ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಪ್ಪಿ ಧರಿಸುವ ಮುನ್ನ....

Last Updated 18 ಜನವರಿ 2019, 13:54 IST
ಅಕ್ಷರ ಗಾತ್ರ

ಅರಮನೆ ನಗರಿಯಲ್ಲೂ ಮಂಜಿನ ನಗರಿಯ ಅನುಭವವಾಗುತ್ತಿದೆ. ಮುಂಜಾನೆ ಚಳಿಯ ಮಧ್ಯೆ ಎದ್ದು ವಾಕಿಂಗ್ ಹೋಗುವುದು ಕೊಂಚ ಕಷ್ಟವಾಗುತ್ತಿದೆ ಎಂಬ ಮಾತೂ ಕೆಲವು ದಿನ ಅನುರಣಿಸಿದ್ದು ನಿಜ. ಇಂಥ ಸಂದರ್ಭದಲ್ಲಿ ಬೆಳಗ್ಗಿನ ವಾಯುವಿಹಾರಕ್ಕೆ ಹೋಗಲೇಬೇಕಾದವರು ಮೈ ಬೆಚ್ಚಗೆ ಮಾಡಲು ವಿವಿಧ ಉಪಾಯಗಳನ್ನು, ದಿರಿಸುಗಳನ್ನು ಧರಿಸಲೇಬೇಕಾಗುತ್ತದೆ. ಈ ಪೈಕಿ ಟೋಪಿಗಳೂ ಮುಖ್ಯವಾದವುಗಳು.

ಚಳಿಗಾಳಿ ತಲೆಗೆ ಸೋಕದಂತೆ ರಕ್ಷಿಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಬಲು ಮುಖ್ಯ. ಅದಕ್ಕಾಗಿ ಟೋಪಿ ಅತಿ ಅಗತ್ಯ. ಇದು ಒಂದು ರೀತಿಯಲ್ಲಿ ದೇಹಕ್ಕೆ ರಕ್ಷಣೆಯಾದರೆ ಮತ್ತೊಂದು ದೃಷ್ಟಿಯಲ್ಲಿ ಫ್ಯಾಷನ್‌ ಆಗಿಯೂ ಬಳಕೆಯಾಗುತ್ತಿದೆ.

ತಲೆಗೆ ರಕ್ಷಣೆ ನೀಡುವ ಯಾವುದಾದರೂ ಟೋಪಿ ಸಾಕು ಎಂದು ಭಾವಿಸಿದರೆ ಸಾಲದು. ಅದು ನಮ್ಮ ವ್ಯಕ್ತಿತ್ವಕ್ಕೆ ಒಪ್ಪುವಂತದ್ದೂ, ದೇಹಕ್ಕೆ ಮೆರುಗು ನೀಡುವಂಥದ್ದೂ ಆಗಿದ್ದರೆ ಬಲು ಚೆನ್ನ. ಇಂಥ ಟೊಪ್ಪಿಗಳ ಆಯ್ಕೆಯೂ ಒಂದು ಸವಾಲೇ ಸರಿ. ಇಂಥ ಆಕರ್ಷಕ ಟೊಪ್ಪಿಗಳ ಮಾದರಿಗಳ ಪರಿಚಯ ಇಲ್ಲಿದೆ...

ವೃತ್ತಾಕಾರದ ಟೊಪ್ಪಿಗಳು: ಇವು ಸರಳವಾಗಿದ್ದು, ಧರಿಸಲೂ ಸುಲಭ. ಇಂಥ ಕ್ಯಾಪ್‌ಗಳನ್ನು ಬೆನ್ನಿನ ಕಡೆಗೂ, ಹಣೆಯ ಕಡೆಗೂ ವಾಲಿಸಿ ಧರಿಸಲು ಅವಕಾಶ ಇದೆ.

ಬೀನಿ ಕ್ಯಾಪ್‌ಗಳು ಆಕರ್ಷಕ ಟೋಪಿಗಳಾಗಿದ್ದು, ತೆಳುವಾದ ಜರ್ಸಿಯಿಂದ ತಯಾರಿಸಿರುವಂಥವು. ಇವುಗಳು ತಲೆಯಲ್ಲಿ ಬಿಗಿಯಾಗಿ ಕುಳಿತಿರುತ್ತವೆ.

ನಿಟ್ಟೆಡ್‌ ಕ್ಯಾಪ್‌ಗಳು: ಅಗ್ಗವಾಗಿರುವ ಇಂಥ ಟೋಪಿಗಳು ಧರಿಸಲೂ ಅನುಕೂಲಕರವಾಗಿದ್ದು, ಇವುಗಳ ರಕ್ಷಣೆಗೆ ಹೆಚ್ಚು ಕಾಳಜಿಯೂ ಬೇಕಿಲ್ಲ. ಇವುಗಳ ಆಕಾರ ಮತ್ತು ವಿನ್ಯಾಸ ಆಟದ ದಿರಿಸುಗಳಿಗೂ, ದೇಹಕ್ಕೂ ಚೆನ್ನಾಗಿ ಒಪ್ಪುತ್ತದೆ.

ತುಪ್ಪಳದ ಟೋಪಿಗಳು: ಚಳಿಗಾಲಕ್ಕೆ ಹೇಳಿ ಮಾಡಿಸಿದ ಇಂಥ ಟೊಪ್ಪಿಗಳು ಕಿವಿಯ ಮೂಲಕ ಗಾಳಿ ಪ್ರವೇಶಿಸದಂತೆ ರಕ್ಷಿಸುತ್ತವೆ. ತಲೆ, ಕಿವಿಯ ಭಾಗವನ್ನು ಬೆಚ್ಚಗಿರಿಸಿ ಚಳಿಯ ಅನುಭವ ಆಗದಂತೆ ನೋಡಿಕೊಳ್ಳುತ್ತವೆ.

ಚಳಿಗಾಲದಲ್ಲಂತೂ ತುಪ್ಪಳದ ಉತ್ಪನ್ನಗಳಿಗೆ ಬಲು ಬೇಡಿಕೆ. ತುಪ್ಪಳದ ಕೋಟುಗಳು, ಕೈಗವಸುಗಳು ಹೆಚ್ಚು ಬಿಕರಿಯಾಗುತ್ತವೆ. ತುಪ್ಪಳದ ದಿರಿಸುಗಳು ಫ್ಯಾಷನ್‌ ಲೋಕದಲ್ಲಿ ಹೆಚ್ಚು ಪ್ರಚಲಿತಗೊಳ್ಳುತ್ತಿದ್ದು, ಬಗೆ ಬಗೆ ವಿನ್ಯಾಸಗಳಲ್ಲೂ ಲಭ್ಯವಿರುತ್ತವೆ. ಇತ್ತೀಚಿನ ದಿನಗಳಲ್ಲಿ ಫ್ಯಾಷನ್‌ ವಿನ್ಯಾಸಕರೂ ಇಂಥ ಉತ್ಪನ್ನಗಳಲ್ಲಿ ಹೊಸ ಹೊಸ ಮಾದರಿಗಳನ್ನೂ ರೂಪಿಸುತ್ತಿದ್ದಾರೆ.

ಆಕರ್ಷಕ ಸ್ಲೋಗನ್‌ಗಳಿರುವ ಟೋಪಿಗಳು
ಇತ್ತೀಚಿನ ದಿನಗಳಲ್ಲಿ ಉಡುಪುಗಳಲ್ಲಿ ಯವುದಾದರೂ ಒಂದು ಆಕರ್ಷಕ ಬರಹ ಇರಬೇಕು ಎಂದು ಅಪೇಕ್ಷೆ ಪಡುವ ಅನೇಕ ಯುವ ಮನಸ್ಸುಗಳನ್ನು ನಾವು ಕಾಣುತ್ತೇವೆ. ಅದು ಟಿ–ಶರ್ಟ್‌ ಇರಲಿ, ಶರ್ಟ್‌ ಆಗಲಿ. ಇತ್ತೀಚಿನ ದಿನಗಳಲ್ಲಿ ಟೋಪಿಗಳ ಮೇಲೂ ವಿಶಿಷ್ಟವಾದ ಬರಹಗಳತ್ತ ಯುವ ಸಮೂಹ ಒಲವು ತೋರುತ್ತಿದೆ. ಅದಕ್ಕೆ ಪೂರಕವಾಗಿ ಕಂಪನಿಗಳೂ ಟೋಪಿಗಳಲ್ಲಿ ಆಕರ್ಷಕವಾದ ಬರಹಗಳನ್ನು ಮೂಡಿಸುತ್ತಿವೆ. ಆ ಮೂಲಕ ಯುವ ಮನಸ್ಸುಗಳನ್ನು ಸೆಳೆಯಲು ತೊಡಗಿವೆ.

ಸ್ಟ್ರಿಪ್ಡ್‌ ಕ್ಯಾಪ್‌: ಇಂಥ ಟೋಪಿಗಳು ಮಹಿಳೆಯರಿಗೆ ಹಾಗೂ ಪುರುಷರಿಗೆ ಇಷ್ಟವಾಗುವ ವಿನ್ಯಾಸದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ವಿವಿಧ ಲಾಂಛನಗಳ ಟೋಪಿಗಳು: ವಿವಿಧ ಲಾಂಛನಗಳನ್ನು ಇಷ್ಟಪಡುವ ಯುವ ಸಮೂಹವನ್ನು ನಾವು ಕಾಣುತ್ತೇವೆ. ಯುವಜನತೆಯ ಆಸಕ್ತಿಗೆ ಪೂರಕವಾಗಿ ಕಂಪನಿಗಳೂ ವಿವಿಧ, ಆಕರ್ಷಕ ಹಾಗೂ ಜನಪ್ರಿಯ ಲೋಗೊಗಳನ್ನೂ ಟೋಪಿಗಳಲ್ಲಿ ಚಿತ್ರಿಸುತ್ತಿವೆ.

ಡೆನಿಮ್‌ ಕ್ಯಾಪ್‌ಗಳು: ಜೀನ್ಸ್ ಇಲ್ಲದ ಉಡುಪುಗಳನ್ನು ಇಂದು ಕಲ್ಪಿಸಿಕೊಳ್ಳಲೂ ಅಸಾಧ್ಯವಾದ ಸ್ಥಿತಿ ಇದೆ. ಬಹುತೇಕ ಎಲ್ಲ ಬಟ್ಟೆಗಳೂ ಜೀನ್ಸ್ ಮಾದರಿಯಲ್ಲಿ ಲಭ್ಯವಿವೆ. ಅದೇ ರೀತಿ ಕ್ಯಾಪ್‌ಗಳ ಲೋಕವನ್ನೂ ಜೀನ್ಸ್‌ ಪ್ರವೇಶಿಸಿದ್ದು, ವಿವಿಧ ವಿನ್ಯಾಸದ ಟೋಪಿಗಳು ಲಭ್ಯವಿವೆ.

ಮಕ್ಕಳಿಗಾಗಿಯೇ ಮೀಸಲಾಗಿರುವ ಅನೇಕ ಮಾದರಿಯ, ಆಕರ್ಷಕ ಟೊಪ್ಪಿಗಳು ಮನಸೆಳೆಯುತ್ತವೆ. ವಿವಿಧ ಪ್ರಾಣಿ, ಪಕ್ಷಿಗಳ ಮುಖವಾಡದ ಮಾದರಿಯ ಟೊಪ್ಪಿಗಳಂತೂ ಚಿಣ್ಣರ ಮನಸೂರೆಗೊಳ್ಳುತ್ತವೆ.

ಇಂಥ ಆಕರ್ಷಕ ಟೊಪ್ಪಿಗಳು ದೇಹದ ರಕ್ಷಣೆಯ ಜತೆಗೆ ಫ್ಯಾಷನ್‌ ಆಗಿಯೂ ಬಳಕೆಯಾಗುತ್ತಿವೆ. ಆದರೆ, ನಮಗೆ ಒಪ್ಪುವ ಮಾದರಿಯ ಟೊಪ್ಪಿಗಳನ್ನು ಆಯ್ಕೆ ಮಾಡಲು ಕೊಂಚ ಸಮಯ ವಿನಿಯೋಗಿಸಬೇಕಷ್ಟೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT