ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಯುವಜನರ ಜೋಶ್, ಯಶ್ ಹವಾ

ಮೈಸೂರಿನಲ್ಲಿ ಯುವಜನ ಮಹೋತ್ಸವ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿ
Last Updated 11 ಆಗಸ್ಟ್ 2022, 15:31 IST
ಅಕ್ಷರ ಗಾತ್ರ

ಮೈಸೂರು: ತ್ರಿವರ್ಣ ಧ್ವಜ ಪ್ರದರ್ಶಿಸುತ್ತಾ ಸಂಭ್ರಮಿಸಿದ ಯುವಕ–ಯುವತಿಯರು. ರಂಗು ತುಂಬಿದ ಚಿತ್ರ ನಟ ಯಶ್‌ ಹವಾ. ರಂಜಿಸಿದ ಗೀತ–ಗಾಯನ. ದೇಶಭಕ್ತಿಯನ್ನು ಉದ್ದೀಪಿಸಿದ ನೃತ್ಯ ಪ್ರಸ್ತುತಿ. ಸಾವಿರಾರು ಮಂದಿ ಭಾಗಿ.

– ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಮೈಸೂರು ವಿಶ್ವವಿದ್ಯಾಲಯದಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ‘ಯುವಜನ ಮಹೋತ್ಸವ’ದಲ್ಲಿ ಯುವಜನರ ಜೋಶ್‌ನ ಝಲಕ್‌ಗಳಿವು.

ವಿಶ್ವವಿದ್ಯಾಲಯದ ಎಂಜಿನಿಯರಿಂಗ್‌ ಕಾಲೇಜು ಕಟ್ಟಡ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯೂ ನೆರವೇರಿದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ–ವಿದ್ಯಾರ್ಥಿನಿಯರು ತ್ರಿವರ್ಣ ಧ್ವಜಗಳನ್ನು ಹಿಡಿದು ಪಾಲ್ಗೊಂಡಿದ್ದರು. ಭಾರತ ಮಾತೆಗೆ ಜೈಕಾರ ಮುಗಿಲು ಮುಟ್ಟಿತು.

ನಗರದ ಹಾಗೂ ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಎನ್‌ಎಸ್‌ಎಸ್ ಕೆಡೆಟ್‌ಗಳು, ಎನ್‌ಸಿಸಿಯ ಸ್ವಯಂಸೇವಕರು ಸಂಭ್ರಮದಲ್ಲಿ ಭಾಗಿಯಾಗಿ ಮೆರುಗು ಹೆಚ್ಚಿಸಿದರು. ನಾಡಹಬ್ಬದ ದಸರೆಗೂ ಮುನ್ನವೇ ‘ಯುವ ಸಂಭ್ರಮ’ದ ಹೊನಲು ಹರಿಯಿತು.

ಭಾವೈಕ್ಯದ ನೃತ್ಯ ಸಂಗಮದ ಉತ್ಸವವು ಹಲವು ತಾಸುಗಳವರೆಗೆ ರಸದೌತಣ ಉಣಬಡಿಸಿತು. ಯುವಕ–ಯುವತಿಯರು ಹಾಡುಗಳಿಗೆ ಕುಣಿದು ಖುಷಿ‍ಪಟ್ಟರು. ಪ್ರೊ.ರಾಜಶೇಖರ್, ಚೇತನ್ ಮಾರ್ಗದರ್ಶನದಲ್ಲಿ ಕೊರಿಯಾಗ್ರಾಫರ್‌ ವಿಶ್ವಾಸ್ ನೇತೃತ್ವದಲ್ಲಿ ನಡೆದ ಪ್ರಸ್ತುತಿಯು ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ರಾಜ್ಯಗಳ ಕಲೆ, ಸಂಸ್ಕೃತಿ ಪರಿಚಯ, ವೀರ ಯೋಧರು, ವೀರ ವನಿತೆಯರು, ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿತು. ನಾವೆಲ್ಲರೂ ಒಂದೇ ಎಂಬ ಭಾವೈಕ್ಯದ ಸಂದೇಶವನ್ನು ಸಾರಿತು. ನೆರೆದಿದ್ದವರಿಂದ ಚಪ್ಪಾಳೆಯನ್ನೂ ಗಿಟ್ಟಿಸಿತು. ಸ್ವಾತಂತ್ರ್ಯ ಸೇನಾನಿಗಳ ರೂಪಕಗಳು ರೋಮಾಂಚನ ಮೂಡಿಸಿದವು.

ಹುಣಸೂರು ಕಾಲೇಜಿನ ಸಹ ಪ್ರಾಧ್ಯಾಪಕ ಲೋಕೇಶ್ ಪ್ರಸ್ತುತಪಡಿಸಿದ ‘ಆಡಿಸಿ ನೋಡು ಬೀಳಿಸಿ ನೋಡು’ ಗೀತೆಯು ನಟ ಪುನೀತ್ ರಾಜಕುಮಾರ್ ನೆನಪಿಗೆ ತಂದಿತು. ಯುವಕ–ಯುವತಿಯರು ಮೊಬೈಲ್ ಫೋನ್‌ ಟಾರ್ಚ್‌ ಆನ್ ಮಾಡಿ ಗೌರವ ಸಲ್ಲಿಸಿದರು.

ಡಾ.ಲೋಕೇಶ್ ಮತ್ತು ಡಾ.ಶಿವಾನಂದ ತಂಡ, ಡಾ.ರಶ್ಮಿ ಹಾಡಿದರು. ಮೈಸೂರು ಮಂಜುನಾಥ್ ಪುತ್ರ ಸುಮಂತ್ ಮಂಜುನಾಥ್ ಮತ್ತು ತಂಡದವರು ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಿದರು. ವೇದಿಕೆ ಕಾರ್ಯಕ್ರಮದ ಬಳಿಕ ಚಲನಚಿತ್ರ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಮತ್ತು ತಂಡದವರು ಗಾಯನದಿಂದ ನೆರೆದಿದ್ದವರನ್ನು ರಂಜಿಸಿದರು.

‘ನಿಮಗೆ ನೀಡಲಾದ ಬಾವುಟಗಳನ್ನು ಸರ್ಕಾರದಿಂದ ಹಮ್ಮಿಕೊಂಡಿರುವ ‘ಹರ್‌ ಘರ್‌ ತಿರಂಗಾ’ ಕಾರ್ಯಕ್ರಮದ ಅಂಗವಾಗಿ ಮನೆ, ಹಾಸ್ಟೆಲ್‌ ಹಾಗೂ ಕೊಠಡಿಗಳ ಮೇಲೆ ಹಾರಿಸಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿದ್ಯಾರ್ಥಿಗಳನ್ನು ಕೋರಿದರು.

ಸಿಎಂ ಜೊತೆಗೇ ಬಂದಿಳಿದ ಯಶ್

ನಟ ಯಶ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರೊಂದಿಗೆ ಬೆಂಗಳೂರಿನಿಂದ ಹೆಲಿಕಾಪ್ಟರ್‌ನಲ್ಲಿ ಬಂದಿಳಿದರು.

ಯಶ್ ವೇದಿಕೆಗೆ ಬರುತ್ತಿದ್ದಂತೆಯೇ ವಿದ್ಯಾರ್ಥಿಗಳಿಂದ ಸಿಳ್ಳೆ–ಚಪ್ಪಾಳೆಗಳ ಮಳೆ ಸುರಿಯಿತು. ರಾಕಿ ರಾಕಿ ರಾಕಿ... ಎಂದು ಜೋರಾಗಿ ನಿರಂತರವಾಗಿ ನಿಮಿಷಗಳವರೆಗೆ ಕೂಗುತ್ತಾ ಅಭಿಮಾನ ವ್ಯಕ್ತಪಡಿಸಿದರು. ಇದರಿಂದಾಗಿ ಯಶ್ ಜೊತೆಗೆ ಭಾಗವಹಿಸಿದ್ದ ಮುಖ್ಯಮಂತ್ರಿ ಆದಿಯಾಗಿ ಅತಿಥಿಗಳೆಲ್ಲರೂ ಪುಳಕ ಅನುಭವಿಸಿದರು.

ಬೀಟ್ ಹಾಕಿಕೊಂಡಿದ್ದೆ, ಆಮೇಲೆ ಬದಲಾದೆ!

‘ವಿದ್ಯಾರ್ಥಿಯಾಗಿದ್ದಾಗ ಬೀಟ್ ಹಾಕಿಕೊಂಡಿದ್ದೆ, ಸಣ್ಣ ಬದಲಾವಣೆಗಳೇ ನನ್ನನ್ನು ಬದಲಾಯಿಸಿದವು’ ಎಂದು ನಟ ಯಶ್ ನೆನಪಿಗೆ ಜಾರಿದರು.

‘ವಿದ್ಯಾರ್ಥಿ ಜೀವನದಲ್ಲಿ ಖಂಡಿತವಾಗಿಯೂ ತಂದೆ–ತಾಯಿ ಖುಷಿಯಾಗುವಷ್ಟು ಒಳ್ಳೆಯ ರೀತಿಯಲ್ಲಿದ್ದವನಲ್ಲ. ಬೇಜವಾಬ್ದಾರಿಯಿಂದ, ಸ್ಟಂಟ್‌ ಮಾಡಿಕೊಂಡು, ಹುಡುಗರೊಂದಿಗೆ ಕಾಳಿದಾಸ ರಸ್ತೆ, ಒಂಟಿ ಕೊಪ್ಪಲು, ಪಡುವಾರಹಳ್ಳಿ, ಗಂಗೋತ್ರಿಯಲ್ಲಿ ಬೀಟ್‌ ಹಾಕಿಕೊಂಡಿದ್ದವ ನಾನು. ಈಗ ಅದೇ ಊರಲ್ಲಿ ಇಷ್ಟೊಂದು ಪ್ರೀತಿ ಸಿಗುತ್ತಿರುವುದು ಖುಷಿಯ ವಿಚಾರ’ ಎಂದು ಹೆಮ್ಮೆ ವ್ಯಕ್ತಪಡಿಸಿದರು.

‘ಸಣ್ಣ ಬದಲಾವಣೆಗಳೇ ನಮ್ಮನ್ನು ಬದಲಾಯಿಸಿಬಿಡುತ್ತವೆ. ಮುಖ್ಯವಾಗಿ ಆತ್ಮವಿಶ್ವಾಸ ಇರಬೇಕು. ಸಾಧನೆಗೂ ಗಮನಹರಿಸಿ, ಜೊತೆಗೆ ಸಣ್ಣ ಖುಷಿಗಳನ್ನೂ ಅನುಭವಿಸಿ. ಸ್ನೇಹಿತರೊಂದಿಗೆ ಕಾಲ ಕಳೆಯಿರಿ. ತುಂಬಾ ಗಂಭೀರವಾಗಬೇಡಿ’ ಎಂದು ಸಲಹೆ ನೀಡಿದರು.

‘ಕನ್ನಡ ಸಿನಿಮಾಕ್ಕೆ ಇಡೀ ಭಾರತ ಇಷ್ಟು ಬೇಗ ದೊಡ್ಡ ಗೌರವ ಕೊಡುತ್ತದೆ ಎಂದು ನಂಬಿದ್ರಾ? ಅದು ಆಗಿದೆಯಲ್ಲವೇ? ಒಬ್ಬರಿಂದಲೇ ಎಲ್ಲವೂ ಆಗುವುದಿಲ್ಲ. ನಮ್ಮೊಳಗೆ ಒಂದು ಸರ್ಕಾರ ಹುಟ್ಟಬೇಕು. ಯೋಜನೆ ಹಾಕಿಕೊಳ್ಳಬೇಕು. ಕಾರ್ಯರೂಪಕ್ಕೆ ತರಬೇಕು. ಆಗ ದೇಶ ತಾನಾಗಿಯೇ ಮುಂದೆ ಹೋಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT