ಶುಕ್ರವಾರ, ಆಗಸ್ಟ್ 19, 2022
27 °C

ಮೈಸೂರು: ಯುವತಿ ಸಾವು; ಮರ್ಯಾದೆಗೇಡು ಹತ್ಯೆ ನಿರಾಕರಿಸಿದ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಯುವತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಮರ್ಯಾದೆಗೇಡು ಹತ್ಯೆಯ ಶಂಕೆ ವ್ಯಕ್ತವಾಗಿದೆ.

ಮೈಸೂರು ತಾಲ್ಲೂಕಿನ ದೊಡ್ಡ ಕಾನ್ಯ ಗ್ರಾಮದ ನಿವಾಸಿ ದೇವರಾಜಪ್ಪ ಎಂಬುವರ ಪುತ್ರಿ ಮೀನಾಕ್ಷಿ ತನ್ನ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದರು.

ಈಕೆಯ ಸಹೋದರಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸಹ ಅನುಮಾನಾಸ್ಪದ ಸಾವು ಎಂದೇ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸಂಶಯ: ಪದವೀಧರಳಾಗಿದ್ದ ಮೀನಾಕ್ಷಿ ಕೃಷಿ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ನೌಕರಿ ಮಾಡುತ್ತಿದ್ದರು. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ತಾನು ಪ್ರೀತಿಸುತ್ತಿದ್ದ ಅನ್ಯ ಜಾತಿಯ ಯುವಕನನ್ನೇ ಮದುವೆಯಾಗುವುದಾಗಿ ಮನೆಯವರಿಗೆ ತಿಳಿಸಿದ್ದರು. ಇದಕ್ಕೆ ಕುಟುಂಬದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಸಹೋದರರು ಹತ್ಯೆಯ ಯತ್ನವನ್ನು ನಡೆಸಿದ್ದರು.

ಮನೆಯಲ್ಲಿನ ದೈಹಿಕ–ಮಾನಸಿಕ ಹಿಂಸೆ ಬಗ್ಗೆ ಮೀನಾಕ್ಷಿ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಒಡನಾಡಿ ಸಂಸ್ಥೆಗೆ ಇ ಮೇಲ್‌ ಮೂಲಕ ಮಾಹಿತಿ ನೀಡಿದ್ದರು. ‘ನಾನು ಗೃಹ ಬಂಧನಲ್ಲಿರುವೆ, ನನಗೆ ಜೀವ ಭಯವಿದೆ. ಸೂಕ್ತ ರಕ್ಷಣೆ ನೀಡಿ’ ಎಂದು ಕೇಳಿಕೊಂಡಿದ್ದರು.

ಇದೀಗ ಮೀನಾಕ್ಷಿಯ ಇ–ಮೇಲ್ ಮಾಹಿತಿ ಬಹಿರಂಗಗೊಂಡಿದ್ದು, ಮರ್ಯಾದೆಗೇಡು ಹತ್ಯೆಯ ಶಂಕೆ ವ್ಯಕ್ತವಾಗಿದೆ. ಆದರೆ ಜಿಲ್ಲಾ ಪೊಲೀಸರು ಇದನ್ನು ನಿರಾಕರಿಸಿದ್ದಾರೆ. ತನಿಖೆ ನಡೆದಿದೆ ಎಂದಷ್ಟೇ ದಕ್ಷಿಣ ಗ್ರಾಮಾಂತರ ಪೊಲೀಸರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.