ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಹತ್ಯೆ ಪ್ರಚೋದನೆ ನೀಡಿದವರಿಗೆ 5 ವರ್ಷ ಜೈಲು

ಜೀವ ತೆಗೆದ ‘ನೇಣು ಹಾಕಿಕೊಂಡು ಸಾಯಿ’ ಎಂಬ ಮಾತು
Last Updated 26 ಡಿಸೆಂಬರ್ 2019, 13:22 IST
ಅಕ್ಷರ ಗಾತ್ರ

ಮೈಸೂರು: ಪತಿಗೆ ‘ನೇಣು ಹಾಕಿಕೊಂಡು ಸಾಯಿ’ ಎಂದು ಹೇಳುವ ಮೂಲಕ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಎಚ್.ಡಿ.ಕೋಟೆ ತಾಲ್ಲೂಕಿನ ತೆರಣಿಮುಂಟಿ ಗ್ರಾಮದ ನಿವಾಸಿ ದೇವಮಣಿ ಮತ್ತು ಆಕೆಯ ಗೆಳೆಯ ಗೋಪಾಲಯ್ಯ ಎಂಬುವವರಿಗೆ ಇಲ್ಲಿನ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಹಾಗೂ ₹ 20 ಸಾವಿರ ದಂಡ ವಿಧಿಸಿದೆ.

ಕರಿಯಯ್ಯ ಎಂಬುವವರ ಪತ್ನಿಯಾಗಿದ್ದ ದೇವಮಣಿ ಗೋಪಾಲಯ್ಯನ ಜತೆ ಹೆಚ್ಚು ಸಲಿಗೆಯಿಂದ ಇದ್ದಳು. ಪದೇ ಪದೇ ಕರಿಯಯ್ಯ ಪತ್ನಿಗೆ ಎಚ್ಚರಿಕೆ ನೀಡುತ್ತಿದ್ದ. 2015ರ ಸೆಪ್ಟೆಂಬರ್ 24ರಂದು ರಾತ್ರಿ ಕರಿಯಯ್ಯ ಮನೆಗೆ ಬಂದಾಗ ದೇವಮಣಿ ಗೋಪಾಲಯ್ಯನ ಜತೆ ಇದ್ದಳು. ಈ ವೇಳೆ ಮಾತಿಗೆ ಮಾತು ಬೆಳೆದು ದೇವಮಣಿಯು ‘ನೋಡಲಾಗದಿದ್ದರೆ ನೇಣು ಹಾಕಿಕೊಂಡು ಸತ್ತು ಹೋಗು, ನೀನು ಇರುವುದಕ್ಕಿಂತ ಸಾಯುವುದೇ ಮೇಲು’ ಎಂದು ನಿಂದಿಸಿದಳು. ಇದರಿಂದ ಮನನೊಂದ ಕರಿಯಯ್ಯ ಇದೇ ದಿನ ಮಧ್ಯರಾತ್ರಿ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ದೇವಮಣಿ ಮತ್ತು ಗೋಪಾಲಯ್ಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬಿ.ಮಧುಸೂದನ ಅವರು ಶಿಕ್ಷೆ ವಿಧಿಸಿದ್ದಾರೆ.

ಸರ್ಕಾರದ ಪರವಾಗಿ ಹುಣಸೂರಿನ ಪ್ರಭಾರ ಪಬ್ಲಿಕ್ ಪ್ರಾಸಿಕ್ಯೂಟರ್ ಅಜಿತ್‌ಕುಮಾರ್ ಡಿ.ಹಮಿಗಿ ವಾದ ಮಂಡಿಸಿದ್ದರು.

ಗಾಂಜಾ ಮಾರಾಟ ಯತ್ನ; ಆರೋಪಿ ಬಂಧನ

ಮೈಸೂರು: ಇಲ್ಲಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಸಕಲೇಶಪುರದ ದೇವ್‌ (24) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಂದ 200 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈತ ಮಂಡಿಮೊಹಲ್ಲಾದಿಂದ ಗಾಂಜಾವನ್ನು ತಂದು ಇಲ್ಲಿ ಮಾರಾಟ ಮಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಡಿಸಿಪಿ ಕವಿತಾ ಹಾಗೂ ಎಸಿಪಿ ಶಿವಶಂಕರ್ ಈ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದ್ದರು. ಹೆಬ್ಬಾಳ ಠಾಣೆಯ ಇನ್‌ಸ್ಪೆಕ್ಟರ್ ಚೆಲುವೇಗೌಡ, ಪ್ರೊಬೇಷನರಿ ಎಎಸ್‌ಐ ಕಿರಣ್ ಸೇರಿದಂತೆ ಸಿಬ್ಬಂದಿ ಕಾರ್ಯಾಚರಣೆ ತಂಡದಲ್ಲಿದ್ದರು.

ನಂಜನಗೂಡು; ಅಪಘಾತ ಸಾವು

ಮೈಸೂರು: ನಂಜನಗೂಡು ತಾಲ್ಲೂಕಿನ ತಾಯೂರು ಸಮೀಪದ ಈಶ್ವರಗೌಡನಹಳ್ಳಿಯಲ್ಲಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ತಿರುಪತಿ (25) ಎಂಬುವವರು ಆಯಾತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಬಿಳಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT