ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರನ್ನು ಪ್ಯಾರಿಸ್ ಮಾಡುವುದು ಏನಾಯ್ತು? ಮೋದಿಗೆ ಸಂಘಟನೆಗಳ ಪ್ರಶ್ನೆ

Last Updated 18 ಜೂನ್ 2022, 10:49 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರನ್ನು ‍ಪ್ಯಾರಿಸ್ ಮಾಡುವುದಾಗಿ ಮಾತು ಕೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ ಅವರು 8 ವರ್ಷಗಳಲ್ಲಿ ಏನೂ ಮಾಡದಿರುವುದನ್ನು ಖಂಡಿಸಿ ಎಡ ‍ಪಕ್ಷಗಳು, ದಲಿತ, ರೈತ ಹಾಗೂ ಪ್ರಗತಿಪರ ಸಂಘಟನೆಗಳ ವತಿಯಿಂದ ನಗರದ ಗಾಂಧಿ ಚೌಕದಲ್ಲಿ ಜೂನ್‌ 19ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಸಿಪಿಐ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಚ್‌.ಬಿ. ರಾಮಕೃಷ್ಣ ತಿಳಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಸಾಂಸ್ಕೃತಿಕ ನಗರಿಯನ್ನು ಪ್ಯಾರಿಸ್ ಮಾದರಿಯ ನಗರ ಮಾಡುವ ನಿಟ್ಟಿನಲ್ಲಿ ಎಷ್ಟು ಹಣ ನೀಡಿದ್ದಾರೆ, ಯಾವ ಯೋಜನೆ ರೂಪಿಸಿದ್ದಾರೆ ಎಂಬುದನ್ನು ತಿಳಿಸಬೇಕು. ಜೂನ್‌ 20 ಹಾಗೂ 21ರಂದು ಮೈಸೂರು ಪ್ರವಾಸ ಕೈಗೊಂಡಿರುವ ಪ್ರಧಾನಿಯು ಸಾರ್ವಜನಿಕರಿಗೆ ಲೆಕ್ಕ ಕೊಡಬೇಕು’ ಎಂದು ಒತ್ತಾಯಿಸಿದರು.

‘ಮೈಸೂರಿನಲ್ಲಿ ಕೈಗಾರಿಕೆ ಮತ್ತು ಉದ್ಯೋಗ ಅವಕಾಶಗಳಿಗೆ ಅನುಕೂಲವಾಗುವ ಮೈಸೂರು–ಕುಶಾಲನಗರ, ಮೈಸೂರು–ಮೆಟ್ಟಿಪಾಳ್ಯಂ ಹಾಗೂ ನಂಜನಗೂಡು–ನೀಲಂಬೂರು ರೈಲು ಮಾರ್ಗ ಯೋಜನೆಗಳು ಯಾವ ಸ್ಥಿತಿಯಲ್ಲಿವೆ ಎನ್ನುವುದನ್ನು ಜನರಿಗೆ ತಿಳಿಸಬೇಕು. ಮೈಸೂರಿನಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮಾರಬಾರದು. ಲಲಿತಮಹಲ್‌ ಅರಮನೆ ಸೇರಿದಂತೆ ಯಾವುದೂ ಈ ಸರ್ಕಾರದ ಅವಧಿಯಲ್ಲಿ ನಿರ್ಮಾಣಗೊಂಡಿಲ್ಲ’ ಎಂದರು.

‘ಪ್ರವಾಸಿ ತಾಣವಾದ ಮೈಸೂರಿನಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಬಿಜೆಪಿ ಸರ್ಕಾರದ ಕೊಡುಗೆ ಏನು?’ ಎಂದು ಕೇಳಿದರು.

‘ಯುವಕರಿಗೆ ಚಾಕೊಲೇಟ್ ನೀಡುವ ಅಗ್ನಿಪಥ್‌ ಯೋಜನೆ ಕೈಬಿಡಬೇಕು. ಕಾರ್ಮಿಮರನ್ನು ಶೋಷಿಸುವ 4 ಕಾರ್ಮಿಕ ಸಂಹಿತೆಗಳನ್ನು ಕೈಬಿಡಬೇಕು. ಕನಿಷ್ಠ ಬೆಂಬಲ ಬೆಲೆ ಶಾಸನಬದ್ಧಗೊಳಿಸಬೇಕು. ವಿದ್ಯುತ್ ಖಾಸಗೀಕರಣ ಪ್ರಸ್ತಾವದಿಂದ ಹಿಂದೆ ಸರಿಯಬೇಕು. ಪೆಟ್ರೋಲ್‌, ಡೀಸೆಲ್, ಅಡುಗೆ ಅನಿಲ ಸಿಲಿಂಡರ್‌ ಮತ್ತು ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಜಗದೀಶ ಸೂರ್ಯ, ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ರವಿ, ಸಿಪಿಐಎಂಎಲ್ ಜಿಲ್ಲಾ ಸಮಿತಿ ಕಾರ್ಯದರ್ಶಿ ಚೌಡಳ್ಳಿ ಜವರಯ್ಯ ಮತ್ತು ಐಎನ್‌ಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಅನಿಲ್‌ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT