ಶುಕ್ರವಾರ, ನವೆಂಬರ್ 22, 2019
20 °C
ನಟ ಗಣೇಶ್ ಹಾಡು, ಡೈಲಾಗ್‌ಗೆ ಕುಣಿದು ಕುಪ್ಪಳಿಸಿದ ಯುವ ಸಮೂಹ

ಯುವ ಸಂಭ್ರಮಕ್ಕೆ ಸಡಗರದ ಚಾಲನೆ

Published:
Updated:
Prajavani

ಮೈಸೂರು: ‘ಅನಿಸುತಿದೆ ಯಾಕೋ ಇಂದು ನೀನೇನೇ ನನ್ನವಳೆಂದು... ಕೊಲ್ಲು ಹುಡುಗಿ ಒಮ್ಮೆ ನನ್ನಾ ಹಾಗೇ ಸುಮ್ಮನೇ...’ ಎಂದು ವೇದಿಕೆಯಲ್ಲಿ ಗಾನಸುಧೆ ಹರಿಸುತ್ತಿದ್ದಂತೆ ಬಯಲು ರಂಗಮಂದಿರದಲ್ಲಿ ಮಿಂಚಿನ ಸಂಚಾರ, ಯುವಕ-ಯುವತಿಯರ ಮಧುರ ಕೂಗು ಮುಗಿಲು ಮುಟ್ಟಿತು.

ನಾಡಹಬ್ಬ ದಸರಾ ನಿಮಿತ್ತ ಮಂಗಳವಾರ ರಾತ್ರಿ ನಡೆದ ಯುವ ಸಂಭ್ರಮದ ಉದ್ಘಾಟನೆ ಕಾರ್ಯಕ್ರಮಕ್ಕೆ ಬಣ್ಣದ ಮೆರುಗು. ಅದಕ್ಕೆ ಮತ್ತಷ್ಟು ರಂಗು ತುಂಬಿದ್ದು ‘ಮುಂಗಾರು ಮಳೆ’ ಖ್ಯಾತಿಯ ನಟ ಗಣೇಶ್.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಜೊತೆ ಕೈ ಬೀಸುತ್ತಲೇ ವೇದಿಕೆ ಮೇಲೇರಿದ ಅವರು, ಮಾತಿನ ಮೂಲಕವೇ ಕಾಲೇಜು ವಿದ್ಯಾರ್ಥಿಗಳನ್ನು ರಂಜಿಸಿದರು. ತಣ್ಣಗೆ ಬೀಸಿ ಬರುತ್ತಿದ್ದ ತಂಗಾಳಿಯಲ್ಲಿ ಯುವ ಮನಸ್ಸುಗಳಿಗೆ ಕಚಗುಳಿ ಇಟ್ಟರು. ನಗಾರಿ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ 27ರಂದು ಬಿಡುಗಡೆಯಾಗಲಿರುವ ತಮ್ಮ ನಟನೆಯ 'ಗೀತಾ' ಸಿನಿಮಾದ ಡೈಲಾಗ್ ಹರಿಸಿದರು. 'ಕರ್ನಾಟಕದಲ್ಲಿ ಕನ್ನಡಿಗನೇ ಯಜಮಾನ, ಕನ್ನಡಿಗನೇ ಸಾರ್ವಭೌಮ' ಎಂದಾಗ ಜೋರು ಚಪ್ಪಾಳೆ. ಗೋಕಾಕ್‌ ಚಳವಳಿಯ ಕಥೆ ಹಂದರ ಹೊಂದಿರುವ ಸಿನಿಮಾದ ಟ್ರೇಲರ್‌ ಅನ್ನು ಕೂಡ ವೇದಿಕೆಯ ಪರದೆ ಮೇಲೆ ಪ್ರದರ್ಶಿಸಲಾಯಿತು.

ಅಷ್ಟಕ್ಕೆ ನಿಲ್ಲಲಿಲ್ಲ. ಶಂಕರನಾಗ್‌ ಅಭಿನಯದ ‘ಗೀತಾ’ ಸಿನಿಮಾದ ‘ನಯನವ ಸೆಳೆವ ಗೀತಾ, ನನ್ನ ಕನಸಲಿ ಕುಣಿದ ಗೀತಾ’ ಹಾಡು ಹೇಳಿ ರಂಜಿಸಿದರು. ಮುಂಗಾರು ಮಳೆಯ ‘ಈ ದಿಲ್, ಹೃದಯ, ಹಾರ್ಟ್‌ ಅಂತಾರಲ್ಲ ಅದನ್‌ ಕೈ ಹಾಕಿ ಪರ ಪರ ಅಂತಾ ಕೆರ್ಕೊಂಡು ಬಿಟ್ಟಿದಿನ್ರಿ. ನನ್ನ ಹೃದಯ ಹಾಳಾಗೋಯ್ತು...’ ಎಂಬ ಡೈಲಾಗ್ ಹೇಳಿ ಯುವ ಮನಸ್ಸುಗಳ ಹೃದಯ ಗೆದ್ದರು.

'ಕೊಲ್ಲು ಹುಡುಗಿ ಒಮ್ಮೆ ನನ್ನಾ' ಎನ್ನುತ್ತಾ ಹುಡುಗಿಯರ ಕೈಯಲ್ಲಿ ' ಹಾಗೇ ಸುಮ್ಮನೇ' ಎಂದು ಹೇಳಿಸಿದರು.

'ದೊಡ್ಡ ಕನಸು ಕಾಣಬೇಕು. ಆ ಕನಸು ಖಂಡಿತ ಈಡೇರುತ್ತೆ. ಗ್ರಾಮೀಣ ಪ್ರದೇಶದಲ್ಲಿ ಬೆಳೆದ ನಾನು ಕೂಡ ನಾಯಕನಾಗುವ ಕನಸು ಕಂಡು ಈ ಎತ್ತರಕ್ಕೆ ಬೆಳೆದಿದ್ದೇನೆ. ನಿಮ್ಮ ಮುಂದೆ ಬಂದು ನಿಂತಿದ್ದೇನೆ' ಎಂದು ಸ್ಫೂರ್ತಿ ತುಂಬಿದರು.

ತಾವು ಬಿಡಿಸಿರುವ ನಟನ ಚಿತ್ರವನ್ನು ಅಭಿಮಾನಿಯೊಬ್ಬರು ಗಣೇಶ್‌ ಅವರಿಗೆ ಉಡುಗೊರೆಯಾಗಿ ನೀಡಿದರು.

ಬಳಿಕ ಆರಂಭವಾಗಿದ್ದು ಕಾಲೇಜು ವಿದ್ಯಾರ್ಥಿಗಳ ನರ್ತನ. ಅಂಗವಿಕಲ ಮಕ್ಕಳು ನಡೆಸಿಕೊಟ್ಟ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಜೀವನ ಕುರಿತ ನೃತ್ಯ ಪ್ರೇಕ್ಷಕರನ್ನು ಭಾವನಾ ಲೋಕಕ್ಕೆ ಕರೆದೊಯ್ಯಿತು. ವಿವಿಧ 20 ಕಾಲೇಜು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.

 

ಪ್ರತಿಕ್ರಿಯಿಸಿ (+)