ಯಡತೊರೆ ಉತ್ಸವಕ್ಕೆ ಅದ್ಧೂರಿ ಚಾಲನೆ

7

ಯಡತೊರೆ ಉತ್ಸವಕ್ಕೆ ಅದ್ಧೂರಿ ಚಾಲನೆ

Published:
Updated:
Prajavani

ಕೆ.ಆರ್.ನಗರ: ಇಲ್ಲಿನ ಹಳೇ ಯಡತೊರೆ ಅರ್ಕೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಿರುವ ‘ಯಡತೊರೆ ಉತ್ಸವ’ಕ್ಕೆ ಶನಿವಾರ ಅದ್ಧೂರಿ ಚಾಲನೆ ದೊರೆಯಿತು. ಫೆ.11ರವರೆಗೆ ಉತ್ಸವ ನಡೆಯಲಿದೆ.

ಕಾರ್ಯಕ್ರಮವನ್ನು ಹ್ಯಾಟ್ರಿಕ್‌ ಹೀರೊ ಶಿವರಾಜ್‌ ಕುಮಾರ್‌ ಅವರು ಉದ್ಘಾಟಿಸಿದರು.

ಕಾವೇರಿ ನದಿ ದಂಡೆಯಲ್ಲಿ ಝಳು ಝಳು ಹರಿಯುವ ನೀರಿನ ಶಬ್ದ, ತಣ್ಣನೆ ಗಾಳಿ ನಡುವೆ ಶಿವರಾಜ್‌ ಕುಮಾರ್‌ ಹಾಕಿದ ಹೆಜ್ಜೆಗೆ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು.

ಸ್ಥಳೀಯ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಂಜಯ್‌ ಅವರ ಕರ್ನಾಟಕ ದರ್ಶನ ನೃತ್ಯರೂಪಕ, ಗಾಯಕರಾದ ಹೇಮಂತ್, ಶಮಿತಾ ಮಲ್ನಾಡ್, ಕಾಮಿಡಿ ಗೋಪಿ ಹಾಗೂ ಸಾಯಿರಾಂ ನೃತ್ಯ ತಂಡದವರು ನಡೆಸಿಕೊಟ್ಟ ಸಂಗೀತ ರಸಸಂಜೆ ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿದರು.

‘ನನ್ನ ತಾಯಿ ಪಾರ್ವತಮ್ಮ ರಾಜ್‌ಕುಮಾರ್ ಇದೇ ತಾಲ್ಲೂಕಿನ ಸಾಲಿಗ್ರಾಮದಲ್ಲಿ ಹುಟ್ಟಿದ್ದರು. ಅವರು ಎಲ್ಲೂ ಹೋಗಿಲ್ಲ, ಇಲ್ಲೇ ಇದ್ದಾರೆ. ನಾನು ನನ್ನ ತಾಯಿ ಊರಿಗೆ ಬಂದಂತಾಗಿದೆ’ ಎಂದು ಶಿವರಾಜ್‌ ಕುಮಾರ್ ಹೇಳಿದರು.

ಇಂತಹ ಉತ್ಸವಗಳು ಆಗಾಗ ನಡೆಯಬೇಕು. ಇಲ್ಲಿನ ಇತಿಹಾಸ ಎಲ್ಲರಿಗೂ ತಿಳಿಯಬೇಕು ಎಂದರು.

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮಾತನಾಡಿ, ‘ಪ್ರತಿಯೊಬ್ಬರೂ ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಒತ್ತಡ ಮರೆತು ಉಲ್ಲಾಸಗೊಳ್ಳಲು ಇಂತಹ ಉತ್ಸವಗಳು ಸಹಕಾರಿ’ ಎಂದು ಹೇಳಿದರು.

ಪುರಸಭೆ ಅಧ್ಯಕ್ಷೆ ಹರ್ಷಲತಾ ಶ್ರೀಕಾಂತ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನೀಲಮಣಿ ರೇವಣ್ಣ, ಪುರಸಭೆ ಸದಸ್ಯ ಕೆ.ಎಲ್.ಜಗದೀಶ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಉಪ ವಿಭಾಗಾಧಿಕಾರಿ ವೀಣಾ, ತಹಶೀಲ್ದಾರ್ ಮಂಜುಳಾ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !