ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವಿಎಫ್‌ ಚಿಕಿತ್ಸೆ: ಜಾಗೃತಿ ಕೊರತೆ

Last Updated 29 ಮೇ 2018, 19:34 IST
ಅಕ್ಷರ ಗಾತ್ರ

ಬೆಂಗಳೂರು: ಕ್ಯಾನ್ಸರ್‌ ಜಯಿಸಿದ ನಂತರಬದುಕು ಹಸನಾಗಲಿದೆ ಎಂದು ಕನಸು ಕಟ್ಟಿದ ಸಾವಿರಾರು ಮಹಿಳೆಯರಿಗೆ ಫಲವತ್ತತೆಯ ಸಮಸ್ಯೆ ಆಘಾತ ತರುತ್ತದೆ. ಮಕ್ಕಳಾಗದವರಿಗೆ ಐವಿಎಫ್‌ ಚಿಕಿತ್ಸೆ ವರದಾನವಾಗಲಿದೆ. ಇದಕ್ಕಾಗಿ ಅಂಡಾಣು ಸಂಗ್ರಹ ಮಾಡಿಟ್ಟುಕೊಳ್ಳುವ ಕುರಿತು ಜಾಗೃತಿ ಹೆಚ್ಚಬೇಕಿದೆ.

ಕ್ಯಾನ್ಸರ್‌ ಎಂದರೆ ಇದು ವಾಸಿಯಾಗದ ಕಾಯಿಲೆ ಅಲ್ಲ ಎನ್ನುವ ಪರಿಕಲ್ಪನೆ ಇಂದಿನ ದಿನಗಳಲ್ಲಿ ಕಡಿಮೆಯಾಗಿದೆ. ಆರಂಭಿಕ ಹಂತದಲ್ಲಿಯೇ ಪತ್ತೆಯಾದರೆ ಶೇ 80ರಷ್ಟು ರೋಗಿಗಳನ್ನು ಉಳಿಸಬಹುದು. ಆದರೆ, ಬದುಕಿ ಉಳಿದ ರೋಗಿಗಳ ಮುಂದೆ ಸಾಲುಸಾಲು ಸವಾಲುಗಳಿವೆ. ಅದರಲ್ಲಿ ಫಲವತ್ತತೆ (ಫರ್ಟಿಲಿಟಿ) ಕೂಡ ಒಂದು.

ಕರ್ನಾಟಕದಲ್ಲಿ ಸುಮಾರು 1.5 ಲಕ್ಷ ಕ್ಯಾನ್ಸರ್‌ ರೋಗಿಗಳು ಇದ್ದಾರೆ. ಇವರಲ್ಲಿ 90,000 ಮಹಿಳೆಯರು ಸೇರಿದ್ದಾರೆ. ಇವರಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳೆಯರು 35 ವರ್ಷದೊಳಗಿನವರು ಎಂಬುದು ಆಘಾತಕಾರಿ ವಿಷಯ. ಇವರಲ್ಲಿ ಬಹುತೇಕರು ಫಲವತ್ತತೆ ಕಳೆದುಕೊಳ್ಳುತ್ತಿದ್ದಾರೆ.

ಕ್ಯಾನ್ಸರ್‌ ಇದೆ ಎಂದ ತಕ್ಷಣ ಸಹಜವಾಗಿಯೇ ವೈದ್ಯರು ಹಾಗೂ ರೋಗಿಯ ಸಂಬಂಧಿಕರು ಅವರನ್ನು ಬದುಕಿಸುವ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ. ಅವರಿಗೆ ನೀಡಲಾಗುವ ಚಿಕಿತ್ಸೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ. 35 ವರ್ಷದೊಳಗಿನ ಮಹಿಳೆಯರಲ್ಲಿ ಕ್ಯಾನ್ಸರ್‌ ಬಂದರೆ ಅವರಲ್ಲಿ ಬಹುತೇಕರು ಬಂಜೆತನದಿಂದಲೇ ಜೀವನ ಕಳೆಯಬೇಕಾದ ಸ್ಥಿತಿ ನಮ್ಮ ರಾಜ್ಯದಲ್ಲಿ ಇದೆ.

‘ಕ್ಯಾನ್ಸರ್ ಚಿಕಿತ್ಸೆ ಪಡೆಯುವ ಮೊದಲು ಹತ್ತು ನಿಮಿಷ ನಿಮ್ಮ ಮುಂದಿನ ಜೀವನದ ಬಗ್ಗೆಯೂ ಚಿಂತಿಸಿ. ಕೆಲವು ಬಗೆಯ ಕ್ಯಾನ್ಸರ್‌ ತಡೆಗಟ್ಟಬೇಕಾದರೆ ಕಿಮೋಥೆರಪಿ, ರೇಡಿಯೋಥೆರಪಿ ಅನಿವಾರ್ಯವಾಗಿದೆ. ಇದರಿಂದ ಅಂಡಾಣು ಹಾಗೂ ವೀರ್ಯಾಣುಗಳಿಗೆ ಹಾನಿಯುಂಟಾಗುತ್ತದೆ. ಚಿಕಿತ್ಸೆ ಪಡೆದ ಮಹಿಳೆಯರು ಸಂಪೂರ್ಣವಾಗಿ ಫಲವತ್ತತೆಯನ್ನು ಕಳೆದುಕೊಳ್ಳುವ ಸ್ಥಿತಿಗೆ ತಲುಪುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ತಪ್ಪಿಸಬೇಕಾದರೆ ಅಂಡಾಣು, ವೀರ್ಯಾಣು ಹಾಗೂ ಭ್ರೂಣವನ್ನು ಶೀತಲೀಕರಣ ವ್ಯವಸ್ಥೆಯಲ್ಲಿ ಸಂರಕ್ಷಿಸಿಡುವ ವ್ಯವಸ್ಥೆ ಇದೆ. ಇದಕ್ಕೆ ವೈದ್ಯರ ಮಾರ್ಗದರ್ಶನ ಅಗತ್ಯ. ಸಂಗ್ರಹಿಸಿಟ್ಟ ಅಂಡಾಣುವನ್ನು ಬಳಸಿ ಐವಿಎಫ್‌ ಚಿಕಿತ್ಸೆ ನೀಡಿದರೆ ಅಂತಹವರಿಗೆ ಮಕ್ಕಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ಅನುಸರಿಸಲು ಎಷ್ಟೋ ಮಂದಿಗೆ ಆ ಸಮಯದಲ್ಲಿ ಸಹನೆ ಇರುವುದಿಲ್ಲ. ಬದುಕುಳಿದು ಜೀವನ ಸಹಜ ಸ್ಥಿತಿಗೆ ತಲುಪಿದ ನಂತರ ತಮ್ಮ ತಪ್ಪಿನ ಅರಿವಾಗಿ ನೊಂದುಕೊಳ್ಳುತ್ತಾರೆ’ ಎಂದು ಫಲವತ್ತತೆ ತಜ್ಞೆ ಡಾ. ಪಲ್ಲವಿ ಪ್ರಸಾದ್ ಹೇಳುತ್ತಾರೆ.

ಕ್ಯಾನ್ಸರ್‌ಗೂ ಫಲವತ್ತತೆಗೂ ಏನು ಸಂಬಂಧ?: ಗರ್ಭಕೋಶದ ಕ್ಯಾನ್ಸರ್ ಹೊರತುಪಡಿಸಿದರೆ ಉಳಿದ ಕ್ಯಾನ್ಸರ್‌ಗಳಿಗೂ ಫಲವತ್ತತೆಗೂ ನೇರ ಸಂಬಂಧ ಇಲ್ಲ. ಕ್ಯಾನ್ಸರ್‌ಗೆ ನೀಡಲಾಗುವ ಚಿಕಿತ್ಸೆಯಿಂದ ಫಲವತ್ತತೆ ನಾಶವಾಗುತ್ತದೆ. ಕಿಮೋಥೆರಪಿ ಚಿಕಿತ್ಸೆ ನಂತರ ಕೆಲವು ಮಹಿಳೆಯರಲ್ಲಿ ಶಾಶ್ವತವಾಗಿ ಮುಟ್ಟು (ಋತುಚಕ್ರ) ನಿಲ್ಲುವ ಸಾಧ್ಯತೆ ಕೂಡ ಹೆಚ್ಚಿದೆ. ಚಿಕಿತ್ಸೆ ಬಳಿಕವೂ ಗರ್ಭ ಧರಿಸಿದ ಉದಾಹರಣೆಗಳು ಇವೆ. ಈ ಸಾಧ್ಯತೆ ತೀರಾ ಕಡಿಮೆ ಎನ್ನುವುದು ಅವರ ಅಭಿಪ್ರಾಯ.

ಅಂಡಾಣು ಶೇಖರಿಸಿ ಇಟ್ಟಿದ್ದರೆ ತಾಯಿಯಾಗುವ ಅವಕಾಶ ಹೆಚ್ಚಿರುತ್ತದೆ. ಕ್ಯಾನ್ಸರ್‌ಗೆ ನೀಡುವ ಚಿಕಿತ್ಸೆಗೆ ಮುನ್ನವೇ ವೈದ್ಯರು ಈ ವಿವರಗಳನ್ನು ನೀಡುತ್ತಾರೆ. ಫಲವತ್ತತೆಗೆ ಇರುವ ಮಾರ್ಗಗಳ ಬಗ್ಗೆ ಸರಿಯಾದ ಅರಿವು ಮೂಡಿಸಲು ಸಾಧ್ಯವಾಗಿಲ್ಲ. ಗುಣಮುಖರಾದ ರೋಗಿಗಳು ಎರಡು ವರ್ಷಗಳ ಬಳಿಕ ಮಗು ಪಡೆಯಬಹುದು. ಚಿಕಿತ್ಸೆಗೆ ಮೊದಲೇ ಅಂಡಾಣು ಶೇಖರಿಸಿಡಲು ಸಾಧ್ಯವಾಗದ ಸ್ಥಿತಿಯಲ್ಲಿ ದಾನಿಗಳಿಂದ ಕೂಡ ಪಡೆದುಕೊಳ್ಳುವ ಅವಕಾಶ ಇದೆ. ಆರೋಗ್ಯಕರ ಅಂಡಾಣು ಸಿಗದಿದ್ದರೆ ಮಕ್ಕಳಾಗುವ ಸಾಧ್ಯತೆ ಕಡಿಮೆಯಿರುತ್ತದೆ.

‘ಕುಟುಂಬದ ತಿರಸ್ಕಾರ’

ಕ್ಯಾನ್ಸರ್ ಜಯಿಸಿದ ಬಳಿಕವೂ ಮಹಿಳೆಯರು ಫಲವತ್ತತೆಯಕಾರಣದಿಂದಲೇ ಕುಟುಂಬದ ತಿರಸ್ಕಾರಕ್ಕೆ ಒಳಗಾಗುತ್ತಿದ್ದಾರೆ. ಕೆಲವರು ಗಂಭೀರ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ತಪ್ಪಿಸಬೇಕಾದರೆ ಅವರು ಚಿಕಿತ್ಸೆಗೆ ಮೊದಲೇ ಅಂಡಾಣು ಸಂಗ್ರಹಿಸಿಡುವ ಅವಕಾಶ ಪಡೆಯಬೇಕು. ಇದು ಅತ್ಯುತ್ತಮ ಹಾಗೂ ಆರೋಗ್ಯಕರ ಮಾರ್ಗ.

– ಡಾ. ಪಲ್ಲವಿ ಪ್ರಸಾದ್‌, ನೋವಾ ಐವಿಐ ಫರ್ಟಿಲಿಟಿಯ ಫಲವತ್ತತೆ ತಜ್ಞೆ

ಏನಿದು ಐವಿಎಫ್‌ ಚಿಕಿತ್ಸೆ?

ಶೇಖರಿಸಿಟ್ಟ ಅಂಡಾಣು ಹಾಗೂ ವೀರ್ಯಾಣುಗಳನ್ನು ಕೃತಕವಾಗಿ ಗರ್ಭಾಶಯಕ್ಕೆ ವರ್ಗಾಯಿಸುವುದು. ಇದನ್ನು ಐವಿಎಫ್‌ ಚಿಕಿತ್ಸೆ ಎನ್ನುತ್ತಾರೆ. ಮಕ್ಕಳಾಗದ ಅನೇಕರಿಗೆ ಈ ಚಿಕಿತ್ಸೆ ನೀಡಲಾಗುತ್ತದೆ. ಕ್ಯಾನ್ಸರ್ ರೋಗಿಗಳಿಗೂ ಇದೇ ಮಾದರಿ ಅನುಸರಿಸಬಹುದು.

ಎಲ್ಲಿ ಶೇಖರಿಸಿ ಇಡಬಹುದು?

ಅಂಡಾಣು ಶೇಖರಿಸಿ ಇಡುವುದಕ್ಕೆ ಕರ್ನಾಟದಲ್ಲಿಯೂ ಅನೇಕ ಲ್ಯಾಬ್‌ಗಳಿವೆ. ಅದರಲ್ಲಿ ಒಂದು ಬೆಂಗಳೂರಿನ ‘ನೋವಾ ಐವಿಐ ಫರ್ಟಿಲಿಟಿ ಲ್ಯಾಬ್‌’. ಈ ಲ್ಯಾಬ್‌, ಕೋರಮಂಗಲದ ಮೊದಲನೇ ಮುಖ್ಯ ರಸ್ತೆ, 5ನೇ ಬ್ಲಾಕ್‌ನಲ್ಲಿದೆ.

1800 103 2229 ಈ ಸಂಪರ್ಕ ಸಂಖ್ಯೆಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ಇಲ್ಲಿ ಈಗಾಗಲೇ 16 ಮಹಿಳೆಯರು ಅಂಡಾಣು ಸಂಗ್ರಹ ಮಾಡಿದ್ದಾರೆ.

ದಾನ ಮಾಡಬಹುದು: ಇಲ್ಲಿ ಅಂಡಾಣುಗಳನ್ನು ಸಂಗ್ರಹಿಸಿಡುವುದು ಮಾತ್ರವಲ್ಲ, ಯಾರು ಬೇಕಾದರೂ ದಾನ ಮಾಡಬಹುದು. ಅನಾರೋಗ್ಯಕರ ಜೀವನಶೈಲಿಯಿಂದಾಗಿ ಕೆಲವರಲ್ಲಿ ಮಕ್ಕಳಾಗಲು ಬೇಕಾದ ಒಂದೂ ಅಂಡಾಣು ಇರದೆ ಇರುವ ಸಂದರ್ಭಗಳಲ್ಲಿ ಅಂತಹವರಿಗೆ ಇದರ ಅಗತ್ಯ ಇದೆ. ಮುಂದಿನ ಪೀಳಿಗೆಯಲ್ಲಿ ಯಾರಿಗಾದರೂ ಮಕ್ಕಳಾಗದಿದ್ದ ಸಂದರ್ಭದಲ್ಲಿ ಬಳಸಲು ಅನುಕೂಲವಾಗುವಂತೆಯೂ ಅಂಡಾಣುಗಳನ್ನು ಸಂಗ್ರಹಿಸಿಡಬಹುದು. ಈ ಲ್ಯಾಬ್‌ನಲ್ಲಿ ಒಂದು ವರ್ಷ ಅಂಡಾಣು ಸಂಗ್ರಹಿಸಿಟ್ಟುಕೊಟ್ಟಲು ₹ 3,500 ಶುಲ್ಕ ವಿಧಿಸುತ್ತಾರೆ.

ದಾನ ಮಾಡುವ ಅವಧಿ: ಬೆಂಗಳೂರಿನಲ್ಲಿ 45 ವರ್ಷದೊಳಗಿನ ಶೇ 25ರಷ್ಟು ಮಹಿಳೆಯರು ಅಂಡಾಣು ಸಂಗ್ರಹಿಸಿಡುವ ಬಗ್ಗೆ ಒಲವು ತೋರಿದ್ದಾರೆ. ಇವರಲ್ಲಿ ಬಹುತೇಕರು ತಮ್ಮ ಅವಧಿ ಮುಗಿದ ಬಳಿಕ ವೈದ್ಯರನ್ನು ಸಂಪರ್ಕಿಸುತ್ತಿದ್ದಾರೆ. 40 ವರ್ಷಗಳ ಬಳಿಕ ಅಂಡಾಣುಗಳ ಜೀವಿತಾವಧಿ ಕಡಿಮೆಯಾಗುತ್ತದೆ. ಆರೋಗ್ಯಕರ ಅಂಡಾಣು ಸಂಗ್ರಹಣೆಗೆ 35 ವರ್ಷಗಳ ಒಳಗಿನ ಅವಧಿ ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT