ತಾಪಮಾನ ಹೆಚ್ಚಳ; ನೀರಿಗೂ ಸಂಚಕಾರ..!

ಶನಿವಾರ, ಜೂಲೈ 20, 2019
26 °C
‘ಸಮಗ್ರ ನೀರಿನ ಸಂಪನ್ಮೂಲ ನಿರ್ವಹಣೆಗಾಗಿ ಸುರಕ್ಷಿತ ಮತ್ತು ಸುಸ್ಥಿರ ತಂತ್ರಜ್ಞಾನಗಳು ಮತ್ತು ಕಾರ್ಯತಂತ್ರಗಳು’ ಕಾರ್ಯಾಗಾರ

ತಾಪಮಾನ ಹೆಚ್ಚಳ; ನೀರಿಗೂ ಸಂಚಕಾರ..!

Published:
Updated:
Prajavani

ಮೈಸೂರು: ‘ಜಾಗತಿಕ ತಾಪಮಾನ ಹಂತ ಹಂತವಾಗಿ ಹೆಚ್ಚಿದಂತೆ; ಹಲವು ಸಮಸ್ಯೆಗಳು ಬಾಧಿಸಲಿದ್ದು, ನೀರಿನ ಸಮಸ್ಯೆಯೂ ಪ್ರಮುಖವಾಗಿ ಕಾಡಲಿದೆ’ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ.ಪಿ.ಮುಜುಂದಾರ್ ಮಂಗಳವಾರ ಇಲ್ಲಿ ಹೇಳಿದರು.

ಮೈಸೂರಿನ ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಹಾಗೂ ಯುನೈಟೆಡ್‌ ಕಿಂಗ್‌ಡಮ್‌ನ ಪ್ಲೈಮೌತ್ ವಿಶ್ವವಿದ್ಯಾಲಯ ನಗರದ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನಲ್ಲಿ ಆಯೋಜಿಸಿರುವ ‘ಸಮಗ್ರ ನೀರಿನ ಸಂಪನ್ಮೂಲ ನಿರ್ವಹಣೆಗಾಗಿ ಸುರಕ್ಷಿತ ಮತ್ತು ಸುಸ್ಥಿರ ತಂತ್ರಜ್ಞಾನಗಳು ಮತ್ತು ಕಾರ್ಯತಂತ್ರಗಳು’ ಕುರಿತ ನಾಲ್ಕು ದಿನದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಜಾಗತಿಕ ತಾಪಮಾನ 2080ರ ವೇಳೆಗೆ 1.5 ಡಿಗ್ರಿ ಸೆಲ್ಸಿಯಸ್‌ನಿಂದ 2 ಡಿಗ್ರಿ ಸೆಲ್ಸಿಯಸ್‌ ಹೆಚ್ಚಳವಾಗುವ ಸಾಧ್ಯತೆಯಿದ್ದು, ಇದರಿಂದ ಸಮುದ್ರಮಟ್ಟ ಹೆಚ್ಚಲಿದೆ. ಸಮುದ್ರ ತಟದಲ್ಲಿನ ಹಲವು ಭೂ ಪ್ರದೇಶ ಮುಳುಗಲಿವೆ. ಬಾಂಗ್ಲಾದೇಶ ಹೆಚ್ಚಿನ ಹಾನಿ ಅನುಭವಿಸಲಿದೆ. ಪ್ರವಾಹ–ಬರ ಹೆಚ್ಚಳಗೊಳ್ಳಲಿವೆ. ಹಲವು ರಾಷ್ಟ್ರಗಳಲ್ಲಿ ಹಸಿವಿನಿಂದ ಬಳಲುವವರ ಸಂಖ್ಯೆಯೂ ಹೆಚ್ಚಲಿದೆ. ಮಲೇರಿಯಾ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗಲಿದೆ. ನೀರು ಸಮಸ್ಯೆಯಾಗಿ ಕಾಡಲಿದೆ’ ಎಂದು ಮುಜುಂದಾರ್ ಪವರ್‌ ಪಾಯಿಂಟ್‌ ಪ್ರಸೆಂಟೇಷನ್‌ ಮೂಲಕ ವಿವರಿಸಿದರು.

‘ಬದಲಾದ ಹವಾಮಾನ ವೈಪರೀತ್ಯದಿಂದ ಅಂತರ್ಜಲ ಮಟ್ಟ ಸಾಕಷ್ಟು ಕುಸಿತಗೊಳ್ಳಲಿದೆ. ಕೈಗಾರಿಕೆ ತ್ಯಾಜ್ಯದಿಂದ ಜಲಮೂಲ ಕಲುಷಿತಗೊಳ್ಳಲಿದ್ದು, ಜಲಚರಗಳ ಜೀವನಚಕ್ರವೇ ಏರುಪೇರಾಗಲಿದೆ. ನೀರಿನ ಗುಣಮಟ್ಟ ಕುಸಿಯಲಿದೆ. ಇದು ಭವಿಷ್ಯದಲ್ಲಿ ಮನುಕುಲಕ್ಕೆ ದೊಡ್ಡ ಹೊಡೆತ ನೀಡಲಿದೆ. ಈ ಅಪಾಯದಿಂದ ಪಾರಾಗಲು ಸಮಾಜ ಈಗಿನಿಂದಲೇ ಎಚ್ಚೆತ್ತುಕೊಳ್ಳಬೇಕಿದೆ. ಎಲ್ಲೆಡೆಯೂ ಮಳೆ ನೀರನ್ನು ಭೂಮಿಗೆ ಇಂಗಿಸುವ ಕಾರ್ಯದಲ್ಲಿ ತಲ್ಲೀನವಾಗಬೇಕು. ಜಲಮರುಪೂರಣದ ಕೆಲಸಗಳು ಹೆಚ್ಚೆಚ್ಚು ನಡೆಯಬೇಕು’ ಎಂದು ಹೇಳಿದರು.

ಯುನೈಟೆಡ್‌ ಕಿಂಗ್‌ಡಮ್‌ನ ಪ್ಲೈಮೌತ್ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ಮತ್ತು ಜಲವಿಜ್ಞಾನ ವಿಭಾಗದ ಪ್ರೊ.ಹ್ಯಾರಿ ಡಿಕ್ಸನ್ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ‘ಭಾರತ ಹಾಗೂ ಯುನೈಟೆಡ್‌ ಕಿಂಗ್‌ಡಮ್‌ನ ಹಲವು ರಾಷ್ಟ್ರಗಳು ಭವಿಷ್ಯದಲ್ಲಿ ಜಾಗತಿಕ ತಾಪಮಾನ ಹೆಚ್ಚಳದಿಂದ ಹಲವು ಸಮಸ್ಯೆ ಎದುರಿಸಲಿದ್ದು, ಅಪಾಯ ತಡೆಗಟ್ಟಲು, ಸೂಕ್ತ ಕ್ರಮಕ್ಕಾಗಿ ಆಯಾ ಸರ್ಕಾರಗಳ ಕಣ್ತೆರೆಸಲು ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಜೆಎಸ್‌ಎಸ್‌ ಮಹಾವಿದ್ಯಾಲಯದ ಉಪ ಕುಲಪತಿ ಡಾ.ಎಚ್.ಬಸವನಗೌಡಪ್ಪ, ಕುಲಸಚಿವ ಡಾ.ಬಿ.ಮಂಜುನಾಥ್‌, ಇಂಡೋ–ಯುಕೆ ಕಾರ್ಯಗಾರದ ಯುನೈಟೆಡ್‌ ಕಿಂಗ್‌ಡಮ್‌ ತಂಡದ ಮುಖ್ಯಸ್ಥ ಡಾ.ಡೇವಿಡ್ ಜೆಂಕಿನ್, ಭಾರತೀಯ ತಂಡದ ಮುಖ್ಯಸ್ಥ ಡಾ.ಎಚ್‌.ಪಿ.ಬಸವರಾಜು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !