ದೇಸೀಯತೆ ಮರೆಯುತ್ತಿರುವ ಯುವ ಸಮುದಾಯ

7
ಜಾನಪದ ವಿದ್ವಾಂಸರಾದ ಪ್ರೊ.ಕೃಷ್ಣಮೂರ್ತಿ ಹನೂರು ವಿಷಾದ

ದೇಸೀಯತೆ ಮರೆಯುತ್ತಿರುವ ಯುವ ಸಮುದಾಯ

Published:
Updated:
Prajavani

ಮೈಸೂರು: ಯುವಜನತೆಯು ಆಧುನಿಕತೆಯ ಪ್ರಭಾವಕ್ಕೆ ಒಳಗಾಗಿ ದೇಸೀಯತೆಯನ್ನು ಮರೆಯುತ್ತಿದ್ದಾರೆ ಎಂದು ಸಾಹಿತಿ ಪ್ರೊ.ಕೃಷ್ಣಮೂರ್ತಿ ಹನೂರು ಅಭಿಪ್ರಾಯಪಟ್ಟರು.

ಸೇಂಟ್ ಜೋಸೆಫ್ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ‘ಸಾಹಿತ್ಯಾಧ್ಯಯನದ ಹೊಸ ಸಾಧ್ಯತೆಗಳು’ ಕುರಿತ ಒಂದು ದಿನದ ಸಾಹಿತ್ಯ ಕಮ್ಮಟದಲ್ಲಿ ಅವರು ‘ಜನಪದ ಸಾಹಿತ್ಯ’ ಕುರಿತು ಮಾತನಾಡಿದರು. ‌

‘ಗ್ರಾಮ, ಗ್ರಾಮೀಣ ಸಂಸ್ಕೃತಿ, ಹಳ್ಳಿಯ ವಾತಾವರಣ, ಗ್ರಾಮೀಣರನ್ನು ಮರೆತರೆ ನಮ್ಮತನ ಸಂಪೂರ್ಣ ಹಾಳಾದಂತೆಯೇ ಲೆಕ್ಕ. ಕ್ರಿಕೆಟಿಗರು, ಸಿನಿಮಾದವರ ಗುಂಗಿನಲ್ಲಿಯೇ ಮುಳುಗಿದ್ದರೆ, ನಮ್ಮ ಹಳ್ಳಿಗಳಲ್ಲಿ ಬಾಳುತ್ತಿರುವ ಜಾನಪದ ಕಲಾವಿದರನ್ನು ನೆನೆಸಿಕೊಳ್ಳುವವರು ಯಾರು? ನಮ್ಮ ಹಿರಿಯರು, ಗ್ರಾಮೀಣ ಸಂಸ್ಕೃತಿಗಳ ಬಗ್ಗೆ ತಿಳಿಯುವ ಪ್ರಯತ್ನ ಮಾಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಭದ್ರ ಬುನಾದಿಯನ್ನು ರೂ‍ಪಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಮಂಟೇಸ್ವಾಮಿ, ಮಾದೇಶ್ವರರ ಕಥಾ ಪ್ರಸಂಗಗಳನ್ನು ಸೃಷ್ಟಿಸಿರುವ ಜಾನಪದರು ಅಕ್ಷರ ಕಲಿತವರಲ್ಲ. ಇಂತಹ ಮಹಾಕಾವ್ಯಗಳನ್ನು ಸೃಷ್ಟಿಸಲು ಅಕ್ಷರ ಕಲಿತಿರಲೇಬೇಕು ಎಂಬ ಇಂದಿನ ತಿಳಿವಳಿಕೆ ಅಂದು ನಿಜವಾಗಿರಲಿಲ್ಲ. ನಿತ್ಯ ಜೀವನದ ಪಾಠಶಾಲೆಯಲ್ಲಿ ಕಲಿತು ಜ್ಞಾನ ಪರ್ವತಗಳಾಗಿ ಜಾನಪದರು ರೂಪುಗೊಂಡಿದ್ದರು ಎಂದು ಅವರು ವಿಶ್ಲೇಷಿಸಿದರು.

ಜೀವನದ ತತ್ವಗಳು ಜಾನಪದ ಸಾಹಿತ್ಯದಲ್ಲಿ ಅಡಕವಾಗಿವೆ. ಅವನ್ನು ಅಧ್ಯಯನ ಮಾಡುವ ಮೂಲಕ ಬದುಕಿನ ಸಂಕೀರ್ಣತೆಯನ್ನು ತಿಳಿದುಕೊಳ್ಳಬೇಕು. ವೃತ್ತಿಪರ ಕೋರ್ಸುಗಳ ಜತೆಗೆ ಸಾಹಿತ್ಯವನ್ನೂ ಓದಿ ತಮ್ಮ ಕಾಲನ್ನು ಗಟ್ಟಿಗೊಳಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಕಮ್ಮಟ ಉದ್ಘಾಟಿಸಿದ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎನ್‌.ಎಂ.ತಳವಾರ್‌ ಮಾತನಾಡಿ, ಯುವ ಸಮುದಾಯದ ಇಷ್ಟಕ್ಕೆ ತಕ್ಕಂತೆ ತಂತ್ರಜ್ಞಾನದ ಲೇಪ ಈಗ ಸಾಹಿತ್ಯಕ್ಕೆ ಸಿಕ್ಕಿದೆ. ಅದರ ಸದುಪಯೋಗಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

‘ಮೂಲತಃ ಜರ್ಮನಿಯವರಾದ ಫರ್ಡಿನೆಂಡ್ ಕಿಟಲ್‌ ಅವರು ಕನ್ನಡ ಕಲಿತು ಕನ್ನಡ– ಇಂಗ್ಲಿಷ್‌ ನಿಘಂಟನ್ನು ರೂಪಿಸಿದರು. ನಮ್ಮನ್ನು ಆಳಿದ ಬ್ರಿಟಿಷರು ಕೂಡ ನಮ್ಮ ರಾಯಭಾರಿಗಳಾಗಿ ಕನ್ನಡವನ್ನು ಕಟ್ಟಿ ಬೆಳೆಸಿದರು. ನಮ್ಮವರೇ ಆದ ಬಿ.ಎಂ.ಶ್ರೀಕಂಠಯ್ಯ ಅವರು ಪಂಪ ಭಾರತ, ಕುಮಾರವ್ಯಾಸ ಭಾರತವನ್ನು ಹಿಡಿದು ಕನ್ನಡವನ್ನು ಪರಿಚಯಿಸುವ ಸಾಹಸ ಮಾಡಿದರು. ಹಾಗಾಗಿ, ಸಾಹಿತ್ಯ ಶ್ರೀಮಂತಿಕೆ ಹೊಂದಿರುವ ನಾವು ಈಗ ಸುಮ್ಮನೆ ಕೂರದೇ, ಸಾಹಿತ್ಯವನ್ನು ಓದಿ, ಹೊಸ ಕೃಷಿಗೆ ಬುನಾದಿ ಹಾಕಬೇಕು’ ಎಂದು ಕಿವಿಮಾತು ಹೇಳಿದರು.

ಮೈಸೂರು ವಿ.ವಿ ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ.ಜಿ.ಮಂಜುನಾಥ್ ಅವರು ‘ಶಾಸನಗಳು ಮತ್ತು ಶಾಸನ ಸಾಹಿತ್ಯ’ ಕುರಿತು, ಪ್ರೊ.ಎನ್.ಎಸ್.ತಾರಾನಾಥ್ ಅವರು ‘ಹಳೆಗನ್ನಡ ಸಾಹಿತ್ಯ’ ಕುರಿತು ವಿಷಯ ಮಂಡಿಸಿದರು.

ಎಂಡಿಇಎಸ್ ಕಾರ್ಯದರ್ಶಿ ವಿಜಯ ಕುಮಾರ್, ಎಂಡಿಇಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೊ.ಸಿ.ಎಂ.ಮಣಿ, ಪ್ರಾಂಶುಪಾಲೆ ಡಾ.ವಿ.ನಿವೇದಿತಾ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !