ಬುಧವಾರ, ನವೆಂಬರ್ 20, 2019
25 °C
ಭಾರತೀಯ ವಿಜ್ಞಾನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕ ಕೆ.ಜೆ.ರಾವ್ ಅಭಿಮತ

ಕಷ್ಟಸಹಿಷ್ಣು ಎಂಜಿನಿಯರುಗಳು ಬೇಕಿದೆ

Published:
Updated:
Prajavani

ಮೈಸೂರು: ಜಪಾನ್‌ನಲ್ಲಿ ಇರುವಂತಹ ಕಷ್ಟಸಹಿಷ್ಣು, ಸೃಜನಶೀಲ ಎಂಜಿನಿಯರುಗಳು ಭಾರತಕ್ಕೂ ಬೇಕಿದೆ‌ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕ ಕೆ.ಜೆ.ರಾವ್ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾಲಯದ ವೃತ್ತಿ ಜೀವನ ಕೇಂದ್ರವು ಮಂಗಳವಾರ ಹಮ್ಮಿಕೊಂಡಿದ್ದ 'ಸ್ಕಿಲ್ ಆನ್ ವ್ಹೀಲ್ಸ್' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಚಂಡಮಾರುತಕ್ಕೆ ಸಿಲುಕಿ ಜಪಾನ್‌ ನಷ್ಟ ಅನುಭವಿಸಿರಬಹುದು. ಆದರೆ, ಇನ್ನೆರಡು ತಿಂಗಳಲ್ಲಿ ದೇಶವನ್ನು ಮುಂಚಿನಂತೆ ಕಟ್ಟಬಲ್ಲ ಶಕ್ತಿ ಅಲ್ಲಿನ ಎಂಜಿನಿಯರುಗಳಿಗಿದೆ. ಅಲ್ಲಿನ ಜನರೂ ಅಷ್ಟೇ ಕಷ್ಟ ಸಹಿಷ್ಣುಗಳು. ಭಾರತದಲ್ಲಿ ಸೃಜನಶೀಲ, ಬುದ್ಧಿವಂತ‌ ಯುವ ಜನತೆಯಿದೆ. ಮನಸು ಮಾಡಿದಲ್ಲಿ ಬೇರೆಲ್ಲ ದೇಶಗಳನ್ನು ಹಿಂದಿಕ್ಕಬಲ್ಲ ಶಕ್ತಿ ಇವರಿಗಿದೆ. ದೇಶ ಕಟ್ಟುವ ಸಂಕಲ್ಪವಷ್ಟೇ ಬೇಕಿದೆ ಎಂದು ಹೇಳಿದರು.

ಉದ್ಯೋಗ ಪಡೆಯುವುದಕ್ಕಿಂತ, ಉದ್ಯೋಗ ಸೃಷ್ಟಿಗೆ ಯುವಕರು ಆದ್ಯತೆ ನೀಡಬೇಕು. ಉದ್ಯಮಗಳನ್ನು ಆರಂಭಿಸಬೇಕು. ಇದರಿಂದ ದೇಶ ಆರ್ಥಿಕವಾಗಿ ಬಲಗೊಳ್ಳುತ್ತದೆ. ಆಗ ಮಾತ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಗೌರವ ಸಿಗಲು ಸಾಧ್ಯ ಎಂದರು.

ಉದ್ಯಮಿ ಡಿ.ಸುಧನ್ವ ಮಾತನಾಡಿ, ಸ್ವಂತ ಉದ್ಯಮ ಸ್ಥಾಪಿಸಲು ಸಾಕಷ್ಟು ಅವಕಾಶಗಳಿವೆ. ಯುವಕರು ತಮ್ಮಲ್ಲಿರುವ ಪ್ರತಿಭೆಗೆ ಒರೆಹಚ್ಚಬೇಕಷ್ಟೇ. ಮಾಹಿತಿ ಈಗ ಬೆರಳ ತುದಿಯಲ್ಲಿ ಸಿಗುತ್ತದೆ. ತಂತ್ರಜ್ಞಾನವನ್ನು ಗರಿಷ್ಠಮಟ್ಟದಲ್ಲಿ ಉದ್ಯಮಕ್ಕೆ ಅಳವಡಿಸಬೇಕು. ಅದು ಯಶಸ್ಸಿಗೆ ಸಹಕಾರಿ ಎಂದು ಕಿವಿಮಾತು ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ಅಧ್ಯಕ್ಷತೆವಹಿಸಿ ಮಾತನಾಡಿ, ‘ಪದವಿ ಪಡೆದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಸೃಷ್ಟಿಸುವುದು ನಮ್ಮ ಮೊದಲ ಆದ್ಯತೆ. ಅದಕ್ಕಾಗಿ ಉದ್ಯೋಗ ಕೇಂದ್ರ ಸ್ಥಾಪಿಸಿದ್ದೇವೆ. ಪ್ರತಿ ವರ್ಷ 3 ಸಾವಿರ ವಿದ್ಯಾರ್ಥಿಗಳು ಪದವಿ ಪಡೆಯುತ್ತಾರೆ. ಅವರಲ್ಲಿ ಕನಿಷ್ಠ 1 ಸಾವಿರ ಮಂದಿಗೆ ಉದ್ಯೋಗ ಸಿಗಬೇಕು. ಈ ನಿಟ್ಟಿನಲ್ಲಿ ಸಿದ್ಧತೆ ನಡೆದಿವೆ’ ಎಂದು ತಿಳಿಸಿದರು.

‘ವಿ.ವಿ.ಯ ಕ್ಯಾಂಪಸ್‌ ಮಾತ್ರವೇ ಅಲ್ಲದೇ, ವ್ಯಾಪ್ತಿಯ 230 ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೂ ಉದ್ಯೊಗ ದೊರಕಿಸಿಕೊಡಲು ಮುಂದಾಗಿದ್ದೇವೆ. ಹಲವು ಕಂಪನಿಗಳನ್ನು ಸಂಪರ್ಕಿಸಿ ಸಂದರ್ಶನ ನಡೆಸಲು ಕೋರಿದ್ದೇವೆ. ವಿದ್ಯಾರ್ಥಿಗಳು ಸೃಜನಶೀಲತೆ ಹಾಗೂ ಕಷ್ಟಸಹಿಷ್ಣುತೆಗೆ ಆದ್ಯತೆ ನೀಡಿದಲ್ಲಿ ಉದ್ಯೋಗಗಳನ್ನು ಪಡೆದುಕೊಳ್ಳುವುದು ದೊಡ್ಡ ಸವಾಲಾಗದು’ ಎಂದು ಸಲಹೆ ನೀಡಿದರು.

ವಾಣಿಜ್ಯ ವಿಭಾಗದ ಡೀನ್‌ ಆಯಿಷಾ ಷರೀಫ್ ಸ್ವಾಗತಿಸಿದರು. ಸಿಬ್ಬಂದಿ ಎಸ್‌.ವಿ.ವೆಂಕಟೇಶ್‌ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)