ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರನ್ನು ರಕ್ಷಿಸಲು ಮೊರೆ

ದುಡಿಯುವ ವರ್ಗದ ಮೇಲೆ ದಮನಕಾರಿ ಕ್ರಮ ಬೇಡ– ಆಗ್ರಹ
Last Updated 28 ಜುಲೈ 2020, 13:39 IST
ಅಕ್ಷರ ಗಾತ್ರ

ಮೈಸೂರು: ಕಾರ್ಮಿಕರ ವಿರುದ್ಧ ದಮನಕಾರಿ ನೀತಿಗಳನ್ನು ಅನುಸರಿಸಬಾರದು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಸೇರಿದ ಪ್ರತಿಭಟನಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಆಶಾ ಕಾರ್ಯಕರ್ತೆಯರು ಕಳೆದ 18 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಕಿವುಡಾಗಿದೆ. ಕೊರೊನಾ ಸಂಕಷ್ಟದ ಸಮಯದಲ್ಲೇ ಸುಗ್ರೀವಾಜ್ಞೆಗಳ ಮೂಲಕ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಅವರು ಹರಿಹಾಯ್ದರು.

ತಿಂಗಳ ದುಡಿತದ ಅವಧಿಯನ್ನು 75 ಗಂಟೆಗಳಿಂದ 125 ಗಂಟೆಗಳಿಗೆ ಏರಿಕೆ ಮಾಡುವ ಮೂಲಕ ಕಾರ್ಮಿಕರನ್ನು ಜೀತಪದ್ಧತಿಗೆ ಸರ್ಕಾರವೇ ತಳ್ಳಿದಂತಾಗಿದೆ. ಇದು ಶೋಷಣೆಗೆ ದಾರಿ ಮಾಡಿಕೊಡುತ್ತದೆ. ಅನುಸೂಚಿತ ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ವ್ಯತ್ಯಸ್ತ ತುಟ್ಟಿಭತ್ಯೆಯನ್ನು ಒಂದು ವರ್ಷದ ಅವಧಿಗೆ ತಡೆ ಹಿಡಿಯಲಾಗಿದೆ. ಇದರಿಂದ ಅವರಿಗೆ ದೊರಕುತ್ತಿದ್ದ ಪುಡಿಗಾಸಿನ ಹೆಚ್ಚಳವೂ ಇಲ್ಲವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕೂಡಲೇ ಎಲ್ಲಾ ತಿದ್ದುಪಡಿಗಳನ್ನು ವಾಪಸ್ ಪಡೆಯಬೇಕು, ಕಾರ್ಮಿಕರು ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎನ್.ಮುದ್ದುಕೃಷ್ಣ ಸೇರಿದಂತೆ ಹಲವರು ಇದ್ದರು.

ಅಂಬೇಡ್ಕರ್ ನಿವಾಸದ ಮೇಲಿನ ದಾಳಿಗೆ ಖಂಡನೆ

ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ನಿವಾಸದ ಮೇಲೆ ಈಚೆಗೆ ನಡೆದ ದಾಳಿ ಖಂಡಿಸಿ ಸಮತಾ ಸೈನಿಕ ದಳದ ನೇತೃತ್ವದಲ್ಲಿ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಆರೋಪಿಗಳನ್ನು ಪತ್ತೆ ಹಚ್ಚಬೇಕು, ಅವರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಬೇಕು, ಮತ್ತೆ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ವಿ.ಗಣೇಶ್, ಕಾರ್ಯಾಧ್ಯಕ್ಷ ರಾಜು, ಪ್ರಧಾನ ಕಾರ್ಯದರ್ಶಿ ಎಸ್.ಸೆಂದಿಲ್ ಕುಮಾರ್, ಕೆ.ಆರ್.ನಗರ ತಾಲ್ಲೂಕು ಅಧ್ಯಕ್ಷ ಈರಯ್ಯ, ಮಹಿಳಾ ಘಟಕದ ಅಧ್ಯಕ್ಷೆ ಜಯಮ್ಮ ಮುಖಂಡರಾದ ಜಿ.ಎಸ್.ಪ್ರವೀಣ್ ಕುಮಾರ್ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT