ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರೆಯ ನಾಡಕುಸ್ತಿ: 350ಕ್ಕೂ ಅಧಿಕ ಪೈಲ್ವಾನರು ಭಾಗಿ

ದಸರಾ ನಾಡಕುಸ್ತಿ: ಜೋಡಿ ಕಟ್ಟವ ಕಾರ್ಯ ಪೂರ್ಣ
Last Updated 18 ಸೆಪ್ಟೆಂಬರ್ 2022, 14:10 IST
ಅಕ್ಷರ ಗಾತ್ರ

ಮೈಸೂರು: ಗರಡಿಯ ಆವೆಮಣ್ಣಿನಲ್ಲಿ ವರ್ಷಗಳಿಂದ ಬೆವರು ಹರಿಸಿದ್ದ ಕುಸ್ತಿ‍ಪಟುಗಳು ಕಲಿತ ಪಟ್ಟುಗಳನ್ನು ಪ್ರದರ್ಶಿಸುವ ಉತ್ಸಾಹದಲ್ಲಿ ಧಾವಿಸಿದ್ದರು. ಹಿರಿಯ ಪೈಲ್ವಾನರು ಪಂದ್ಯಾವಳಿಗೆ ಆಯ್ಕೆ ಮಾಡುತ್ತಿದ್ದಂತೆ ಅವರ ಕಣ್ಣುಗಳಲ್ಲಿ ಗೆಲ್ಲುವ ಕನಸು ಮೂಡಿತ್ತು.

ಇಲ್ಲಿನ ವಸ್ತುಪ್ರದರ್ಶನ ಪ್ರಾಧಿಕಾರದ ಕಾಳಿಂಗರಾವ್‌ ಭವನದಲ್ಲಿ ದಸರೆಯ ನಾಡಕುಸ್ತಿ ಸ್ಪರ್ಧೆಗೆ ಪೂರ್ವಭಾವಿಯಾಗಿ ಭಾನುವಾರ ನಡೆದ ಕುಸ್ತಿ‍ಪಟುಗಳ ಜೋಡಿ ಕಟ್ಟುವ ಕಾರ್ಯದಲ್ಲಿ ಕಂಡು ಬಂದ ದೃಶ್ಯವಿದು.

ಮೈಸೂರು, ನಂಜನಗೂಡು,ಶ್ರೀರಂಗಪಟ್ಟಣ, ಗಂಜಾಂ, ಮಂಡ್ಯ, ಬನ್ನೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ 350ಕ್ಕೂ ಹೆಚ್ಚು ಕುಸ್ತಿಪಟುಗಳು ಪಾಲ್ಗೊಂಡಿದ್ದರು. ಅರ್ಜಿ ಸಲ್ಲಿಸಲು ನೂಕುನುಗ್ಗಲು ಉಂಟಾಯಿತು.

ಸ್ಪರ್ಧಿಗಳು ಆರಂಭದಲ್ಲಿ ತಮ್ಮ ವಯಸ್ಸು, ತೂಕ ಹಾಗೂ ಗರಡಿಯ ವಿವರವನ್ನು ಅರ್ಜಿಯಲ್ಲಿ ತುಂಬಿ ಮಾಹಿತಿ ನೀಡಿದರು. ಸಮವಸ್ತ್ರ ಧರಿಸಿದ ಭಾವಚಿತ್ರವನ್ನೂ ನೀಡಿದರು. ಕೊನೆಯಲ್ಲಿ ಕುಸ್ತಿಪಟುಗಳ ದೇಹದಾರ್ಢ್ಯ ನೋಡಿಪುರುಷರು, ಮಹಿಳೆಯರು, ಚಿಣ್ಣರಿಗೆ ಪ್ರತ್ಯೇಕವಾಗಿ ಜೋಡಿ ಕಟ್ಟಲಾಯಿತು.

‘ಪಂದ್ಯಾವಳಿಗೆ 140 ಜೋಡಿಗಳನ್ನು ಅಂತಿಮಗೊಳಿಸಲಾಗಿದ್ದು, ಹೊರ ರಾಜ್ಯದ ಪೈಲ್ವಾನರ ಜೋಡಿ ಕಟ್ಟುವ ಕಾರ್ಯ ಮಾತ್ರ ಬಾಕಿಯಿದೆ. 140 ಜೋಡಿಗಳಲ್ಲಿ 15 ಮಹಿಳಾ ಜೋಡಿ ಹಾಗೂ 20 ಪುಟಾಣಿ ಪೈಲ್ವಾನರೂ ಸೆಣಸಲಿದ್ದಾರೆ’ ಎಂದುದಸರಾ ಕುಸ್ತಿ ಉಪಸಮಿತಿ ಕಾರ್ಯದರ್ಶಿ ಎ.ಜೆ.ಹರ್ಷವರ್ಧನ ‘ಪ್ರಜಾವಾಣಿ’ಗೆ ತಿಳಿಸಿದರು.

ಚಾಲನೆ: ಕುಸ್ತಿಪಟುಗಳಿಗೆ ಬೆನ್ನುತಟ್ಟುವ ಮೂಲಕ ಜೋಡಿ ಕಟ್ಟುವ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಜಿ.ಟಿ.ದೇವೇಗೌಡ ಚಾಲನೆ ನೀಡಿದರು.‌

ಸಂಸದ ಪ್ರತಾಪಸಿಂಹ, ಮೇಯರ್ ಶಿವಕುಮಾರ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ದಸರಾ ಕುಸ್ತಿ ಉಪಸಮಿತಿಯ ಉಪ ವಿಶೇಷಾಧಿಕಾರಿಯೂ ಆದ ಹೆಚ್ಚುವರಿಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ ಇದ್ದರು‌.

26ರಿಂದ ಪಂದ್ಯಾವಳಿ: ಮುಖ್ಯಮಂತ್ರಿ ಚಾಲನೆ:ಕುಸ್ತಿ ಪಂದ್ಯಾವಳಿ ಸೆ.26ರಿಂದ ಅ.2ರವರೆಗೆ ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.‌ಪ್ರತಿ ದಿನ ಮಧ್ಯಾಹ್ನ 3.30ರಿಂದ ಪಂದ್ಯಗಳು ನಡೆಯಲಿವೆ.

ಸೆ. 30ರಂದು ರಾಜ್ಯಮಟ್ಟದ‍ಪುರುಷರು, ಮಹಿಳೆಯರು ಹಾಗೂ ಅಂಗವಿಕಲರ ಪಂಜ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಅಂದು ಮಧ್ಯಾಹ್ನ 3.30ಕ್ಕೆ ಮಹಿಳೆಯರ ನಾಡಕುಸ್ತಿ, 30ರಿಂದ ಅ.2ರ ವರೆಗೆ ಬೆಳಿಗ್ಗೆ 8ರಿಂದ ದಸರಾ ಕಂಠೀರವ, ದಸರಾ ಕೇಸರಿ, ದಸರಾ ಕಿಶೋರಿ ಹಾಗೂ ದಸರಾ ಕುಮಾರ್‌ ಪ್ರಶಸ್ತಿಗಳಿಗಾಗಿ ಸೆಣಸಾಟ ನಡೆಯಲಿದೆ.

ಸ್ಪರ್ಧೆಗಳ ಆಕರ್ಷಣೆ…:ಈ ಬಾರಿ ಜೋಡಿ ಕಟ್ಟುವ ಕಾರ್ಯದ ವೇಳೆ ಸ್ಪರ್ಧೆಗಳನ್ನು ಏರ್ಪಡಿಸಿದ್ದು ವಿಶೇಷ. ಎರಡು ಕೈಗಳಿಂದ ಗದೆ ತಿರುಗಿಸುವ ಸ್ಪರ್ಧೆ, ಗುಂಡು ಹೊತ್ತು ಬಸ್ಕಿ ಹೊಡೆಯುವ ಸ್ಪರ್ಧೆ, ಬಸ್ಕಿ ಮತ್ತು ದಂಡ ಹೊಡೆಯುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಈ ಎಲ್ಲ ಸ್ಪರ್ಧೆಗಳಲ್ಲಿ 180 ಚಿಣ್ಣರು, ಕುಸ್ತಿಪಟುಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.‌ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗುವುದು ಎಂದು ದಸರಾ ಕುಸ್ತಿ ಉಪಸಮಿತಿ ಕಾರ್ಯದರ್ಶಿ ಎ.ಜೆ.ಹರ್ಷವರ್ಧನ ತಿಳಿಸಿದರು.

ಫಲಿತಾಂಶಗಳು: ಪುರುಷರ ವಿಭಾಗ; ಬಸ್ಕಿ ಮತ್ತು ದಂಡ ಹೊಡೆಯುವ ಸ್ಪರ್ಧೆ: 1. ಶಾಹೀದ್ ಪಾಷಾ, 2. ಮೊಹಮ್ಮದ್‌ಶಕೀಬ್‌, 3. ಸಯ್ಯದ್‌ ಹುಸೇನ್‌.

ಗದೆ ತಿರುಗಿಸುವ ಸ್ಪರ್ಧೆ: 1. ಸಲ್ಮಾನ್ ಖಾನ್, 2. ಯಶವಂತ, 3. ಯೂನಿಸ್ ಖಾನ್

ಗುಂಡು ಹೊತ್ತು ಬಸ್ಕಿ ಹೊಡೆಯುವ ಸ್ಪರ್ಧೆ: 1.ಆಕಾಶ್, 2. ವಿಕಾಸ, 3. ಸಯ್ಯದ್‌ ಹುಸೇನ್

ಮಕ್ಕಳ ವಿಭಾಗ:ಬಸ್ಕಿ ಹೊಡೆಯುವ ಸ್ಪರ್ಧೆ: 1. ನಿಖಿಲ್, 2. ಚೈತನ್ಯ, 3. ಧನುಷ್. ಯುವಕರ ವಿಭಾಗ: 1. ವಿಕಾಸ್, 2. ಸಯ್ಯದ್ ಹುಸೇನ್, 3. ಕಿರಣ್.

ಮಹಿಳಾ ವಿಭಾಗ ಗುಂಡು ಹೊತ್ತು ದಂಡ ಸ್ಪರ್ಧೆ: 1. ಜಾಹ್ನವಿ, 2. ರಕ್ಷಾ, 3. ನಂದಿನಿ. ಡ ಹೊಡೆಯುವ ಸ್ಪರ್ಧೆ: 1. ನಂದಿನಿ. ಗದೆ ತಿರುಗಿಸುವುದು: 1. ಜಾಹ್ನವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT