ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನ ಮಹಿಳಾ ಶಕ್ತಿ

ಮಹಿಳಾ ದಿನಾಚರಣೆ ವಿಶೇಷ...
Last Updated 8 ಮಾರ್ಚ್ 2020, 10:06 IST
ಅಕ್ಷರ ಗಾತ್ರ

ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ. ಸರ್ಕಾರಿ ಅಧಿಕಾರಿಯಾಗಿ, ಜನಪ್ರತಿನಿಧಿಯಾಗಿ ಮೈಸೂರಿನಲ್ಲಿ ವಿವಿಧ ಹುದ್ದೆಯಲ್ಲಿರುವ ಮಹಿಳೆಯರ ಕುರಿತ ವಿವರ, ಅವರು ನೀಡಿರುವ ಮಹಿಳಾ ದಿನದ ಸಂದೇಶ ಇಲ್ಲಿದೆ.


ಜಿಲ್ಲಾ ಪಂಚಾಯಿತಿಯಲ್ಲಿ ‘ತ್ರಿಶಕ್ತಿ’

ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಈಗ ಮಹಿಳೆಯರದ್ದೇ ಶಕ್ತಿ ಇದೆ. ಸಿಇಒ, ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ ಸ್ಥಾನಗಳಲ್ಲಿ ಮಹಿಳೆಯರು ಇದ್ದಾರೆ.

ಕೆ.ಜ್ಯೋತಿ ಅವರು 2018ರ ಆಗಸ್ಟ್‌ನಿಂದ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಕೆಲಸ ಮಾಡುತ್ತಿದ್ದಾರೆ. ಅದನ್ನೂ ಮುನ್ನ ಅವರು ಉದ್ಯೋಗ ಮತ್ತು ತರಬೇತಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿರುವ ಬಿ.ಸಿ.ಪರಿಮಳಾ ಶ್ಯಾಂ ಅವರು ಅಂತರಸಂತೆ ಕ್ಷೇತ್ರದಿಂದ ಜೆಡಿಎಸ್‌ ಟಿಕೆಟ್‌ನಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್‌ ಅವರು ಬಿಳಿಕೆರೆ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ನಲ್ಲಿ ಸ್ಪರ್ಧಿಸಿ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿದ್ದರು.

2019 ರ ಫೆಬ್ರುವರಿಯಲ್ಲಿ ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಮೈತ್ರಿ ಆಗಿತ್ತು. ಪರಿಮಳಾ ಅವರು ಅಧ್ಯಕ್ಷರಾಗಿಯೂ, ಗೌರಮ್ಮ ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು.

***

ಸ್ವಾವಲಂಬಿಗಳಾಗೋಣ...

ಯಾವುದೇ ಹುದ್ದೆಯಲ್ಲೇ ಇರಲಿ, ಮಹಿಳೆಯರು ಸ್ವಾವಲಂಬಿಗಳಾಗಿ ಇರೋಣ ಎಂಬುದು ಮೈಸೂರು ಜಿಲ್ಲೆ ಎಎಸ್‌ಪಿ ಸ್ನೇಹಾ ಅವರು ನೀಡುವ ಮಹಿಳಾ ದಿನದ ಸಂದೇಶ.

ಉದ್ಯೋಗದ ಆಧಾರದಲ್ಲಿ ಮಹಿಳೆಯರ ನಡುವೆ ಭೇದ ಭಾವ ಸಲ್ಲದು. ಮನೆ ಕೆಲಸ ಮಾಡುವವರೇ ಇರಲಿ, ಜಿಲ್ಲಾಧಿಕಾರಿ ಅಥವಾ ಎಸ್‌ಪಿ ಹುದ್ದೆಯಲ್ಲಿರುವವರೇ ಇರಲಿ, ಎಲ್ಲ ಮಹಿಳೆಯರಿಗೂ ಅವರದ್ದೇ ಆದ ಶಕ್ತಿ, ಸಾಮರ್ಥ್ಯ ಇರುತ್ತದೆ. ಅದನ್ನು ಬಳಸಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕು ಎಂಬುದು ಅವರ ಹೇಳಿಕೆ.

ಸಮಾಜದಲ್ಲಿ ಉನ್ನತ ಹುದ್ದೆಯಲ್ಲಿರುವ ಮಹಿಳೆಯರಿಗೆ ಮಾತ್ರ ಈ ದಿನ ಮೀಸಲಾಗಿಲ್ಲ. ರಸ್ತೆ ಬದಿ ಕುಳಿತುಕೊಂಡು ಹೂ ಮಾರುವವಳಿಗೂ ಮಹಿಳಾ ದಿನ ವಿಶೇಷವಾದುದು ಎನ್ನುವರು.

ಕೆಎಸ್‌ಪಿಎಸ್‌ 2010ರ ಬ್ಯಾಚ್‌ನ ಅಧಿಕಾರಿಯಾಗಿರುವ ಸ್ನೇಹಾ ಅವರು ಮಂಡ್ಯದವರು. ಕಳೆದ ಒಂದೂವರೆ ವರ್ಷಗಳಿಂದ ಎಎಸ್‌ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

***

‘ಹೆಚ್ಚಿನ ಸಾಧನೆಗೆ ಪ್ರೇರಣೆಯಾಗಲಿ’

ಮಹಿಳಾ ದಿನ ಆಚರಿಸುವುದರಿಂದ ಮಹಿಳೆಯರಿಗೆ ತಮ್ಮ ಹಕ್ಕುಗಳು, ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡುತ್ತದೆ. ಅವರವರ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರೇರಣೆ ದೊರೆಯುತ್ತದೆ ಎಂಬುದು ಮೈಸೂರು ಡಿಸಿಪಿ (ಸಂಚಾರ ಮತ್ತು ಅಪರಾಧ) ಕವಿತಾ ಅವರ ಮಾತು.

ಮಹಿಳಾ ದಿನದ ಸಂದೇಶವು ಎಲ್ಲ ಮಹಿಳೆಯರನ್ನು ತಲುಪಿ ಅವರು ಸ್ವಾವಲಂಬಿಗಳಾಗಿ ಅವರದ್ದೇ ಆದ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ಪ್ರೇರಣೆಯಾಗಲಿ ಎಂದು ಆಶಿಸುವರು.

ಕೆಎಸ್‌ಪಿಎಸ್‌ 2010 ರ ಬ್ಯಾಚ್‌ ಅಧಿಕಾರಿಯಾಗಿರುವ ಕವಿತಾ ಅವರು ಚಿತ್ರದುರ್ಗ ಜಿಲ್ಲೆಯ ಬೊಮ್ಮೇನಹಳ್ಳಿಯವರು. ಮೈಸೂರಿನಲ್ಲಿ ಕಳೆದ ಜುಲೈನಿಂದ ಡಿಸಿಪಿಯಾಗಿ (ಸಂಚಾರ ಮತ್ತು ಅಪರಾಧ) ಕಾರ್ಯನಿರ್ವಹಿಸುತ್ತಿದ್ದಾರೆ. ಅದಕ್ಕೂ ಮುನ್ನ ಮೈಸೂರಿನಲ್ಲೇ ರಾಜ್ಯ ಗುಪ್ತಚರ ವಿಭಾಗದ ಎಸ್‌ಪಿ ಆಗಿದ್ದರು.

***

ಕಿರಿಯ ವಯಸ್ಸಿನಲ್ಲೇ ಮೇಯರ್‌ ಹುದ್ದೆ

ಮೈಸೂರಿನ ಮೇಯರ್‌ ಆಗಿ ಆಯ್ಕೆಯಾದ ಮೊದಲ ಮುಸ್ಲಿಂ ಮಹಿಳೆ ಎಂಬ ಗೌರವ ತಸ್ನೀಂ ಅವರಿಗೆ ಒಲಿದಿದೆ. ಜೆಡಿಎಸ್‌ ಪಕ್ಷದ ತಸ್ನೀಂ ಅವರು ಜ.18 ರಂದು ಮೇಯರ್‌ ಆಗಿ ಅಧಿಕಾರ ವಹಿಸಿಕೊಂಡರು.

ಕಿರಿಯ ವಯಸ್ಸಿನಲ್ಲೇ ಪಾಲಿಕೆಯ ಮೇಯರ್‌ ಸ್ಥಾನ ಅಲಂಕರಿಸಿದ್ದಾರೆ. 34 ವರ್ಷ ವಯಸ್ಸಿನ ಅವರು ಎರಡನೇ ಬಾರಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರು. 2013 ರಲ್ಲಿ ಕಾಂಗ್ರೆಸ್‌ ಟಿಕೆಟ್‌ನಲ್ಲಿ ಸ್ಪರ್ಧಿಸಿ ಗೆದ್ದಿದ್ದ ಅವರು 2018ರ ಚುನಾವಣೆಗೆ ಮುನ್ನ ಜೆಡಿಎಸ್‌ ಸೇರಿದ್ದರು.

26ನೇ ವಾರ್ಡ್‌ನಿಂದ (ಮೀನಾ ಬಜಾರ್) ಸ್ಪರ್ಧಿಸಿ ಪಾಲಿಕೆಗೆ ಆಯ್ಕೆಯಾಗಿದ್ದರು. ಹಾಲಿ ಕೌನ್ಸಿಲ್‌ನಲ್ಲಿ ಎರಡನೇ ಅವಧಿಗೆ ಮೇಯರ್‌ ಆಗಿದ್ದಾರೆ. ಬಿ.ಎ ಪದವೀಧರೆಯಾಗಿರುವ ತಸ್ನೀಂ ಅವರು ಪಾಲಿಕೆಯ ಆಡಳಿತಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

***

‘ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಿ’

ಮಹಿಳೆಯ ಸಬಲೀಕರಣ ಅಡಗಿರುವುದು ಅವರ ಶಿಕ್ಷಣದಲ್ಲಿ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದರೆ ಅವರು ಮುಂದೆ ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು. ಆ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಲು ಸಾಧ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪೂರ್ಣಿಮಾ ಹೇಳುವರು.

ಗ್ರಾಮೀಣ ಮತ್ತು ಕೆಲವು ಹಿಂದುಳಿದ ಪ್ರದೇಶಗಳಲ್ಲಿ ಹಲವು ಹೆಣ್ಣುಮಕ್ಕಳು ಅರ್ಧದಲ್ಲೇ ಶಾಲೆ ಬಿಟ್ಟಿದ್ದಾರೆ. ಅವರನ್ನು ಮತ್ತೆ ಶಾಲೆಗೆ ಸೇರಿಸಿ ಶಿಕ್ಷಣ ಮುಂದುವರಿಸಲು ಅವಕಾಶ ನೀಡಬೇಕಿದೆ. ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಈ ಬಗ್ಗೆ ಎಲ್ಲರೂ ಚಿಂತಿಸಬೇಕಿದೆ ಎಂದರು.

2004ರ ಬ್ಯಾಚ್‌ನ ಕೆಎಎಸ್‌ ಅಧಿಕಾರಿಯಾಗಿರುವ ಪೂರ್ಣಿಮಾ ಅವರು ಮಂಡ್ಯ ಜಿಲ್ಲೆಯ ಬೆಸಗರಹಳ್ಳಿಯವರು. ಮೈಸೂರು ಜಿಲ್ಲೆ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಳೆದ ಒಂಬತ್ತು ತಿಂಗಳುಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

***

ಜಗತ್ತಿನ ಅದ್ಭುತ ಸೃಷ್ಟಿ ಮಹಿಳೆ

ಮಹಿಳೆ ಎನ್ನುವುದೇ ಒಂದು ಹೆಮ್ಮೆ. ಜಗತ್ತಿನ ಅದ್ಭುತ ಸೃಷ್ಟಿಯೂ ಮಹಿಳೆ. ಮಹಿಳೆ ಮೊದಲಿನಷ್ಟು ದುರ್ಬಲಳಲ್ಲ. ಕಾಲ, ದೇಶ, ಭಾಷೆ, ಗಡಿ ದಾಟಿ ತನ್ನ ಹೆಜ್ಜೆ ಗುರುತು ಮೂಡಿಸಿದ್ದಾಳೆ. ಆದರೆ, ಆ ಹೆಜ್ಜೆ ಗುರುತುಗಳು ಅಳಿಸಿ ಹೋಗದಂತೆ ನೋಡಿಕೊಂಡು ಮುನ್ನುಗ್ಗುವುದು ನಮ್ಮೆಲ್ಲರ ಜವಾಬ್ದಾರಿ. ಆ ನಿಟ್ಟಿನಲ್ಲಿ ಮಹಿಳೆಯರನ್ನು ಗೌರವಿಸೋಣ. ಮಹಿಳಾ ದಿನಾಚರಣೆಗೊಂದು ಭಾರತ, ಕರ್ನಾಟಕ ಮಾದರಿ ದೇಶ ಮತ್ತು ರಾಜ್ಯವಾಗಲಿ ಎಂದು ಹಾರೈಸೋಣ ಎಂದು ಎಸಿಬಿ ಎಸ್‌.ಪಿ ಜೆ.ಕೆ.ರಶ್ಮಿ ಹೇಳುತ್ತಾರೆ.‌

***

ಹಿಂದಿನ ಸ್ಥಿತಿ ಈಗ ಇಲ್ಲ

ಇತಿಹಾಸದ ಪುಟಗಳನ್ನು ಗಮನಿಸಿದರೆ ಮಹಿಳೆಯರಿಗೆ ಹಿಂದೆ ಇದ್ದ ಸ್ಥಿತಿ ಈಗ ಇಲ್ಲ. ಸಾಕಷ್ಟು ಅವಕಾಶಗಳು ಈಗ ಇವೆ. ಈ ಅವಕಾಶಗಳನ್ನು ಬಳಸಿಕೊಂಡು ಮಹಿಳೆಯರು ಮುಂದೆ ಬಂದಿದ್ದಾರೆ. ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಮಹಿಳೆಯರಿಗೆ ಮತ್ತಷ್ಟು ಪ್ರೋತ್ಸಾಹ ದೊರೆತಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಕೆ.ಎಸ್.ದಿವ್ಯಾಶ್ರೀ ಹೇಳಿದರು.

ಮಂಡ್ಯ ಜಿಲ್ಲೆಯ ಜಿ.ಕೆಬ್ಬಹಳ್ಳಿಯಲ್ಲಿ ಜನಿಸಿದ ದಿವ್ಯಾ ಅವರು 2004ನೇ ಬ್ಯಾಚಿನ ಕೆ.ಎ.ಎಸ್‌ ಅಧಿಕಾರಿಯಾಗಿ ಆಯ್ಕೆಯಾಗಿ, ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಸಹಾಯಕ ಅಧೀಕ್ಷಕರು, ಹಾಸನ ಜಿಲ್ಲಾ ಕಾರಾಗೃಹದ ಅಧೀಕ್ಷಕರು, ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆಯ ಪ್ರಾಂಶುಪಾಲರು, ಮೈಸೂರು ಕೇಂದ್ರ ಕಾರಾಗೃಹದ ಅಧೀಕ್ಷಕರು, ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT