ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಯಾಗಿದ್ದಾಗ ಸಿಗರೇಟು ಸೇದಿದ್ದೆ, ನಶ್ಯೆ ಹಾಕ್ತಿದ್ದೆ: ಎಸ್.ಎಲ್.ಭೈರಪ್ಪ

Last Updated 20 ಆಗಸ್ಟ್ 2022, 13:44 IST
ಅಕ್ಷರ ಗಾತ್ರ

ಮೈಸೂರು: ‘ವಿದ್ಯಾರ್ಥಿಯಾಗಿದ್ದಾಗ ಸಿಗರೇಟು ಸೇದುತ್ತಿದ್ದೆ, ನಶ್ಯೆ ಹಾಕುತ್ತಿದ್ದೆ. ಶಿಕ್ಷಕರು ಬುದ್ಧಿವಾದ ಹೇಳಿದ್ದರಿಂದ ಆ ಚಟಗಳಿಂದ ಹೊರ ಬಂದೆ’ ಎಂದು ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಬಾಲ್ಯದ ನೆನಪುಗಳಿಗೆ ಜಾರಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ ಹಾಗೂ ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಸದ್ವಿದ್ಯಾ ಶಾಲೆಯ ವಿವೇಕಾನಂದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 92ನೇ ಜನ್ಮ ದಿನದ ಸಂಭ್ರಮದ ಕಾರ್ಯಕ್ರಮದಲ್ಲಿ ಅಭಿವಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ಮಾಧ್ಯಮಿಕ ಶಾಲೆಯಲ್ಲಿದ್ದಾಗ ಸ್ವಾಮಿ ಗೌಡ ಎಂಬ ಶಿಕ್ಷಕರು ಸಿಗರೇಟ್ ಸೇದುತ್ತಿದ್ದರು. ಸ್ನೇಹಿತನೊಬ್ಬ ಸಿಗರೇಟು ಸೇದುವುದನ್ನು ಕಲಿಸಿದ್ದ. ಕೊಳ್ಳಲು ಹಣವಿರುತ್ತಿರಲಿಲ್ಲ. ಸ್ವಾಮಿಗೌಡ ಅವರಿಗೆ ಕಾಣದಂತೆ ಅವರಿಂದ 6 ಸಿಗರೇಟ್‌ಗಳನ್ನು ಕದ್ದು ಸೇದಿದ್ದೆ. ‘ಈ ಚಟ ಒಳ್ಳೆಯದಲ್ಲ;ಎದೆಯೊಳಗೆ ಸುಡುತ್ತದೆ. ಅಭ್ಯಾಸವಾದರೆ ಬಿಡಲಾಗುವುದಿಲ್ಲ’ ಎಂದು ಆ ಶಿಕ್ಷಕರು ತಿಳಿಹೇಳಿದ್ದರು. ನಂತರ ಸಿಗರೇಟು ಮುಟ್ಟಲಿಲ್ಲ’ ಎಂದು ತಿಳಿಸಿದರು.

ನಶ್ಯೆ ಹಾಕಿಕೊಂಡು ಬರುವಂತೆ ಕಳುಹಿಸಿದ್ದರು

‘ಪ್ರೌಢಶಾಲೆಯ ಕೊನೆಯ ಹಂತದಲ್ಲಿ ನಶ್ಯೆ ಹಾಕಿಕೊಳ್ಳುವುದನ್ನು ಸ್ನೇಹಿತ ಕಲಿಸಿಬಿಟ್ಟಿದ್ದ. ಬಿಎ ಆನರ್ಸ್ ಓದುವಾಗ ತರಗತಿಯಲ್ಲಿ ಬಿಡುವಿಲ್ಲದ್ದಕ್ಕೆ ನಶ್ಯೆ ಹಾಕಲಾಗಿರಲಿಲ್ಲ. ಇದರಿಂದ ಮಂಕಾಗಿದ್ದೆ. ಪಾಠವೇ ಅರ್ಥ ಆಗುತ್ತಿರಲಿಲ್ಲ. ಇದನ್ನು ಗಮನಿಸಿದ ಉಪನ್ಯಾಸಕರು, ಹೊರಗಡೆ ಹೋಗಿ ನಶ್ಯೆ ಹಾಕಿಕೊಂಡು ಬಾ ಎಂದು ಕಳುಹಿಸಿದ್ದರು. ಬಳಿಕ ಪ್ರತ್ಯೇಕವಾಗಿ ನನ್ನೊಂದಿಗೆ ಮಾತನಾಡಿ ಬಿಟ್ಟು ಬಿಡುವಂತೆ ಸಲಹೆ ನೀಡಿದ್ದರು. ಕ್ರಮೇಣ ನಶ್ಯೆ ಹಾಕುವುದನ್ನು ಬಿಟ್ಟೆ’ ಎಂದು ಹಂಚಿಕೊಂಡರು.

‘ನಾನು ಇಷ್ಟು ವರ್ಷ ಬದುಕಿರಲು ದುಶ್ಚಟಗಳು ಇಲ್ಲದಿರುವುದೇ ಕಾರಣ. ಕಾಫಿ-ಟೀ ಕುಡಿಯುವುದಿಲ್ಲ. ಹೀಗಾಗಿ ನಾನು ಒಂಬತ್ತು ದಶಕ‌ಗಳನ್ನು ಕಳೆದಿದ್ದೀನಿ. ಕಾಯಿಲೆಗಳಿಗೆ ಅವಕಾಶ‌ ಕೊಡದಂತೆ ಅಭ್ಯಾಸಗಳನ್ನು ಇಟ್ಟುಕೊಳ್ಳಬೇಕು’ ಎಂದರು.

ಇದೇ ಮೊದಲಿಗೆ

‘ಜನ್ಮ ದಿನ ಆಚರಿಸಿಕೊಳ್ಳುವ ಅಭ್ಯಾಸವಿಲ್ಲ. ಕಸಾಪ ಜಿಲ್ಲಾ ಘಟಕದವರಿಂದಾಗಿ ಇದೇ‌ ಮೊದಲ ಬಾರಿಗೆ ಪಾತ್ರವಾಗಿದ್ದೇನೆ. ಹೀಗೆ ಆಚರಿಸುವವರು ಚಿಕ್ಕಂದಿನಿಂದಲೂ ಯಾರೂ ಇರಲಿಲ್ಲ. ಅಲ್ಲದೇ, ನನಗೆ ಜನ್ಮ ದಿನಾಂಕದ ಬಗ್ಗೆಯೇ ಅನುಮಾನವಿದೆ. ಶಾಲಾ ದಾಖಲಾತಿಗಳಲ್ಲಿ ಆ.20 ಎಂದು ನಮೂದಾಗಿದೆಯಷ್ಟೆ’ ಎಂದು ತಿಳಿಸಿದರು.

‘ಪ್ರೌಢಶಾಲಾ ಮಟ್ಟದಲ್ಲಿ ಮಕ್ಕಳಿಗೆ ಏನು ಆಸಕ್ತಿ ಬೆಳೆಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಪ್ರೌಢಶಾಲೆ ನಂತರದ ಉಪನ್ಯಾಸಕರು ಯಾವುದೋ ಸಿದ್ಧಾಂತದಲ್ಲಿ ಮುಳುಗಿರುತ್ತಾರೆ ಅಥವಾ ಬರಡಾಗಿರುತ್ತಾರೆ‌. ಸಾಹಿತ್ಯದ ರಸ ಅನುಭವಿಸುವುದು ಪ್ರೌಢಶಾಲಾ ಶಿಕ್ಷಕರಿಂದ ಮಾತ್ರ ಸಾಧ್ಯ’ ಎಂದು ಪ್ರತಿಪಾದಿಸಿದರು.

‘ಜೀವನದ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳುವ ಜ್ಞಾನ ಗೊತ್ತಿರಬೇಕು.‌ ಆ ಮೌಲ್ಯಗಳು ಯಾವುದು ಎನ್ನುವುದನ್ನು ತಿಳಿಯಬೇಕು. ಇಲ್ಲದಿದ್ದರೆ ಅದು ಕೇವಲ ಕಥೆ ಆಗುತ್ತದೆ. ರಾಮಾಯಣ ಮಹಾಭಾರತವು ವೇದಕ್ಕೆ ಸಮಾನವಾದುದು. ಜೀವನದ ಮೌಲ್ಯಗಳು ಹೇಗಿರಬೇಕು ಎನ್ನುವುದನ್ನು ಚೆನ್ನಾಗಿ ತಿಳಿಸಿಕೊಡಲಾಗಿದೆ’ ಎಂದರು.

ರಕ್ತ ಎಲ್ಲಿಯದು?

‘ಅಮೆರಿಕದಲ್ಲಿ ಜನಿಸಿಲ್ಲದವರಿಗೆ ಅಧ್ಯಕ್ಷರಾಗಲು ಅವಕಾಶವಿಲ್ಲ.‌ ಬೇರೆ ದೇಶದವರು ಅಲ್ಲಿರಬಹುದು; ಆದರೆ, ರಕ್ತ ಎಲ್ಲಿಯದು? ನಮ್ಮ ದೇಶದಲ್ಲಿ ಆ ಜ್ಞಾನವೇ ಇಲ್ಲ. ನಾನು ಏನು ಹೇಳುತ್ತಿದ್ದೇನೆ ಎನ್ನುವುದು ನಿಮಗೆ ಅರ್ಥವಾಗಿರಬಹುದು’ ಎಂದಾದ ಸಭಾಂಗಣದಲ್ಲಿ ನಗೆ ಉಕ್ಕಿತು.

‘ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳಲು ಓದಬೇಕು. ರಾಮಾಯಣ‌ ಮಹಾಭಾರತ, ದೇಶದ ಮೌಲ್ಯಗಳನ್ನು ಅರಿಯಬೇಕು’ ಎಂದರು.

‘ನಮ್ಮ ಅನುಭವಕ್ಕೆ ಬರುವ ಘಟನೆಗಳನ್ನು ಕಥೆಗಳನ್ನಾಗಿ ಬರೆಯುವುದೇ ಕಾದಂಬರಿ. ಮೌಲ್ಯಗಳ‌ ತೂಕ‌ ಇಲ್ಲದಿದ್ದರೆ ಅದು ಕೇವಲ‌ ಕಥೆಯಾಗುತ್ತದೆ’ ಎಂದು ಪ್ರತಿಪಾದಿಸಿದರು.

ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ‍ಪ್ರೊ.ನರಹರಿ ಬಾಲು ಎಂ.ಎಸ್‌.ಕೆ., ‘ಭೈರಪ್ಪ ಅವರ ಒಂದೊಂದು ಕೃತಿಯೂ ಅಮೂಲ್ಯವಾದುದು. 14 ವಿವಿಧ ಭಾಷೆಗಳಿಗೆ ಅನುವಾದವಾಗಿವೆ. ಬೆರಗು ಮೂಡಿಸುವಂತಹ ವ್ಯಕ್ತಿತ್ವ ಅವರದು’ ಎಂದರು.

ಅಭಿನಂದನಾ ಭಾಷಣ ಮಾಡಿದ ಮೈಸೂರು ಆಕಾಶವಾಣಿ ನಿವೃತ್ತ ನಿರ್ದೇಶಕಿ ಡಾ.ಎಂ.ಎಸ್.ವಿಜಯಾಹರನ್, ‘ಭೈರಪ್ಪ ಜೀವಂತ ದಂತ ಕಥೆ. ಶ್ರೀಸಾಮಾನ್ಯರೂ ಅವರ ಬಗ್ಗೆ ಬಹಳ ಅಭಿಮಾನ ಇಟ್ಟುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ದೊಡ್ಡ ಅಭಿಮಾನಿ ಪಡೆ ಇದೆ. ಬಹಳ ಮಂದಿಗೆ ಅವರು ತೆರೆಮರೆಯಲ್ಲಿ‌ ಸಹಾಯ ಮಾಡುತ್ತಿದ್ದಾರೆ. ಉನ್ನತ ಚಿಂತನೆ ಹಾಗೂ ಸರಳ‌ ಜೀವನದ ಕಾರಣದಿಂದಾಗಿ ಸಹಾಯ ಮನೋಭಾವ ಬೆಳೆಸಿಕೊಂಡಿದ್ದಾರೆ’ ಎಂದು ಹೇಳಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌ ಅಧ್ಯಕ್ಷತೆ ವಹಿಸಿದ್ದರು. ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಸಿ.ಆರ್.ನಾಗರಾಜ್‌, ಜಂಟಿ ಕಾರ್ಯದರ್ಶಿ ಪ್ರೊ.ಕೆ.ಎಸ್.ಹಿರಿಯಣ್ಣ, ಸಂಸ್ಕೃತಿ ಚಿಂತಕ ಕೆ.ರಘುರಾಂ ವಾಜಪೇಯಿ ಹಾಜರಿದ್ದರು.

ಶ್ರೀವಿದ್ಯಾ ಪ್ರಾರ್ಥಿಸಿದರು. ಕೃಪಾ ಮಂಜುನಾಥ್‌ ಸ್ವಾಗತಿಸಿದರು. ಕಸಾಪ ಜಿಲ್ಲಾ ಘಟಕದ ಕಾರ್ಯದರ್ಶಿ ಮ.ನ.ಲತಾ ಮೋಹನ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT