ಶುಕ್ರವಾರ, ಅಕ್ಟೋಬರ್ 18, 2019
28 °C
ಸಭಾಂಗಣದ ಒಳಗೂ–ಹೊರಗೂ ಮುಗಿಲು ಮುಟ್ಟಿದ ಯುವ ದಸರಾ ಸಂಭ್ರಮ

ಕುಣಿದು ಕುಪ್ಪಳಿಸಿದ ಯುವ ಸಮೂಹ

Published:
Updated:
Prajavani

ಮೈಸೂರು: ಶತಮಾನದ ಐತಿಹ್ಯ ಹೊಂದಿರುವ ನಗರದ ಮಹಾರಾಜ ಕಾಲೇಜಿನ ಮೈದಾನದಲ್ಲಿ ಮಂಗಳವಾರ ರಾತ್ರಿ ಯುವ ದಸರೆಗೆ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್ ಪಿ.ವಿ.ಸಿಂಧೂ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ ಬೆನ್ನಿಗೆ, ಯುವ ಸಮೂಹದ ಸಂಭ್ರಮ ಮುಗಿಲು ಮುಟ್ಟಿತು.

ಉದ್ಘಾಟನಾ ಸಮಾರಂಭ ಪೂರ್ಣಗೊಂಡು ಸಂಗೀತ ಕಾರ್ಯಕ್ರಮಗಳಿಗೆ ಚಾಲನೆ ಸಿಗುತ್ತಿದ್ದಂತೆ, ಸಭಾಂಗಣದ ಒಳಗೂ–ಹೊರಗೂ ಹರ್ಷೋದ್ಗಾರ ಮೊಳಗಿತು.

ಬಾಲಿವುಡ್ ಗಾಯಕ ಗುರು ರಾಂಧವ ವೇದಿಕೆಗೆ ಬರುತ್ತಿದ್ದಂತೆ ಕರತಾಡನ ಮುಗಿಲು ಮುಟ್ಟಿತು. ಮೈದಾನ ಯುವ ಸಮೂಹದಿಂದ ತುಂಬಿ ತುಳುಕಿತು. ಮೈದಾನದ ಹೊರಭಾಗದಲ್ಲೂ ಯುವಕ–ಯುವತಿಯರು ಜಮಾಯಿಸಿದರು. ಕೆಲ ಯುವತಿಯರು ಕಾಲೇಜಿನ ಮುಚ್ಚಿದ್ದ ಗೇಟ್‌ಗಳನ್ನು ಹತ್ತಿಳಿದು ಧಾವಿಸಿ ಬಂದರು.

ರಾತ್ರಿ 9.40ರ ಆಸುಪಾಸಿಗೆ ಗುರು ರಾಂಧವ ಬಾಲಿವುಡ್‌ ಸಿನಿಮಾಗಳ ಒಂದೊಂದೇ ಹಾಡು ಹಾಡಲಾರಂಭಿಸುತ್ತಿದ್ದಂತೆ, ಯುವಕ–ಯುವತಿಯರು ಹಲವೆಡೆ ಗುಂಪು ಗುಂಪಾಗಿ ನರ್ತಿಸಿದರೆ; ಕೆಲವೆಡೆ ಒಟ್ಟೊಟ್ಟಿಗೆ ನೃತ್ಯ ಮಾಡಿ ಸಂಭ್ರಮಿಸಿದರು. ರಾಂಧವ ಗಾನಸುಧೆ, ಸಂಗೀತದ ಏರಿಳಿತಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು.

ಬೃಹತ್ ಎಲ್‌ಇಡಿ ಪರದೆಗಳ ಮುಂಭಾಗ ಜಮಾಯಿಸಿ, ರಾಂಧವ್ ಗಾನಸುಧೆಗೆ ಪೂರಕವಾಗಿ ತಾವೂ ಹಾಡನ್ನು ಗುನುಗಿದರು. ತಮ್ಮನ್ನೇ ತಾವು ಮರೆತು ನರ್ತನಾ ಲೋಕದಲ್ಲೊಮ್ಮೆ ವಿಹರಿಸಿದರು. ಗುರು ಆಗಾಗ್ಗೆ ಮೈಸೂರು ಎನ್ನುತ್ತಿದ್ದಂತೆ ಜೋರಾಗಿ ಕೇಕೆ ಹಾಕಿ ಬೆಂಬಲಿಸಿದರು.

ರಾತ್ರಿ 10.30 ದಾಟಿದರೂ ಮಹಾರಾಜ ಕಾಲೇಜಿನಲ್ಲಿ ನಡೆದಿದ್ದ ಯುವ ದಸರೆಯತ್ತ ಬರುವವರ ಸಂಖ್ಯೆ ಹೆಚ್ಚಿತ್ತು. ರಸ್ತೆ ಬದಿಯಲ್ಲೇ ತಮ್ಮ ವಾಹನ ನಿಲ್ಲಿಸಿ, ಮೆಚ್ಚಿನ ಗಾಯಕನನ್ನು ನೋಡಲು, ಆತನ ಗಾಯನ ಕೇಳಲು ಕಾತರದಿಂದ ಹೆಜ್ಜೆ ಹಾಕಿ ಮುಗಿಬಿದ್ದ ದೃಶ್ಯಾವಳಿ ಸಹ ಗೋಚರಿಸಿದವು.

ಯುವ ಸಮೂಹದ ಜತೆಗೆ ಸಿನಿ ರಸಿಕರು, ಬಾಲಿವುಡ್‌ ಸಿನಿಮಾ ಪ್ರೇಮಿಗಳು ಕುಟುಂಬ ಸಮೇತರಾಗಿ ಮೈದಾನದಲ್ಲಿ ಜಮಾಯಿಸಿದ್ದರು. ಬಾಲಿವುಡ್‌ ಗಾಯಕನ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಕೂತು ನೋಡಿದವರಿಗಿಂತ, ನಿಂತು ನೋಡಿದವರೇ ಹೆಚ್ಚಿದ್ದರು.

ರಾಂಧವ ತಂಡದ ಪ್ರತಿ ಹಾಡಿಗೂ ನೆರೆದಿದ್ದ ಯುವ ಸಮೂಹ ದಣಿವರಿಯದೆ ಉತ್ಸಾಹದಿಂದ ನರ್ತಿಸಿತು. ತಡರಾತ್ರಿಯಾದರೂ ಕದಲದೆ ಕಾರ್ಯಕ್ರಮ ಮುಗಿಯುವ ತನಕವೂ ಕಾತರದಿಂದ ವೀಕ್ಷಿಸಿತು.

ಆರಂಭದಿಂದ ಅಂತ್ಯದವರೆಗೂ ಯುವ ಸಮೂಹ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನರ್ತನವನ್ನು ನೇರ ಪ್ರಸಾರ ಮಾಡಿತು. ಹಲವರು ವಿಡಿಯೊ ಚಿತ್ರೀಕರಣ ಸಹ ಮಾಡಿಕೊಂಡರು.

Post Comments (+)