ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಮಿತಿಯೊಳಗೆ ಶಕ್ತಿಮೀರಿ ಕೆಲಸ

ಹುದ್ದೆಗಳ ಭರ್ತಿಗೆ ಮನವಿ: ಸಿಐಐಎಲ್‌ ನಿರ್ದೇಶಕ ಪ್ರೊ.ಸಿ.ಜಿ.ವೆಂಕಟೇಶಮೂರ್ತಿ
Last Updated 31 ಅಕ್ಟೋಬರ್ 2020, 4:58 IST
ಅಕ್ಷರ ಗಾತ್ರ

ಮೈಸೂರು: ‘ಭಾರತೀಯ ಭಾಷಾ ಸಂಸ್ಥಾನದಲ್ಲಿ (ಸಿಐಐಎಲ್) ಖಾಲಿ ಇರುವ ಹುದ್ದೆಗಳು ಹಂತ ಹಂತವಾಗಿ ಭರ್ತಿಯಾಗುವ ವಿಶ್ವಾಸವಿದೆ. ಅದು ವರೆಗೂ ಈಗ ಇರುವ ಸಂಪನ್ಮೂಲವನ್ನು ಬಳಸಿಕೊಂಡು ನಮ್ಮ ಇತಿಮಿತಿಯೊಳಗೆ ಶಕ್ತಿಮೀರಿ ಕೆಲಸ ಮಾಡುತ್ತೇವೆ’ ಎಂದು ಸಿಐಐಎಲ್‌ ನಿರ್ದೇಶಕ ಪ್ರೊ.ಸಿ.ಜಿ.ವೆಂಕಟೇಶಮೂರ್ತಿ ಹೇಳಿದರು.

‘ಸಿಐಐಎಲ್‌ ಕೇಂದ್ರ ಸರ್ಕಾರದ ಒಂದು ಅಂಗಸಂಸ್ಥೆ. ಆದ್ದರಿಂದ ನಮ್ಮ ಚೌಕಟ್ಟು ಮೀರಿ ಯಾವುದೇ ಬೇಡಿಕೆ ಇಡಲು ಆಗುವುದಿಲ್ಲ. ಸರ್ಕಾರ ನಮಗೆ ನೀಡುವ ಹುದ್ದೆಗಳಿಗೆ ಅನುಗುಣವಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಿಐಐಎಲ್‌ನಲ್ಲಿ 100ಕ್ಕೂ ಅಧಿಕ ಭಾಷಾತಜ್ಞರು ಇದ್ದರು. ಈಗ ಆ ಸಂಖ್ಯೆ 10ಕ್ಕೆ ಇಳಿದಿದೆ. ಹುದ್ದೆಗಳು ಖಾಲಿಯಿದ್ದರೂ ಸಂಸ್ಥೆ ಚಟುವಟಿಕೆ, ಸಂಶೋಧನಾ ಕೆಲಸಗಳಿಗೆ ಯಾವುದೇ ಹಿನ್ನಡೆಯಾಗದಂತೆ ನೋಡಿ ಕೊಳ್ಳು ತ್ತಿದ್ದೇವೆ. ಈಗ ಇರುವವರು ಹೆಚ್ಚುವರಿ ಕೆಲಸ ಮಾಡುತ್ತಿದ್ದಾರೆ’ ಎಂದರು.

‘ಕೆಲವು ಹುದ್ದೆಗಳು ಯುಪಿಎಸ್‌ಸಿ ಮೂಲಕ ನೇಮಕ ಆಗಬೇಕು. ಯುಪಿಎಸ್‌ಸಿಯಿಂದ ನಡೆಯುವ ನೇಮಕಾತಿಗೆ ಹೆಚ್ಚಿನ ಸಮಯಾವಕಾಶ ಬೇಕು. ಆದ್ದರಿಂದ ನೇಮಕಾತಿ ನಮ್ಮ ಕೈಯಲ್ಲಿ ಇಲ್ಲ. ಆದರೂ ಸಂಬಂಧಪಟ್ಟ ಇಲಾಖೆಗೆ ಮತ್ತೆ ಮತ್ತೆ ಪತ್ರ ಬರೆಯುತ್ತಿದ್ದೇವೆ’ ಎಂದು ತಿಳಿಸಿದರು.

ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಬಿ.ಶಿವರಾಮ ಶೆಟ್ಟಿ ಮಾತನಾಡಿ, ‘ಕೇಂದ್ರದ ವತಿಯಿಂದ ಇದುವರೆಗೆ ಆಗಿರುವ ಕೆಲಸಗಳ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕುತ್ತಿದ್ದೇನೆ. ಈಗಾಗಲೇ ಏಳು ಪುಸ್ತಕಗಳನ್ನು ಪ್ರಕಟಿಸಲಾಗಿದೆ’ ಎಂದು ಹೇಳಿದರು.

ಶಾಸ್ತ್ರೀಯ ಕನ್ನಡದ ಜಾಲತಾಣ ಆರಂಭಿಸಿ ಅದಕ್ಕೆ ಕಿಟೆಲ್‌ ನಿಘಂಟುವನ್ನು ಅಪ್‌ಲೋಡ್‌ ಮಾಡಲಾಗಿದೆ. ಆಂಡಯ್ಯ ಕವಿಯ ‘ಕಬ್ಬಿಗರ ಕಾವ’ ಕೃತಿಯನ್ನು ಇಗ್ಲಿಷ್‌ಗೆ ಅನುವಾದ ಮಾಡಲಾಗಿದೆ. ‘ವಡ್ಡಾರಾಧನೆ’ ಬಗ್ಗೆ ಬಂದಿರುವ ಸಂಶೋಧನಾ ಲೇಖನ ಗಳನ್ನು ಸಂಗ್ರಹಿಸಿ ಸಂಪುಟದ ರೂಪ ದಲ್ಲಿ ಸಿದ್ಧಪಡಿಸಲಾಗಿದೆ ಎಂದರು.

ಸಿಇಎಸ್‌ಸಿಕೆ ಸ್ಥಳಾಂತರ ನಾಳೆ

ಸಿಐಐಎಲ್‌ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು (ಸಿಇಎಸ್‌ಸಿಕೆ) ನ.1 ರಂದು ಮಾನಸಗಂಗೋತ್ರಿ ಆವರಣದಲ್ಲಿರುವ ಎನ್‌ಸಿಎಚ್‌ಎಸ್‌ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ.

‘ಸಿಇಎಸ್‌ಸಿಕೆ ಕೋರಿಕೆ ಪರಿಗಣಿಸಿರುವ ಮೈಸೂರು ವಿಶ್ವವಿದ್ಯಾಲಯವು ಗಾಂಧಿ ಭವನದ ಪಕ್ಕದಲ್ಲಿರುವ ಎನ್‌ಸಿಎಚ್‌ಎಸ್‌ ಆವರಣದಲ್ಲಿ ತಾತ್ಕಾಲಿಕವಾಗಿ ಸೌಲಭ್ಯ ಒದಗಿಸಿದೆ. ಅಧ್ಯಯನ ಕೇಂದ್ರವು ಸ್ವಾಯತ್ತತೆ ಪಡೆಯಬೇಕಾದರೆ ಸ್ವತಂತ್ರ ಅಸ್ತಿತ್ವ ಹೊಂದಿರಬೇಕು. ಈ ಹಿನ್ನೆಲೆಯಲ್ಲಿ ಹೆಚ್ಚು ಸ್ಥಳಾವಕಾಶವಿರುವ ಕಟ್ಟಡಕ್ಕೆ ಸ್ಥಳಾಂತರವಾಗುತ್ತಿದೆ’ ಎಂದು ಸಿ.ಜಿ.ವೆಂಕಟೇಶಮೂರ್ತಿ ತಿಳಿಸಿದರು.

‘ನ.1 ರಂದು ಮಧ್ಯಾಹ್ನ 2 ಗಂಟೆಗೆ ಸಮಾರಂಭ ಆಯೋಜಿಸಲಾಗಿದೆ. ಸಾಹಿತಿ ಪ್ರೊ.ಚಂದ್ರಶೇಖರ ಕಂಬಾರ, ಮೈಸೂರು ವಿ.ವಿ ಕುಲಸಚಿವ ಪ್ರೊ.ಜಿ.ಹೇಮಂತಕುಮಾರ್, ಕೇಂದ್ರ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆ ಉಪಕಾರ್ಯದರ್ಶಿ ಸುಮನ್‌ ದೀಕ್ಷಿತ್‌ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ವರ್ಚುವಲ್‌ ವೇದಿಕೆಯಲ್ಲಿ ನಡೆಯಲಿದೆ' ಎಂದು ಮಾಹಿತಿ ನೀಡಿದರು.

https://www.facebook.com/ciilmysore/ ಲಿಂಕ್‌ ಮೂಲಕ ಕಾರ್ಯಕ್ರಮ ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT