತಿಯಲ್ಲೇ ಇರುವ ಹಳೆಉಂಡವಾಡಿ ಯೋಜನೆ

ಕಾವೇರಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ಹಳೆಉಂಡವಾಡಿ ಯೋಜನೆ ಆಮೆಗತಿಯಲ್ಲೇ ಸಾಗುತ್ತಿದೆ. ವರ್ಷಕ್ಕೆ 2.85 ಟಿಎಂಸಿ ಅಡಿ ನೀರನ್ನು ಸರಬರಾಜು ಮಾಡುವ ಯೋಜನೆ ಇದಾಗಿದ್ದು ಒಟ್ಟು ಮೊತ್ತ ₹ 545 ಕೋಟಿ. ಇದಕ್ಕೆ 122 ಎಕರೆ ಭೂಮಿಯ ಅಗತ್ಯ ಇದೆ. ಈ ಯೋಜನೆಯ ಮೊಳಕೆಯೊಡೆದು 7 ವರ್ಷಗಳು ಕಳೆದರೂ ಇನ್ನೂ ಪೂರ್ಣಪ್ರಮಾಣದಲ್ಲಿ ಜಾರಿಯಾಗಿಲ್ಲ. ಒಂದು ವೇಳೆ ಇದು ಪೂರ್ಣಗೊಂಡರೆ ನಗರದ ನೀರಿನ ಬವಣೆ ತಪ್ಪುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಗಗನ ಕುಸುಮ ಎನಿಸಿದ 24x7 ಕುಡಿಯುವ ನೀರು ಪೂರೈಕೆ

ಮೈಸೂರು ನಗರದ ಜನತೆಗೆ 24x7 ಕುಡಿಯುವ ನೀರು ಪೂರೈಕೆ ಎನ್ನುವುದು ಗಗನ ಕುಸಮವಾಗಿದೆ. ಇದಕ್ಕೆಂದೇ ರೂಪಿಸಲಾದ ಹಲವು ಯೋಜನೆಗಳು ಹಳ್ಳ ಹಿಡಿದಿದ್ದರೆ, ಹೊಸ ಯೋಜನೆಗಳು ಕಳೆದ ಹಲವು ವರ್ಷಗಳಿಂದ ಕಾಗದದ ಮೇಲಷ್ಟೆ ಉಳಿದಿದೆ.

ಕುಡಿಯುವ ನೀರನ್ನು 24x7 ಸರಬರಾಜು ಮಾಡುವ ಹೊಣೆಯನ್ನು ‘ಜಸ್ಕೊ’ ಕಂಪನಿಗೆ 2009ರಲ್ಲೇ ವಹಿಸಲಾಗಿತ್ತು. 1.20 ಲಕ್ಷ ಮನೆಗಳಿಗೆ 24x7 ನೀರು ಸರಬರಾಜು ಮಾಡುವ ಗುರಿ ನೀಡಲಾಗಿತ್ತು. ಆದರೆ, ಈ ನೀರಿನ ಭಾಗ್ಯ ಕಂಡಿದ್ದು ಮಾತ್ರ  14,430 ಮನೆಗಳು ಮಾತ್ರ. ಇದರ ಒಟ್ಟು ₹ 161.89 ಕೋಟಿ ಮೊತ್ತಕ್ಕೆ ಟೆಂಡರ್ ನೀಡಲಾಗಿತ್ತು. 2014ರ ಡಿಸೆಂಬರ್ ಅಂತ್ಯಕ್ಕೆ ₹ 90.81 ಕೋಟಿಯಷ್ಟು ಹಣವನ್ನು ಕಂಪನಿಗೆ ನೀಡಲಾಗಿತ್ತು. ನಂತರ ಗುತ್ತಿಗೆಯನ್ನು ವಾಪಸ್ ಪಡೆಯಲಾಯಿತು.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು