ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತ್ಯ ಕಂಡ ಒಡೆಯರ್ ರಾಜಕೀಯ ಜೀವನ

2004ರಲ್ಲಿ ಮತ್ತೆ ಅರಳಿದ ಕಮಲ, 2ನೇ ಸ್ಥಾನಕ್ಕೆ ಜಿಗಿದ ಜೆಡಿಎಸ್‌
Last Updated 3 ಮೇ 2019, 18:06 IST
ಅಕ್ಷರ ಗಾತ್ರ

ಮೈಸೂರು: 2004ರಲ್ಲಿ ನಡೆದ 14ನೇ ಲೋಕಸಭಾ ಚುನಾವಣೆ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ರಾಜಕೀಯ ಜೀವನವನ್ನು ಅಂತ್ಯಗೊಳಿಸಿತು. 4 ಬಾರಿ ಸಂಸದರಾಗಿ ಆಯ್ಕೆಯಾದ ದಾಖಲೆ ನಿರ್ಮಿಸಿದ ಇವರನ್ನು ಕ್ಷೇತ್ರದ ಜನರು ಈ ಚುನಾವಣೆಯಲ್ಲಿ ತಿರಸ್ಕರಿಸಿದರು. ಇಷ್ಟು ಬಾರಿ ಆಯ್ಕೆಯಾದರೂ ಅವರಿಗೆ ಸಚಿವರಾಗುವ ಅದೃಷ್ಟ ಲಭಿಸದೇ ಹೋದುದು ತೀವ್ರ ನಿರಾಸೆಗೂ ಕಾರಣವಾಯಿತು.

1999ರ ನಂತರ 2004ರವರೆಗೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇತ್ತು. ‘ಭಾರತ ಪ್ರಕಾಶಿಸುತ್ತಿದೆ’ ಎಂಬ ಧ್ಯೇಯ ವಾಕ್ಯದಡಿ ನಿಗದಿತ ಅವಧಿಗೆ ತುಸು ಮುನ್ನವೇ ಲೋಕಸಭೆಯನ್ನು ವಿಸರ್ಜಿಸಿ ಬಿಜೆಪಿ ಚುನಾವಣೆಗೆ ಮುಂದಡಿ ಇಟ್ಟಿತು. ಇದಕ್ಕೆ ಆಗಷ್ಟೇ ಕೆಲವು ರಾಜ್ಯಗಳಲ್ಲಿ ಸಾಧಿಸಿದ ಅಭೂತಪೂರ್ವ ಗೆಲುವೂ ಕಾರಣವಾಗಿತ್ತು.

ಇತ್ತ ರಾಜ್ಯದಲ್ಲಿ ಪರಿಸ್ಥಿತಿ ಬೇರೆಯೆ ಇತ್ತು. ಇಲ್ಲಿ ಅಧಿಕಾರದಲ್ಲಿದ್ದ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ಸತತವಾಗಿ ಕಾಡಿದ ಬರಗಾಲ, ನಟ ರಾಜಕುಮಾರ ಅಪಹರಣ ಸೇರಿದಂತೆ ಹಲವು ಸಮಸ್ಯೆಗಳು ಇನ್ನಿಲ್ಲದಂತೆ ಬಾಧಿಸಿದವು. ಇದರ ಜತೆಜತೆಗೆ ಆಡಳಿತ ವಿರೋಧಿ ಅಲೆಯೂ ಇಲ್ಲಿ ಕಾಂಗ್ರೆಸ್ ವಿರುದ್ಧ ಇತ್ತು.

ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ವಿರುದ್ಧ ದೇಶದಲ್ಲಿ ಅಲೆ ಇತ್ತು. ಒಂದಕ್ಕೂ ಮತ್ತೊಂದಕ್ಕೂ ವ್ಯತಿರಿಕ್ತವಾದ ಅಲೆಗಳಿದ್ದುದ್ದರಿಂದ ಮತ್ತೆ ಕ್ಷೇತ್ರದ ಮತದಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಪಕ್ಷವನ್ನು ತಿರಸ್ಕರಿಸಿದ. ಕಳೆದ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಆದರೆ, ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಇಲ್ಲಿ ಬಿಜೆಪಿಯ ಅಭ್ಯರ್ಥಿ ಆಯ್ಕೆಯಾದರು.

ಕಾಂಗ್ರೆಸ್‌ಗೆ ರಾಜ್ಯದಲ್ಲಿದ್ದ ಆಡಳಿತ ವಿರೋಧಿ ಅಲೆಯ ಜತೆಗೆ ಶಾಸಕ ಎ.ಎಸ್.ಗುರುಸ್ವಾಮಿ ಪಕ್ಷ ತ್ಯಜಿಸಿ ಜೆಡಿಎಸ್‌ಗೆ ಸೇರಿದ್ದು ಗೆಲುವಿಗೆ ಬಹುದೊಡ್ಡ ತೊಡಕಾಯಿತು. ಇವರಿಗೆ ಜೆಡಿಎಸ್ ಟಿಕೆಟ್ ನೀಡಿತು. ಬಿಜೆಪಿಯಿಂದ ಸಿ.ಎಚ್.ವಿಜಯಶಂಕರ್ ಹಾಗೂ ಕಾಂಗ್ರೆಸ್‌ನಿಂದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿರಾಯಸವಾಗಿ ಟಿಕೆಟ್ ಪಡೆದರು.

ತ್ರಿಕೋನ ಸ್ಪರ್ಧೆ: ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಇದ್ದ ಜನವಿರೋಧಿ ಅಲೆ ಹಾಗೂ ಗುರುಸ್ವಾಮಿ ಅವರ ಬಂಡಾಯದ ಪರಿಣಾಮಗಳನ್ನು ಮುಂಚಿತವಾಗಿ ಗ್ರಹಿಸಲಿಲ್ಲ. ಹೀಗಾಗಿ, ಅವರು ಚುನಾವಣೆಯಲ್ಲಿ ಬಹೊದೊಡ್ಡ ಬೆಲೆಯನ್ನೇ ತೆರಬೇಕಾಯಿತು.

ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಕಾಂಗ್ರೆಸ್ ಹೇಳಿದರೆ, ರಾಜ್ಯದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಬಿಜೆಪಿ ಹೇಳಿತು. ಆದರೆ, ಜೆಡಿಎಸ್ ಈ ಎರಡೂ ಪಕ್ಷಗಳ ವೈಫಲ್ಯಗಳನ್ನು ಹೇಳುವ ಮೂಲಕ ಚಾಣಾಕ್ಷತೆ ಮೆರೆಯಿತು.

ಇದರ ಪರಿಣಾಮವಾಗಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ತೃತೀಯ ಸ್ಥಾನ ಗಳಿಸುವ ಮೂಲಕ ಸಂಪೂರ್ಣ ನೆಲಕಚ್ಚಿದರು. ತೀವ್ರ ಸ್ಪರ್ಧೆ ಒಡ್ಡಿದ ಜೆಡಿಎಸ್‌ನ ಗುರುಸ್ವಾಮಿ 2ನೇ ಸ್ಥಾನ ಗಳಿಸಿದರು. ಬಿಜೆಪಿಯ ವಿಜಯಶಂಕರ್ 2ನೇ ಬಾರಿಗೆ ಗೆಲುವಿನ ನಗೆ ಬೀರಿದರು. ಈ ಚುನಾವಣೆಯಲ್ಲಿ ಬಿಜೆಪಿಗೂ ಜೆಡಿಎಸ್‌ಗೂ ಅಂತರ ಕೇವಲ 10,150 ಮಾತ್ರವೇ ಇತ್ತು. ಇದು ಜೆಡಿಎಸ್‌ನ ಸಾಮರ್ಥ್ಯವನ್ನು ಸಾಬೀತುಪಡಿಸಿತು.

ಅಭ್ಯರ್ಥಿಯ ಹೆಸರು; ಪಕ್ಷ; ಪಡೆದ ಮತಗಳ ಸಂಖ್ಯೆ;

ಸಿ.ಎಚ್.ವಿಜಯಶಂಕರ್; ಬಿಜೆಪಿ; 3,16,442;

ಎ.ಎಸ್.ಗುರುಸ್ವಾಮಿ; ಜೆಡಿಎಸ್; 3,06,292

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್; ಕಾಂಗ್ರೆಸ್; 2,99,227

‌ಕಲಿಮುಲ್ಲಾಖಾನ್; ಕೆ.ಎನ್.ಡಿ.ಪಿ.; 16,349

ಪಿ.ಎನ್.ಶ್ರೀನಾಥ್; ಪಕ್ಷೇತರ; 18,957

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT