ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಿಳಾ ಸಬಲೀಕರಣಕ್ಕೆ ಮನಸ್ಥಿತಿ ಬದಲಾಗಲಿ’

ಭಾರತದಲ್ಲಿ ಮಹಿಳಾ ಸಬಲೀಕರಣ ಮತ್ತು ಆರ್ಥಿಕ ಅಭಿವೃದ್ಧಿ ಕುರಿತ ವಿಚಾರ ಸಂಕಿರಣದಲ್ಲಿ ಕೆ.ರತ್ನಪ್ರಭಾ ಅಭಿಮತ
Last Updated 11 ಅಕ್ಟೋಬರ್ 2019, 15:42 IST
ಅಕ್ಷರ ಗಾತ್ರ

ಮೈಸೂರು: ‘ಮಹಿಳಾ ಸಬಲೀಕರಣದ ಯಶಸ್ಸಿಗೆ ಹುಡುಗರ ಮನಸ್ಥಿತಿ ಬದಲಾಗಬೇಕಿದೆ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಕೆ.ರತ್ನಪ್ರಭಾ ಅಭಿಪ್ರಾಯಪಟ್ಟರು.

ನಗರದ ಕೆ.ಪುಟ್ಟಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಸಾಹುಕಾರ್ ಚೆನ್ನಯ್ಯ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಭಾರತದಲ್ಲಿ ಮಹಿಳಾ ಸಬಲೀಕರಣ ಮತ್ತು ಆರ್ಥಿಕ ಅಭಿವೃದ್ಧಿ' ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಪದ್ಧತಿ ಮೂಲಕವೇ ಎಲ್ಲವೂ ಬದಲಾಗಬೇಕಿದೆ ಎಂದು ಹೇಳಿದರು.

‘ಅಮ್ಮ–ಅಕ್ಕ ತಂಗಿಯರ ಮೇಲಿನ ಪ್ರೀತಿಯನ್ನೇ ಎಲ್ಲ ಮಹಿಳೆಯರು, ಯುವತಿಯರ ಮೇಲೆ ಹುಡುಗರು ತೋರಿಸಬೇಕು. ದುಡಿಯೋ ಮಹಿಳೆಯರಿಗೂ ಇಂದಿಗೂ ದೌರ್ಜನ್ಯ ತಪ್ಪಿಲ್ಲ. ದುಡಿಮೆಯ ಖರ್ಚಿನ ಸ್ವಾತಂತ್ರ್ಯ, ಮಕ್ಕಳನ್ನು ಪಡೆಯುವ ಸ್ವಾತಂತ್ರ್ಯ, ಸುರಕ್ಷತೆ ಮೂಲಕ ಮಹಿಳಾ ಸಬಲೀಕರಣವಾಗಬೇಕಿದೆ’ ಎಂದು ರತ್ನಪ್ರಭಾ ಹೇಳಿದರು.

ನಿರ್ಧಾರದಲ್ಲೂ ಮಹತ್ವದ ಪಾತ್ರ:

‘ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭವೂ ಸಹ ಮಹಿಳೆಯ ಅಭಿಪ್ರಾಯಕ್ಕೆ ಮನ್ನಣೆ ನೀಡಿದಾಗ ಮಾತ್ರ ಸಬಲೀಕರಣದ ವ್ಯಾಖ್ಯಾನಕ್ಕೆ ಅರ್ಥ ಸಿಗಲಿದೆ’ ಎಂದು ರತ್ನಪ್ರಭಾ ತಿಳಿಸಿದರು.

‘ಮಹಿಳಾ ನಾಯಕಿಯರು ಲೋಕಸಭೆ, ವಿಧಾನಸಭೆಗಳಲ್ಲಿ ಹೆಚ್ಚಬೇಕು. ಪಕ್ಷಗಳಲ್ಲಿ ಶೇ 50ರಷ್ಟು ಆದ್ಯತೆ ಪಡೆದುಕೊಳ್ಳಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಚುಕ್ಕಾಣಿ ಹಿಡಿಯುವುದಕ್ಕೆ ಸೀಮಿತರಾಗದೆ, ಇನ್ನಿತರ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಮುಂದಾಗಬೇಕು. ಮುಖ್ಯಮಂತ್ರಿ ಸಹ ಇದಕ್ಕೆ ಪೂರಕವಾಗಿ ಖಾತೆ ನೀಡಬೇಕು’ ಎಂದು ಹೇಳಿದರು.

‘ಪತಿ ಅಥವಾ ತಂದೆ ಸತ್ತಾಗ ರಾಜಕೀಯ ಪ್ರವೇಶಿಸುವ ಮಹಿಳಾ ನಾಯಕಿಯರೇ ಹೆಚ್ಚಿದ್ದಾರೆ. ವಿಧಾನಸಭೆ–ಲೋಕಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ 9ರಿಂದ 11ರಷ್ಟಿದೆ. ಅಭಿವೃದ್ಧಿ ಹೊಂದಿದ ಕರ್ನಾಟಕದಲ್ಲೂ ಸಹ ಈ ಸಂಖ್ಯೆ ಸಾಕಷ್ಟು ಕೊರತೆಯಿದೆ. ಆದರೆ ಐಎಎಸ್‌, ಐಪಿಎಸ್‌ ಅಧಿಕಾರಿಗಳ ಸಂಖ್ಯೆ ಶೇ 25ರಿಂದ 30ರಷ್ಟಿರುವುದು ಆಶಾದಾಯಕ’ ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕಿ ಡಾ.ಆರ್.ಇಂದಿರಾ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ.ಆರ್.ಮೂಗೇಶಪ್ಪ, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಜಿ ಶ್ರೀಶೈಲ ರಾಮನ್ನವರ, ಪ್ರಾಂಶುಪಾಲ ಡಾ.ಎಂ.ಶಿವಲಿಂಗೇಗೌಡ ಉಪಸ್ಥಿತರಿದ್ದರು.

ಲಿಂಗ ಸಮಾನತೆ ಜಗತ್ತಿನ ಸಮಸ್ಯೆ

‘ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ ಕಿರುಕುಳ ಇಂದಿಗೂ ಜೀವಂತವಿದೆ. ಲಿಂಗ ಸಮಾನತೆ ಎಂಬುದು ಜಗತ್ತಿನ ಸಮಸ್ಯೆಯಾಗಿದೆ’ ಎಂದು ಯೋಜನೆ, ಕಾರ್ಯಕ್ರಮ ನಿರ್ವಹಣೆ ಹಾಗೂ ಅಂಕಿ–ಸಂಖ್ಯೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಬೇಸರ ವ್ಯಕ್ತಪಡಿಸಿದರು.

ವಿಚಾರ ಸಂಕಿರಣದಲ್ಲಿ ಭಾಗಿಯಾಗಿದ್ದ ಕಾಲೇಜಿನ ಹುಡುಗ–ಹುಡುಗಿಯರೊಂದಿಗೆ ಸಂವಾದ ನಡೆಸುವ ಮೂಲಕವೇ ಹಲ ವಿಷಯ ಪ್ರಸ್ತಾಪಿಸಿದ ಶಾಲಿನಿ, ವರದಕ್ಷಿಣೆ ವಿರುದ್ಧ ಜಾಗೃತಿ ಮೂಡಿಸಿದರು.

ಆರ್ಥಿಕ ಅಭಿವೃದ್ಧಿಗಾಗಿ ಲಿಂಗ ಸಮಾನತೆ ಬೇಕಿದೆ ಎಂದು ಪ್ರತಿಪಾದಿಸಿದ ಹಿರಿಯ ಐಎಎಸ್ ಅಧಿಕಾರಿಣಿ, ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಅನುಷ್ಠಾನಗೊಂಡ ಬಳಿಕ ಹೆಣ್ಣು ಮಕ್ಕಳ ಜನನದ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಹೇಳಿದರು.

ವಾಸ್ತವವೇ ಬೇರೆ

‘ಸಬಲೀಕರಣ, ಸಮಾನತೆ ಎಂಬುದು ಮಾತಿಗಷ್ಟೇ ಸೀಮಿತವಾಗಿದೆ. ವಾಸ್ತವವೇ ಬೇರೆ ಇದೆ. ಹೆಣ್ಣು ಮುಂದೆ ಬರುವುದು ಇಂದಿಗೂ ಸರಳ ಮಾತಲ್ಲ’ ಎಂದು ಕೃಷಿ ಸಾಧಕಿ ಕವಿತಾ ಮಿಶ್ರ ತಿಳಿಸಿದರು.

ತಮ್ಮ ಬದುಕಿನ ಏಳು–ಬೀಳಿನ ಯಶೋಗಾಥೆ ಬಿಟ್ಟಿಟ್ಟ ಕವಿತಾ, ಯುವ ಸಮೂಹಕ್ಕೆ ಸ್ಫೂರ್ತಿಯ ಮಾತುಗಳನ್ನು ಹೇಳಿದರು. ಚಪ್ಪಾಳೆ ತಟ್ಟೋದ್ ಬಿಡಿ. ನನ್ನ ಮಾತಿಗೆ ಕಿವಿಗೊಡಿ ಎಂದು ತಮ್ಮ ಕಲ್ಯಾಣ ಕರ್ನಾಟಕದ ಅಪ್ಪಟ ಜವಾರಿ ಭಾಷೆಯಲ್ಲಿ ಕಿವಿಮಾತು ಹೇಳಿದರು.

‘ಹೆಣ್ಣೆಂಬ ಹೆಮ್ಮೆ ನನ್ನದು. ಕುಟುಂಬದ ಆರ್ಥಿಕ ಸದೃಢತೆಗಾಗಿ ನೀವೂ ಸಹ ದುಡಿಯಬೇಕು. ಪ್ರತಿಯೊಂದನ್ನು ಸವಾಲಾಗಿ ಸ್ವೀಕರಿಸಿ. ಗುರಿ ಮುಟ್ಟುವತ್ತ ತಮ್ಮ ಚಿತ್ತ ಹರಿಸಿ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT