ಶನಿವಾರ, ಮೇ 28, 2022
21 °C
2009ರಲ್ಲಿ ಅಧಿಕಾರದಲ್ಲಿದ್ದಾಗ ಅರಳಿದ್ದ ಕಮಲ–ಈ ಬಾರಿ ಒಲಿಯದ ಗೆಲುವು

ಮೈಸೂರು: ಬಿಜೆಪಿ ಮತ್ತೆ ಎಡವಿದ್ದೆಲ್ಲಿ?

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದ ಚುನಾವಣೆಯಲ್ಲಿ 2009ರಲ್ಲಿ ಅಧಿಕಾರದಲ್ಲಿದ್ದಾಗ ತೋರಿದ ಮ್ಯಾಜಿಕ್‌ ಪುನರಾವರ್ತಿಸಲು ಬಿಜೆಪಿ ವಿಫಲವಾಗಿದೆ. ಈ ಬಾರಿಯೂ ಪಕ್ಷದ ಸರ್ಕಾರವಿದ್ದರೂ ಕಮಲ ಅರಳಿಸಲು ಸಾಧ್ಯವಾಗಿಲ್ಲ.

ಗೆಲುವಿನ ಆತ್ಮವಿಶ್ವಾಸದಲ್ಲಿದ್ದ ಅಭ್ಯರ್ಥಿ ಆರ್‌.ರಘು (ಕೌಟಿಲ್ಯ) ಸತತ ಎರಡನೇ ಬಾರಿ ಎಡವಿದ್ದಾರೆ. ಪತ್ನಿ ಸಾವಿನ ದುಃಖದಲ್ಲಿದ್ದ ಅವರಿಗೆ ಚುನಾವಣಾ ಸೋಲು ಮತ್ತೊಂದು ಆಘಾತ ನೀಡಿದ್ದು, ಸರ್ಕಾರದ ಬಲ ಸೇರಿದಂತೆ ಯಾವುದೇ ‘ಶಕ್ತಿ’ಯೂ ಕೆಲಸ ಮಾಡಿಲ್ಲ.

ಟಿಕೆಟ್‌ ದೊರಕಿಸಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಬಂದು ಪ್ರಚಾರ ಮಾಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ವಾರಗಟ್ಟಲೇ ಕ್ಷೇತ್ರದಲ್ಲಿ ಬಿಡಾರ ಹೂಡಿ ಮತಯಾಚಿಸಿದ್ದರು. ಜೆಡಿಎಸ್‌ನೊಳಗಿನ ಬಂಡಾಯವೂ ನೆರವಿಗೆ ಬರಬಹುದೆಂದು ಭಾವಿಸಿದ್ದರು. 2015ರಲ್ಲಿ ಸ್ಪರ್ಧಿಸಿ ಸೋತಿದ್ದ ರಘು, ಆಗಿನಿಂದಲೂ ಕ್ಷೇತ್ರದೊಂದಿಗೆ ಒಡನಾಟವಿಟ್ಟುಕೊಂಡು, ಎಲ್ಲಾ ಅಭ್ಯರ್ಥಿಗಳಿಗಿಂತ ಮೊದಲೇ ಪ್ರಚಾರ ಶುರು ಮಾಡಿದ್ದರು. ಆಗಿದ್ದರೂ ಮತದಾರರನ್ನು ಒಲಿಸಿಕೊಳ್ಳುವಲ್ಲಿ ಯಶ ಕಂಡಿಲ್ಲ.

ಚಾಮರಾಜನಗರದಲ್ಲಿ ಮತದಾ ರರು ಕೈಹಿಡಿದಿದ್ದಾರೆ. ಮೈಸೂರಿನ ಎಚ್‌.ಡಿ.ಕೋಟೆ, ನಂಜನಗೂಡಿನಲ್ಲೂ ಸದಸ್ಯರು ಬಿಜೆಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿದ್ದಾರೆ. ಹೀಗಾಗಿಯೇ ಅವರು ಮೊದಲ ಪ್ರಾಶಸ್ತ್ಯ ಮತಗಳಲ್ಲಿ 1,919 ಮತ ಪಡೆದು, ಜೆಡಿಎಸ್‌ ಪಕ್ಷವನ್ನು (1,780 ಮತ) ಹಿಂದಿಕ್ಕಲು ಸಾಧ್ಯವಾಯಿತು. ಆದರೆ, ದ್ವಿತೀಯ ಪ್ರಾಶಸ್ತ್ಯದ ಮತಗಳಲ್ಲಿ ಅವರು ಹಿಂದೆ ಬಿದ್ದರು.

ನಾಮಪತ್ರ ಕ್ರಮಬದ್ಧತೆ ಸಂಬಂಧ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅಭ್ಯರ್ಥಿಗಳನ್ನು ರಘು ಆತಂಕಕ್ಕೆ ಸಿಲುಕಿಸಿದ್ದರು. ಅಲ್ಲದೇ, ಜೆಡಿಎಸ್‌ ಅಭ್ಯರ್ಥಿ ಸಿ.ಎನ್‌.ಮಂಜೇಗೌಡ ವಿರುದ್ಧ ಸಚಿವ ಸೋಮಸೇಖರ್‌ ಮಾಡಿದ ಆರೋಪವೂ ಅವರಿಗೆ ತಿರುಗೇಟು ನೀಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಈ ಪಕ್ಷದ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರೂ ಕ್ಷೇತ್ರದಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದಾರೆ.

‘ನಿರೀಕ್ಷಿತ ಮತ ಪಡೆಯುವಲ್ಲಿ ಪಕ್ಷ ವಿಫಲವಾಗಿರುವ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಯಾರನ್ನೂ ನಾನು ದೂರುವುದಿಲ್ಲ. ಆಂತರಿಕವಾಗಿ ‍ಪಕ್ಷ ಕಾರಣ ಕಂಡುಕೊಳ್ಳಬೇಕು’ ಎಂದು ರಘು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದಾ ಸಂಘರ್ಷದಲ್ಲಿ ತೊಡಗಿರುವ ಕಾಂಗ್ರೆಸ್‌–ಜೆಡಿಎಸ್‌ ಒಳಒಪ್ಪಂದ ಮಾಡಿಕೊಂಡು ನನ್ನನ್ನು ಸೋಲಿಸಿವೆ. ಕಾಂಗ್ರೆಸ್‌ ಕೈಗಳು ಜೆಡಿಎಸ್‌ ಪರ ಕೆಲಸ ಮಾಡಿವೆ. ವಿಧಾನಸೌಧವನ್ನೇ ಕಾಣದ ಸಣ್ಣ ಸಮುದಾಯದ ಪ್ರತಿನಿಧಿಯಾಗಿ ಚುನಾವಣೆಯಲ್ಲಿ ಗೆದ್ದು ಹೋಗುವ ಕನಸು ಈಡೇರದ ನೋವಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಜೆಡಿಎಸ್‌ ಗೆದ್ದಿದ್ದು ಎಲ್ಲಿ?: ಮತ ಎಣಿಕೆ ದಿನವಾದ ಮಂಗಳವಾರ ಮೊದಲ ಪ್ರಾಶಸ್ತ್ಯದ ಮತಗಳ ಹಿನ್ನಡೆಯಿಂದ ಮಧ್ಯಾಹ್ನವೇ ಕುಗ್ಗಿ ಹೋಗಿದ್ದ ಜೆಡಿಎಸ್ ಸಂಜೆ ವೇಳೆಗೆ ಪುಟಿದೆದ್ದು ನಿಂತಿತ್ತು. ಕಾಂಗ್ರೆಸ್‌ಗೆ ಮೊದಲ ಪ್ರಾಶಸ್ತ್ಯ ಮತ ನೀಡಿದವರು ಜೆಡಿಎಸ್‌ಗೆ 2ನೇ ಪ್ರಾಶಸ್ತ್ಯ ಹಾಕಿದ್ದರು. ಇದು ಫಲಿತಾಂಶದ ದಿಕ್ಕನ್ನೇ ಬದಲಾಯಿಸಿತು.

‌ಬಂಡಾಯ, ಒಳಏಟು ಬಿಸಿ ನಡುವೆಯೂ ಸಿ.ಎನ್‌.ಮಂಜೇಗೌಡ ಗೆದ್ದರು. ಚಾಮುಂಡೇಶ್ವರಿ, ಹುಣಸೂರು, ಎಚ್‌.ಡಿ.ಕೋಟೆಯಲ್ಲಿ ಮತದಾರರು ಕೈಕೊಟ್ಟರೂ ಕೆ.ಆರ್‌.ನಗರ, ಪಿರಿಯಾಪಟ್ಟಣ, ತಿ.ನರಸೀಪುರದಲ್ಲಿ ಹೆಚ್ಚು ಮತಗಳು ಬಿದ್ದವು. ಜೊತೆಗೆ ಇನ್ನುಳಿದ ‘ಶಕ್ತಿ’ಗಳು ಕೈಬಿಡಲಿಲ್ಲ. ಇದು ಶಾಸಕ ಸಾ.ರಾ.ಮಹೇಶ್‌ ಹಾಗೂ ಕುಮಾರಸ್ವಾಮಿ ಅವರ ‘ಮಾನ’ ಉಳಿಸಿದವು. ಇಲ್ಲದಿದ್ದರೆ ಇಬ್ಬರೂ ಮತ್ತಷ್ಟು ಟೀಕಾ ಪ್ರಹಾರಕ್ಕೆ ಒಳಗಾಗುತ್ತಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು