ಶುಕ್ರವಾರ, ಮೇ 20, 2022
25 °C
ಪ್ರವಾಸಿಗರ ಸಂಖ್ಯೆ ಇಳಿಮುಖ

ವಾರಾಂತ್ಯ ಕರ್ಫ್ಯೂ, ಕೋವಿಡ್‌ ನಿರ್ಬಂಧ: ಮೈಸೂರು ಮೃಗಾಲಯದ ಆದಾಯಕ್ಕೆ ಹೊಡೆತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೋವಿಡ್‌ ಪ್ರಕರಣಗಳು ಏರಿಕೆ ಆಗುತ್ತಿದ್ದಂತೆಯೇ ಮೈಸೂರಿಗೆ ಬರುವ ಪ್ರವಾಸಿಗರು ಕಡಿಮೆಯಾಗಿದ್ದಾರೆ. ಮೊದಲ ಮತ್ತು ಎರಡನೇ ಅಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದ ಚಾಮರಾಜೇಂದ್ರ ಮೃಗಾಲಯ, ಮೂರನೇ ಅಲೆಯಲ್ಲೂ ನಷ್ಟದ ಭೀತಿ ಎದುರಿಸುತ್ತಿದೆ.

ದಸರಾ ಬಳಿಕ ಮೈಸೂರಿನಲ್ಲಿ ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿತ್ತು. ವರ್ಷಾಂತ್ಯದ ವೇಳೆ ಹೆಚ್ಚಿನ ಪ್ರವಾಸಿಗರು ಬಂದಿದ್ದರಿಂದ, ಮೃಗಾಲಯಕ್ಕೂ ಆದಾಯ ಬರತೊಡಗಿತ್ತು. ಆದರೆ, ಹೊಸ ವರ್ಷದ ಆರಂಭದಲ್ಲಿ ಮತ್ತೆ ಕೋವಿಡ್‌ ಹೆಚ್ಚಾಗುತ್ತಿರುವುದು ಚಿಂತೆಗೆ ಕಾರಣವಾಗಿದೆ.

ಓಡಾಟಕ್ಕೆ ನಿರ್ಬಂಧ ಹಾಗೂ ವಾರಾಂತ್ಯ ಕರ್ಫ್ಯೂ ಕಾರಣಕ್ಕೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳ ಪ್ರವಾಸಿಗರು ಗಣನೀಯವಾಗಿ ಕಡಿಮೆಯಾಗಿದ್ದಾರೆ. ಮೃಗಾಲಯಕ್ಕೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ಹೆಚ್ಚು ಸ್ಥಳೀಯರು ಮತ್ತು ಪ್ರವಾಸಿಗರು ಬರುತ್ತಾರೆ. ಕಳೆದ ವಾರಾಂತ್ಯ ಮತ್ತು ಈ ವಾರಾಂತ್ಯ ಮೃಗಾಲಯದ ಬಾಗಿಲು ಮುಚ್ಚಲಾಗಿದೆ.

ಡಿಸೆಂಬರ್‌ ಕೊನೆಯ ವಾರದಲ್ಲಿ ಸರಾಸರಿ 10 ಸಾವಿರ ಮಂದಿ ಭೇಟಿ ನೀಡಿದ್ದರು. ಜ.2ರಂದು 12 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಬಂದಿದ್ದರು. ನಂತರ ಭೇಟಿ ನೀಡುವವರು ಕಡಿಮೆ ಯಾಗಿದ್ದಾರೆ. ಈಗ ಸರಾಸರಿ 2 ಸಾವಿರ ಮಂದಿಯಷ್ಟೇ ಭೇಟಿ ನೀಡುತ್ತಿದ್ದಾರೆ.

‘ಮೃಗಾಲಯದ ನಿರ್ವಹಣೆಗೆ ಅನುದಾನ ಬಿಡುಗಡೆ ಸೇರಿದಂತೆ ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿದೆ. ಸದ್ಯ ಮೃಗಾಲಯಕ್ಕೆ ಗಂಭೀರ ಆರ್ಥಿಕ ಸಮಸ್ಯೆ ಎದುರಾಗಿಲ್ಲ’ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್‌.ಆರ್‌.ಮಹದೇವಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು