ಭಾನುವಾರ, ಆಗಸ್ಟ್ 18, 2019
25 °C
‘ಸಾಹಸಾನ್ವೇಷಣೆಯತ್ತ ಯುವ ಪಡೆ’ ರಾಜ್ಯ ಮಟ್ಟದ ಸಮ್ಮೇಳನ

‘ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಸ್ವಂತಿಕೆ ಸಾಧಿಸೋಣ’

Published:
Updated:
Prajavani

ಮೈಸೂರು: ‘ವಿಜ್ಞಾನ–ತಂತ್ರಜ್ಞಾನ ಕ್ಷೇತ್ರಗಳಲ್ಲಿ ಯುವಜನರು ಸಬಲೀಕರಣಗೊಳ್ಳಬೇಕು. ಪಾಶ್ಚಾತ್ಯರು ಸಾಫ್ಟ್‌ವೇರ್, ಕೃತಕ ಬುದ್ದಿಮತ್ತೆ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ನಾವಿನ್ನೂ ಸ್ವಂತಿಕೆ ಸಾಧಿಸಿಲ್ಲ’ ಎಂದು ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವಿದ್ಯಾಶಂಕರ್ ಹೇಳಿದರು.

ನಗರದ ಸರಸ್ವತಿಪುರಂನ ಯೂತ್ ಹಾಸ್ಟೆಲ್‌ನಲ್ಲಿ ಶನಿವಾರ ಆಯೋಜಿಸಿದ್ದ ‘ಸಾಹಸಾನ್ವೇಷಣೆಯತ್ತ ಯುವ ಪಡೆ’ ರಾಜ್ಯ ಮಟ್ಟದ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಶೇ.90ರಷ್ಟು ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸದ್ಬಳಕೆಗೆ ಮುಂದಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಸಮ್ಮೇಳನಾಧ್ಯಕ್ಷ ಡಿ.ಮಾದೇಗೌಡ ಮಾತನಾಡಿ ‘ಯೂತ್ ಹಾಸ್ಟೆಲ್ ಶ್ರೇಯೋಭಿವೃದ್ಧಿಗೆ ಮೈಸೂರಿನ ಕುಲಪತಿಗಳು ಒಂದಾಗಬೇಕು. ಭಾರತದಲ್ಲಿ ಯೂತ್ ಹಾಸ್ಟೆಲ್ ಉಗಮದ ತವರು ಮೈಸೂರು. ಹೀಗಾಗಿ ಮೈಸೂರಿನಲ್ಲಿರುವ ನಾಲ್ಕು ವಿಶ್ವವಿದ್ಯಾನಿಲಯಗಳ ಕುಲಪತಿಗಳು ಒಟ್ಟಾಗಿ ಯೂತ್ ಹಾಸ್ಟೆಲ್‍ನ್ನು ರಾಜ್ಯದಾದ್ಯಂತ ವಿಸ್ತರಿಸಲು ಶ್ರಮಿಸಬೇಕು’ ಎಂದರು.

ಮೈಸೂರಿನ ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಸಹಾಯಕ ನಿರ್ದೇಶಕಿ ಟಿ.ಸಿ.ಪೂರ್ಣಿಮಾ ಮಾತನಾಡಿ ‘ಯುವಜನತೆಯಲ್ಲಿ ನೈತಿಕ ಮೌಲ್ಯ ಬೆಳೆಸುವಲ್ಲಿ ಇಂಥ ಸಮ್ಮೇಳನಗಳು ಸಹಕಾರಿ. ಸಮಷ್ಟಿ ಪ್ರಜ್ಞೆಗೆ ಮುಂದಡಿಯಿಡಲು ಪೂರಕ ವಾತಾವರಣವನ್ನು ಈ ಸಂಸ್ಥೆ ಕಲ್ಪಿಸಲಿದೆ. ಯೂತ್ ಹಾಸ್ಟೆಲ್ ಒಂದು ಚಳವಳಿಯಾಗಿ ರೂಪುಗೊಳ್ಳಬೇಕು’ ಎಂಬ ಆಶಯ ವ್ಯಕ್ತಪಡಿಸಿದರು.

ಮೈಸೂರು ವಿಶವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಮಾತನಾಡಿ ‘ಯೂತ್ ಹಾಸ್ಟೆಲ್ ಸಬಲೀಕರಣ, ಕ್ರೀಡಾ ಇಲಾಖೆಯೊಂದಿಗೆ ಒಡಂಬಡಿಕೆ, ಪರ್ವತಾರೋಹಣ, ಚಾರಣ, ಸಾಹಸಾನ್ವೇಷಣೆ ಮೊದಲಾದ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು ಈ ಸಮ್ಮೇಳನದ ಧ್ಯೇಯೋದ್ದೇಶವಾಗಿದೆ’ ಎಂದು ತಿಳಿಸಿದರು.

ರಾಮಕೃಷ್ಣ ಮಠದ ಮುಕ್ತಿದಾನಂದ ಸ್ವಾಮಿ, ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ರಾಜ್ಯ ಘಟಕದ ಅಧ್ಯಕ್ಷ ಕೆ.ಪುರುಷೋತ್ತಮ್, ಮೈಸೂರು ಘಟಕದ ಅಧ್ಯಕ್ಷ ರವಿಕುಮಾರ್, ಪ್ರೊ.ವಸಂತಮ್ಮ ಪಾಲ್ಗೊಂಡಿದ್ದರು.

Post Comments (+)