ಶನಿವಾರ, ಡಿಸೆಂಬರ್ 14, 2019
22 °C
ವಿಶ್ವ ಶೌಚಾಲಯ ದಿನಾಚರಣೆ; ಕೆಎಂಪಿಕೆ ಟ್ರಸ್ಟ್‌ನಿಂದ ಜಾಗೃತಿ ಮೂಡಿಸುವಿಕೆ

ಬಯಲು ಶೌಚ ಮುಕ್ತ; ಜಗಕ್ಕೆ ಗೊತ್ತಿರುವ ಸತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ, ನಗರದ ಸಿಟಿ ಬಸ್ ನಿಲ್ದಾಣದ ಶೌಚಾಲಯದ ಮುಂಭಾಗ ಮಂಗಳವಾರ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ಗುಲಾಬಿ ಹೂವು ನೀಡಿ ಜಾಗೃತಿ ಮೂಡಿಸಲಾಯಿತು.

‘ಶೌಚಾಲಯ ಬಳಸಿ, ಪರಿಸರ ಸಂರಕ್ಷಿಸಿ’ ಸೇರಿದಂತೆ ಶೌಚಾಲಯ ಬಳಸಿ ಎಂದು ಅರಿವು ಮೂಡಿಸುವ ಫಲಕಗಳನ್ನು ಇದೇ ಸಂದರ್ಭ ಪ್ರದರ್ಶಿಸಲಾಯಿತು.

ನಗರಪಾಲಿಕೆ ಮಾಜಿ ಸದಸ್ಯರಾದ ಎಂ.ಡಿ.ಪಾರ್ಥಸಾರಥಿ ಮಾತನಾಡಿ ‘ಬಯಲು ಶೌಚ ಮುಕ್ತ ಗ್ರಾಮವೆಂದು ಸಾರಿಕೊಂಡು ಪುರಸ್ಕಾರ ಪಡೆಯುವ ಗ್ರಾಮಗಳಲ್ಲಿ, ಪ್ರತಿಶತ 99ರಷ್ಟು ಜನ ಈಗಲೂ ಬೆಳಿಗ್ಗೆ ಶೌಚಕ್ಕೆ ಹೊರಗೆ ಹೋಗುತ್ತಿರುವುದು ಜಗಕ್ಕೆ ಗೊತ್ತಿರುವ ಸಂಗತಿ. ಇದನ್ನು ತಡೆಯುವುದು ಪ್ರತಿಯೊಬ್ಬ ಸಾರ್ವಜನಿಕನ ಸಾಮಾಜಿಕ ಕರ್ತವ್ಯ’ ಎಂದರು.

ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ, ‘ಮೈಸೂರು ಸ್ವಚ್ಛ ನಗರಿ ಎಂದು ಈಗಾಗಲೇ ಖ್ಯಾತಿ ಪಡೆದಿದೆ. ನಗರ ಪಾಲಿಕೆ ವತಿಯಿಂದ ಸಾರ್ವಜನಿಕ ಶೌಚಾಲಯ ನಿರ್ಮಿಸಿದ್ದರೂ; ಕೆಲವರು ಬಯಲಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದನ್ನು ನಿರ್ಮೂಲನೆಗೊಳಿಸಲು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅರಿವು ಮೂಡಿಸುವ ಉತ್ತಮ ಕಾರ್ಯಕ್ರಮ ಆಯೋಜಿಸಿರುವುದು ಒಳ್ಳೆಯದು’ ಎಂದರು.

ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್ ಮಾತನಾಡಿ ‘ಮನುಷ್ಯ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಬಳಸಿದರೆ, ಸ್ವಚ್ಛ ಪರಿಸರ ಹೊಂದುವುದು ಸಾಧ್ಯವಾಗುವುದು’ ಎಂದು ಹೇಳಿದರು.

‘ವಿದೇಶಗಳಲ್ಲಿ ಮಾನವ ಮಲ–ಮೂತ್ರದಿಂದ ಗೊಬ್ಬರ ತಯಾರಿಸಲಾಗುತ್ತಿದೆ. ಇದು ನಮ್ಮಲ್ಲೂ ಪ್ರಯೋಗವಾಗಬೇಕು. ಇದರಿಂದ ಕೃಷಿ ಚಟುವಟಿಕೆಗೂ ಪ್ರೋತ್ಸಾಹ ಸಿಕ್ಕಂತಾಗುವುದು’ ಎಂದರು.

ಮೈಸೂರು ರಕ್ಷಣಾ ವೇದಿಕೆಯ ಉಪಾಧ್ಯಕ್ಷರಾದ ಕುಮಾರ್ ಗೌಡ, ಪದಾಧಿಕಾರಿಗಳಾದ ರಾಕೇಶ್ ಶ್ರೀನಿವಾಸ್, ಸುಚೀಂದ್ರ, ಚಕ್ರಪಾಣಿ, ಎಸ್.ಎನ್.ರಾಜೇಶ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)