ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲು– ಗೆಲುವಿನ ಲೆಕ್ಕಾಚಾರ ಜೋರು

ಕುತೂಹಲ ತಣಿಯಲು ಇನ್ನೊಂದು ತಿಂಗಳು ಕಾಯಬೇಕು
Last Updated 21 ಏಪ್ರಿಲ್ 2019, 20:33 IST
ಅಕ್ಷರ ಗಾತ್ರ

ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಮತದಾನ ಕೊನೆಗೊಂಡು ನಾಲ್ಕು ದಿನಗಳು ಕಳೆದಿವೆ. ಚುನಾವಣೆಯ ಕಾವು ಕಡಿಮೆಯಾಗಿದ್ದು, ಗೆಲುವು–ಸೋಲಿನ ಲೆಕ್ಕಾಚಾರ ಕಾವು ಪಡೆದುಕೊಳ್ಳುತ್ತಿದೆ.

ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ಮತ್ತು ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ನಡುವೆ ಈ ಬಾರಿ ನೇರ ಹಣಾಹಣಿ ಏರ್ಪಟ್ಟಿತ್ತು. ಇಬ್ಬರು ಕೂಡಾ ಗೆಲುವಿನ ವಿಶ್ವಾಸದಲ್ಲಿದ್ದಾರೆ. ‘ಗೆಲುವು ಖಚಿತ, ಗೆಲುವಿನ ಅಂತರವನ್ನು ಮತದಾರರು ನಿರ್ಧರಿಸಿದ್ದಾರೆ’ ಎಂದು ಇಬ್ಬರೂ ಹೇಳಿಕೊಂಡಿದ್ದಾರೆ.

ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ನಿಜಕ್ಕೂ ಕೆಲಸ ಮಾಡಿದೆಯೇ, ಜೆಡಿಎಸ್‌ನ ಮತಗಳಲ್ಲಿ ಎಷ್ಟು ಬಿಜೆಪಿಗೆ ಬಿದ್ದಿವೆ, ಮೈತ್ರಿ ಪಕ್ಷಗಳು ಮತ್ತು ಬಿಜೆಪಿಯಲ್ಲಿನ ಅತೃಪ್ತ ನಾಯಕರ ಆಂತರಿಕ ಒಳಪೆಟ್ಟು ಫಲಿತಾಂಶದ ಮೇಲೆ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಗಳು ರಾಜಕೀಯ ಪಕ್ಷಗಳ ಮುಖಂಡರು, ಬೆಂಬಲಿಗರನ್ನು ಕಾಡುತ್ತಿವೆ.

ಮಂಡ್ಯ, ಹಾಸನ ಮತ್ತು ಇತರ ಕ್ಷೇತ್ರಗಳಿಗೆ ಹೋಲಿಸಿದರೆ ಮೈಸೂರಿನಲ್ಲಿ ಚುನಾವಣೆಯ ಅಬ್ಬರ ಜೋರಾಗಿರಲಿಲ್ಲ. ಆದರೆ ಮತದಾನದ ಬಳಿಕ ಈ ಕ್ಷೇತ್ರ ಗಮನ ಸೆಳೆಯುತ್ತಿದೆ. ವಿವಿಧ ರೀತಿಯ ಲೆಕ್ಕಾಚಾರ ಹಾಕಿದರೂ ಗೆಲುವು ಯಾರಿಗೆ ಎಂದು ಊಹಿಸುವುದು ಕಷ್ಟವಾಗುತ್ತಿದೆ.

ಕೊಡಗಿನ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳು ಹಾಗೂ ಮೈಸೂರು ಜಿಲ್ಲೆಯ ಹುಣಸೂರು, ಕೃಷ್ಣರಾಜ ಮತ್ತು ಚಾಮರಾಜ ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಬಹುದು ಎಂದು ಬಿಜೆಪಿ ಲೆಕ್ಕ ಹಾಕುತ್ತಿದೆ.

ಮೈಸೂರು ನಗರದಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆದಿರುವುದರಿಂದ ತನಗೆ ಲಾಭವಾಗಬಹುದು ಎಂಬುದು ಕಾಂಗ್ರೆಸ್‌ನ ಲೆಕ್ಕಾಚಾರ

‘ಹುಣಸೂರು, ಪಿರಿಯಾಪಟ್ಟಣ, ನರಸಿಂಹರಾಜ ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ನನಗೆ ಹೆಚ್ಚಿನ ಮತಗಳು ಬರಲಿವೆ. ಕೃಷ್ಣರಾಜ ಮತ್ತು ಚಾಮರಾಜ ಕ್ಷೇತ್ರಗಳಲ್ಲಿ ಮತದಾನ ಕಡಿಮೆಯಾಗಿರುವುದು ನನಗೆ ಪೂರಕವಾಗಿದೆ’ ಎಂದು ಸಿ.ಎಚ್‌.ವಿಜಯಶಂಕರ್‌ ಹೇಳಿದ್ದಾರೆ.

ಚಾಮುಂಡೇಶ್ವರಿಯಲ್ಲಿ ಮುನ್ನಡೆ ಯಾರಿಗೆ?: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಮತದಾರರು ಯಾರಿಗೆ ಬೆಂಬಲ ನೀಡಿರಬಹುದು ಎಂಬುದು ಕುತೂಹಲಕ್ಕೆ ಎಡೆಮಾಡಿಟ್ಟಿದೆ. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಇಲ್ಲಿ ಜಂಟಿಯಾಗಿ ಪ್ರಚಾರ ಕೈಗೊಂಡಿದ್ದರೂ, ಅದು ಒಂದು ದಿನಕ್ಕೆ ಮಾತ್ರ ಸೀಮಿತವಾಗಿತ್ತು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ಮತ್ತು ಒಕ್ಕಲಿಗ ಸಮಾಜದ ಶೇ 20 ರಿಂದ 25 ರಷ್ಟು ಮತಗಳು ಮೈತ್ರಿ ಅಭ್ಯರ್ಥಿಗೆ ಬಿದ್ದಿರುವ ಸಾಧ್ಯತೆಯಿದೆ ಎಂದು ಜೆಡಿಎಸ್‌ ಪಕ್ಷದ ಸ್ಥಳೀಯ ಮುಖಂಡರೊಬ್ಬರು ಹೇಳುತ್ತಾರೆ.

ವಿಧಾನಸಭಾ ಚುನಾವಣೆಯಲ್ಲಿ ದಲಿತ ಸಮುದಾಯದ ಶೇ 60 ರಷ್ಟು ಮತಗಳು ಸಿದ್ದರಾಮಯ್ಯ ಅವರ ವಿರುದ್ಧವಾಗಿ ಬಿದ್ದಿದ್ದವು. ಆದರೆ ಈ ಬಾರಿ ಅದು ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್‌ಗೆ ಬಿದ್ದಿದೆ. ಇತರ ಹಿಂದುಳಿದ ವರ್ಗದವರ ಮತಗಳೂ ಬಿದ್ದಿರುವ ಸಾಧ್ಯತೆಯಿರುವುದರಿಂದ ಈ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಸುಮಾರು 20 ಸಾವಿರ ಮತಗಳಿಂದ ಮುನ್ನಡೆ ಪಡೆಯಬಹುದು ಎಂಬುದು ಅವರ ಅಂದಾಜು.

ಮತದಾನಕ್ಕೆ ಎರಡು ದಿನಗಳಿದ್ದಾಗ ಆಡಿಯೊವೊಂದು ವೈರಲ್‌ ಆದದ್ದು ಕೂಡಾ ಸೋಲು–ಗೆಲುವಿನ ಲೆಕ್ಕಾಚಾರದ ಚರ್ಚೆಯಲ್ಲಿ ಸ್ಥಾನ ಗಳಿಸಿದೆ. ವಿವಿಧ ಪಕ್ಷಗಳ ಕಾರ್ಯಕರ್ತರು ಲೆಕ್ಕಾಚಾರದ ಮೂಲಕ ಅಲ್ಪ ಸಮಾಧಾನ ಪಟ್ಟುಕೊಳ್ಳಬಹುದೇ ಹೊರತು ಕುತೂಹಲ ತಣಿಯಲು ಮೇ 23ರ ವರೆಗೆ ಕಾಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT